VyasaOnline ದೈವ-ಪುರುಷಕಾರ ಬಲಾಬಲ: ವಸಿಷ್ಠ-ಬ್ರಹ್ಮರ ಸಂವಾದ

  • Thread starter Ramesh Banadakoppa Manjappa
  • Start date
R

Ramesh Banadakoppa Manjappa

Guest

ದೈವ-ಪುರುಷಕಾರ ಬಲಾಬಲ: ವಸಿಷ್ಠ-ಬ್ರಹ್ಮರ ಸಂವಾದ


ಓಂ' ಬಗ್ಗೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳು | things-you-dint-know-about-om - Kannada BoldSky


ದೈವ ಮತ್ತು ಮನುಷ್ಯ ಪ್ರಯತ್ನಗಳಲ್ಲಿ ಯಾವುದು ಶ್ರೇಷ್ಠ ಎಂಬ ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ವಸಿಷ್ಠ-ಬ್ರಹ್ಮರ ಸಂವಾದವನ್ನು ಉದಾಹರಿಸಿ ಎರಡೂ ಪರಸ್ಪರ ಅವಲಂಬಿಸಿವೆ ಎನ್ನುತ್ತಾನೆ. ಇದು ಅನುಶಾನಸಪರ್ವದ ದಾನಧರ್ಮಪರ್ವದ ಅಧ್ಯಾಯ 6ರಲ್ಲಿ ಬರುತ್ತದೆ.

***

ಯುಧಿಷ್ಠಿರನು ಹೇಳಿದನು:

“ಪಿತಾಮಹ! ಮಹಾಪ್ರಾಜ್ಞ! ಸರ್ವಶಾಸ್ತ್ರವಿಶಾರದ! ದೈವಾನುಕೂಲ ಮತ್ತು ಪುರುಷಪ್ರಯತ್ನ ಇವೆರಡರಲ್ಲಿ ಯಾವುದು ಶ್ರೇಷ್ಠತರವಾದುದು?”

ಭೀಷ್ಮನು ಹೇಳಿದನು:

“ಯುಧಿಷ್ಠಿರ! ಇದರ ಕುರಿತು ಪುರಾತನ ಇತಿಹಾಸವಾಗಿರುವ ವಸಿಷ್ಠ ಮತ್ತು ಬ್ರಹ್ಮರ ಸಂವಾದವನ್ನು ಉದಾಹರಿಸುತ್ತಾರೆ.

***

ಹಿಂದೆ ವಸಿಷ್ಠನು “ದೈವ ಮತ್ತು ಮಾನುಷ ಪ್ರಯತ್ನಗಳಲ್ಲಿ ಯಾವುದು ಶ್ರೇಷ್ಠ?” ಎಂದು ಭಗವಾನ್ ಪಿತಾಮಹನನ್ನು ಪ್ರಶ್ನಿಸಿದನು. ಆಗ ದೇವದೇವ ಪಿತಾಮಹ ಪದ್ಮೋದ್ಭವನು ಕಾರಣಭೂಷಿತವಾದ ಈ ಮಧುರ ವಾಕ್ಯವನ್ನು ಹೇಳಿದನು:

“ಬೀಜವಿಲ್ಲದೇ ಯಾವುದೂ ಹುಟ್ಟುವುದಿಲ್ಲ. ಬೀಜವಿಲ್ಲದೇ ಫಲವಾಗುವುದಿಲ್ಲ. ಬೀಜದಿಂದ ಬೀಜವು ಉತ್ಪತ್ತಿಯಾಗುತ್ತದೆ. ಆದುದರಿಂದ ಬೀಜದಿಂದಲೇ ಫಲವು ಉಂಟಾಗುತ್ತದೆ ಎಂದು ತಿಳಿದಿದೆ. ಕೃಷಿಕನು ಹೊಲದಲ್ಲಿ ಯಾವ ರೀತಿಯ ಬೀಜವನ್ನು ಬಿತ್ತುತ್ತಾನೋ ಅಂತಹುದೇ ಫಸಲನ್ನು ಪಡೆಯುತ್ತಾನೆ. ಹಾಗೆಯೇ ಸುಕೃತ-ದುಷ್ಕೃತಗಳಿಂದ ಅದೇ ರೀತಿಯ ಫಲವು ದೊರೆಯುತ್ತದೆ. ಬೀಜವಿಲ್ಲದೇ ಹೊಲವು ಹೇಗೆ ನಿಷ್ಫಲವಾಗುವುದೋ ಹಾಗೆ ಪುರುಷಕಾರ್ಯದ ವಿನಾ ದೈವವು ಸಿದ್ಧಿಯಾಗುವುದಿಲ್ಲ. ಹೊಲವನ್ನು ಪುರುಷಪ್ರಯತ್ನಕ್ಕೂ ದೈವವನ್ನು ಬೀಜಕ್ಕೂ ಹೋಲಿಸುತ್ತಾರೆ. ಹೊಲ ಮತ್ತು ಬೀಜಗಳ ಸಮಾಯೋಗದಿಂದ ಸಸ್ಯವು ಹುಟ್ಟುತ್ತದೆ.

ಕರ್ಮಗಳ ಫಲವನ್ನು – ಸುಕೃತವಾಗಿರಲಿ ಅಥವಾ ದುಷ್ಕೃತವಾಗಿರಲಿ – ಸ್ವಯಂ ಕಾರಕನೇ ಪಡೆದುಕೊಳ್ಳುತ್ತಾನೆ ಎನ್ನುವುದು ಲೋಕದಲ್ಲಿ ಪ್ರತ್ಯಕ್ಷವಾಗಿ ಕಾಣುತ್ತದೆ. ಶುಭ ಕರ್ಮಗಳಿಂದ ಸುಖ ಮತ್ತು ಪಾಪ ಕರ್ಮಗಳಿಂದ ದುಃಖ. ಮಾಡಿದುದೆಲ್ಲವುಗಳ ಫಲವು ದೊರೆಯುತ್ತದೆ. ಏನನ್ನೂ ಮಾಡದೇ ಇರುವವನಿಗೆ ಯಾವ ಫಲವೂ ದೊರಕುವುದಿಲ್ಲ. ಕರ್ಮಗಳನ್ನು ಮಾಡುವವನು ಸದಾ ಭಾಗ್ಯಯುಕ್ತವಾದ ಪ್ರತಿಷ್ಠೆಯನ್ನು ಪಡೆಯುತ್ತಾನೆ. ಕರ್ಮಗಳನ್ನು ಮಾಡದವನು ಭ್ರಷ್ಟನಾಗಿ ಗಾಯದ ಮೇಲೆ ಉಪ್ಪು ಸುರಿದುಕೊಂಡವನ ಪರಿಸ್ಥಿತಿಯನ್ನು ಪಡೆದುಕೊಳ್ಳುತ್ತಾನೆ. ತಪಸ್ಸಿನಿಂದ ರೂಪಸೌಭಾಗ್ಯ ಮತ್ತು ವಿವಿಧ ರತ್ನಗಳನ್ನು ಪಡೆದುಕೊಳ್ಳಬಹುದು. ಕರ್ಮದಿಂದ ಸರ್ವವೂ ದೊರೆಯುತ್ತದೆ. ಆದರೆ ಏನನ್ನೂ ಮಾಡದೇ ಇರುವವನಿಗೆ ದೈವಾನುಕೂಲವೂ ಆಗುವುದಿಲ್ಲ.

ಹಾಗೆಯೇ ಸ್ವರ್ಗ, ಭೋಗ, ನಿಷ್ಠೆ ಹಾಗೂ ಬುದ್ಧಿವಂತಿಕೆ ಎಲ್ಲವನ್ನೂ ಪುರುಷನು ಇಷ್ಟಪಟ್ಟು ಮಾಡುವ ಕಾರ್ಯಗಳಿಂದ ಪಡೆದುಕೊಳ್ಳಬಹುದು. ನಕ್ಷತ್ರಗಳು, ದೇವತೆಗಳು, ನಾಗರು, ಯಕ್ಷರು, ಚಂದ್ರ-ಸೂರ್ಯ-ವಾಯುಗಳು ಎಲ್ಲರೂ ಪುರುಷ ಪ್ರಯತ್ನದಿಂದಲೇ ಮನುಷ್ಯತ್ವದಿಂದ ದೇವತ್ವವನ್ನು ಪಡೆದುಕೊಂಡರು. ಕರ್ಮಗಳನ್ನು ಮಾಡದೇ ಇರುವವರಿಗೆ ಅರ್ಥವಾಗಲೀ, ಮಿತ್ರವರ್ಗವಾಗಲೀ, ಅಥವಾ ಐಶ್ವರ್ಯವಾಗಲೀ, ಉತ್ತಮ ಕುಲದಲ್ಲಿ ಜನ್ಮವಾಗಲೀ, ಮತ್ತು ಶ್ರೀಯಾಗಲೀ ಭೋಗಿಸಲು ದುರ್ಲಭವಾಗುತ್ತದೆ. ಶೌಚದಿಂದ ವಿಪ್ರನೂ, ವಿಕ್ರಮದಿಂದ ಕ್ಷತ್ರಿಯನೂ, ಪುರುಷಪ್ರಯತ್ನದಿಂದ ವೈಶ್ಯನೂ ಮತ್ತು ಶುಶ್ರೂಷೆಯಿಂದ ಶೂದ್ರನೂ ಸಂಪತ್ತನ್ನು ಪಡೆದುಕೊಳ್ಳುತ್ತಾರೆ. ದಾನಮಾಡದವನನ್ನು, ನಪುಂಸಕನನ್ನು, ಕೆಲಸಮಾಡದೇ ಇರುವವನನ್ನು, ಕರ್ಮಶೀಲನಲ್ಲದವನನ್ನು, ಶೂರನಲ್ಲದವನನ್ನು ಮತ್ತು ತಪಸ್ವಿಯಲ್ಲದವನನ್ನು ಐಶ್ವರ್ಯವು ಸೇವಿಸುವುದಿಲ್ಲ. ಮೂರು ಲೋಕಗಳ, ದೈತ್ಯರು ಮತ್ತು ಸರ್ವ ದೇವತೆಗಳ ಸೃಷ್ಟನಾದ ಭಗವಾನ್ ವಿಷ್ಣುವೇ ಸಮುದ್ರದಲ್ಲಿ ತಪಸ್ಸನ್ನು ತಪಿಸುತ್ತಿದ್ದಾನೆ. ಒಂದು ವೇಳೆ ಕರ್ಮಗಳಿಗೆ ಫಲವೆಂಬುದೇ ಇಲ್ಲದಾಗಿದ್ದರೆ ಮತ್ತು ಸರ್ವ ಕರ್ಮಗಳು ನಿಷ್ಫಲಗೊಳ್ಳುತ್ತಿದ್ದರೆ ಲೋಕವು ದೈವವನ್ನೇ ಅವಲಂಬಿಸಿ ಉದಾಸೀನವಾಗುತ್ತಿತ್ತು ತಾನೇ?

ಮನುಷ್ಯ ಕರ್ಮಗಳನ್ನು ಮಾಡದೇ ದೈವವನ್ನೇ ಅವಲಂಬಿಸಿರುವವನು ಪತ್ನಿಯನ್ನು ಸಮೀಪಿಸಿ ನಪುಂಸಕನಾಗುವ ಪತಿಯಂತೆ ವೃಥಾ ಶ್ರಮಪಡುವವನಾಗುತ್ತಾನೆ. ದೇವಲೋಕದಲ್ಲಿ ಸ್ವಲ್ಪದರಿಂದಲೇ ಭಯವುಂಟಾಗುವಂತೆ ಮನುಷ್ಯಲೋಕದಲ್ಲಿ ಶುಭಾಶುಭ ಕರ್ಮಗಳ ಭಯವು ಅಷ್ಟೊಂದು ಇರುವುದಿಲ್ಲ. ಪುರುಷನ ಕರ್ಮಫಲಗಳು ದೈವಾನುಕೂಲವನ್ನೇ ಅನುಸರಿಸಿ ದೊರೆಯುತ್ತವೆ. ಏನನ್ನೂ ಮಾಡದೇ ಇರುವವನಿಗೆ ದೈವವು ಏನನ್ನೂ ಕೊಡಲು ಶಕ್ಯವಾಗುವುದಿಲ್ಲ. ದೇವತೆಗಳ ಸ್ಥಾನಗಳೂ ಅನಿತ್ಯವೆಂದು ಕಾಣುತ್ತಿರುವಾಗ ಕರ್ಮಗಳಿಲ್ಲದೇ ದೈವವು ಸದಾ ತನ್ನ ಸ್ಥಾನದಲ್ಲಿಯೇ ಸ್ಥಾಪಿಸಿರಲು ಹೇಗೆ ಸಾಧ್ಯ? ಮನುಷ್ಯ ಪ್ರಯತ್ನವನ್ನು ದೇವತೆಗಳೂ ಪ್ರೋತ್ಸಾಹಿಸುವುದಿಲ್ಲ. ಮನುಷ್ಯರು ತಮ್ಮಂತೆ ಆಗಿ ಬಿಡುತ್ತಾರೆ ಎನ್ನುವ ಸಂಶಯದಿಂದ ಅವರು ಅವನ ಪ್ರಯತ್ನಗಳಿಗೆ ವಿಘ್ನಗಳನ್ನುಂಟುಮಾಡುತ್ತಲೇ ಇರುತ್ತಾರೆ. ಋಷಿಗಳಿಗೂ ದೇವತೆಗಳಿಗೂ ಸದಾ ಕಲಹವಾಗುತ್ತಿರುತ್ತದೆ. “ಯಾರ ಮಾತಿನಿಂದ ದೈವವು ನಿಷ್ಪಲವಾಗುತ್ತದೆ? ಯಾವಾಗ ದೈವವು ತನ್ನ ಕಾರ್ಯವನ್ನು ಪ್ರಾರಂಭಿಸುತ್ತದೆ? ದೈವದ ಉತ್ಪತ್ತಿಯು ಹೇಗೆ ಮತ್ತು ದೈವವು ಹೇಗೆ ಕೆಲಸಮಾಡುತ್ತದೆ?” ಹೀಗೆ ದೇವತೆಗಳಲ್ಲಿಯೂ ಕೂಡ ಅನೇಕ ಜಿಜ್ಞಾಸೆಗಳು ನಡೆಯುತ್ತಿರುತ್ತವೆ. ಮನುಷ್ಯನು ತನಗೆ ತಾನೇ ಬಂಧುವು. ತನಗೆ ತಾನೇ ಶತ್ರುವು. ತನ್ನ ಸತ್ಕರ್ಮ-ದುಷ್ಕರ್ಮಗಳಿಗೆ ತಾನೇ ಸಾಕ್ಷಿಯಾಗಿರುತ್ತಾನೆ. ಮಾಡುವ ಕರ್ಮವು ಸ್ವಲ್ಪ ನ್ಯೂನತೆಯಿಂದ ಕೂಡಿದ್ದರೂ ಕಾರ್ಯವನ್ನು ಮುಂದುವರಿಸಿಕೊಂಡು ಹೋದರೆ ಅದು ಸಿದ್ಧಿಯಾಗುತ್ತದೆ.

ಸುಕೃತವನ್ನು ಮಾಡುವುದರಿಂದ ದುಷ್ಕೃತಗಳು ಯಥಾರ್ಥ ಫಲವನ್ನು ನೀಡುವುದಿಲ್ಲ. ದೇವತೆಗಳೂ ಪುಣ್ಯಕ್ಕೆ ಶರಣು ಹೋಗುತ್ತಾರೆ. ಎಲ್ಲವೂ ಪುಣ್ಯದಿಂದಲೇ ದೊರೆಯುತ್ತದೆ. ಪುಣ್ಯಶೀಲ ನರರಿಗೆ ದೈವವು ಏನು ಮಾಡಬಲ್ಲದು? ಹಿಂದೆ ಯಯಾತಿಯು ಪುಣ್ಯದಿಂದ ಭ್ರಷ್ಟನಾಗಿ ತಳ್ಳಲ್ಪಟ್ಟು ಭೂಮಿಯ ಮೇಲೆ ಬೀಳಲು ಪುಣ್ಯಕರ್ಮಗಳನ್ನು ಮಾಡಿದ ಮಗಳ ಮಕ್ಕಳಿಂದಾಗಿ ಪುನಃ ಸ್ವರ್ಗವನ್ನೇರಿದನು. ಹಿಂದೆ ಐಲ ಎಂದು ವಿಖ್ಯಾತನಾದ ಪುರೂರವ ರಾಜರ್ಷಿ ಮಹೀಪತಿಯು ದ್ವಿಜರು ಹೇಳಿದುದನ್ನು ಅನುಸರಿಸಿ ಸ್ವರ್ಗವನ್ನು ಪಡೆದುಕೊಂಡನು. ಅಶ್ವಮೇಧವೇ ಮೊದಲಾದ ಯಜ್ಞಗಳಿಂದ ಸತ್ಕೃತನಾಗಿದ್ದ ಕೋಸಲಾಧಿಪ ಸೌದಾಸನು ಮಹರ್ಷಿ ವಸಿಷ್ಠನ ಶಾಪದಿಂದ ನರಭಕ್ಷಕನಾದನು. ಮುನಿಪುತ್ರರೂ ಧನುರ್ಧರರೂ ಆದ ಅಶ್ವತ್ಥಾಮ ಮತ್ತು ರಾಮರು ತಾವು ಮಾಡಿದ ಸುಕೃತ ಕರ್ಮಗಳಿಂದ ಚಿರಂಜೀವಿಗಳಾಗಿ ಸ್ವರ್ಗಲೋಕಕ್ಕೇ ಹೋಗುವುದಿಲ್ಲ. ನೂರು ಯಜ್ಞ-ಇಷ್ಟಿಗಳನ್ನು ಮಾಡಿ ಎರಡನೇ ವಾಸವನೋ ಎಂಬಂತಿದ್ದ ಉಪಚರ ವಸುವು ಒಂದೇ ಒಂದು ಸುಳ್ಳಿನಿಂದಾಗಿ ರಸಾತಲ ತಲಕ್ಕೆ ಹೋದನು. ವಿರೋಚನನ ಮಗ ಬಲಿಯನ್ನು ದೇವತೆಗಳು ಧರ್ಮಪಾಶದಿಂದ ಬಂಧಿಸಿದರು ಮತ್ತು ವಿಷ್ಣುವಿನ ಪುರುಷಪ್ರಯತ್ನದಿಂದ ಅವನು ಪಾತಾಲಶಯನನಾದನು. ದ್ವಿಜಸ್ತ್ರೀಯರನ್ನು ವಧಿಸಿದ್ದರೂ ಜನಮೇಜಯನು ಶಕ್ರನ ಚರಣಗಳ ಆಶ್ರಯವನ್ನು ಪಡೆದು ಸ್ವರ್ಗಕ್ಕೆ ಹೊರಟುಹೋದನು. ದೈವವು ಅವನನ್ನು ತಡೆಯಿತೇನು?

ವಿಪ್ರರ್ಷಿ ವೈಶಂಪಾಯನನು ಅಜ್ಞಾನದಿಂದ ಬ್ರಾಹ್ಮಣನನ್ನು ಸಂಹರಿಸಿ ಬಾಲವಧೆಯ ಪಾಪದಿಂದಲೂ ಲಿಪ್ತರಾಗಿದ್ದನು. ದೈವವು ಅವನನ್ನು ತಡೆಯಿತೇನು? ಹಿಂದೆ ರಾಜರ್ಷಿ ನೃಗನು ಮಹಾಮಖದಲ್ಲಿ ಬ್ರಾಹ್ಮಣರಿಗೆ ಗೋದಾನವನ್ನು ನೀಡುತ್ತಿದ್ದಾಗ ಮಿಥ್ಯಾಚಾರವನ್ನಾಚರಿಸಿದನು[1]. ಅವನಿಗೆ ಹೆಂಟೇಗೊದ್ದದ ಯೋನಿಯಲ್ಲಿ ಹುಟ್ಟಬೇಕಾಯಿತು. ರಾಜರ್ಷಿ ಧುಂಧುಮಾರನು ಯಜ್ಞಗಳನ್ನು ಮಾಡುತ್ತಲೇ ವೃದ್ಧನಾದನು. ಆಗ ದೇವತೆಗಳು ಪ್ರೀತರಾಗಿ ಕೊಟ್ಟ ವರವನ್ನೂ ತ್ಯಜಿಸಿ ಅವನು ಗಿರಿವ್ರಜದಲ್ಲಿ ಸುಖವಾಗಿ ಮಲಗಿಬಿಟ್ಟನು! ಮಹಾಬಲ ಧಾರ್ತರಾಷ್ಟ್ರರು ಪಾಂಡವರ ರಾಜ್ಯವನ್ನು ಅಪಹರಿಸಿದರು. ಪುನಃ ಅವರು ಅದನ್ನು ಹಿಂದೆ ಪಡೆದುಕೊಂಡರು. ಇದು ದೈವದ ಭುಜಾಶ್ರಯದಿಂದಲ್ಲದೇ ಆಗಲಿಲ್ಲ. ತಪೋನಿಯಮ ಸಂಯುಕ್ತರಾದ ಸಂಶಿತವ್ರತ ಮುನಿಗಳು ದೈವಬಲದಿಂದ ಶಪಿಸುವರೇನು? ತಮ್ಮದೇ ಕರ್ಮಗಳ ಬಲದಿಂದ ತಾನೇ?

ಅತಿಶಯ ಪುಣ್ಯಕಾರ್ಯವನ್ನು ಮಾಡುವವನು ಲೋಕದಲ್ಲಿ ದುರ್ಲಭವಾದ ಸರ್ವವನ್ನೂ ಪಡೆದು ಪಾಪಗಳನ್ನು ಕಳೆದುಕೊಳ್ಳುತ್ತಾನೆ. ಲೋಭ-ಮೋಹಗಳಿಂದ ಸಂಪನ್ನನಾದ ನರನನ್ನು ದೈವವೂ ಕೂಡ ರಕ್ಷಿಸುವುದಿಲ್ಲ. ಅಗ್ನಿಯು ಸೂಕ್ಷ್ಮವೇ ಆಗಿದ್ದರೂ ಗಾಳಿಯಿಂದ ಮೇಲೆದ್ದರೆ ಮಹಾ ಅಗ್ನಿಯಾಗುವಂತೆ ಕರ್ಮದಿಂದ ಮೇಲೆಬ್ಬಿಸಲ್ಪಟ್ಟ ದೈವವು ಚೆನ್ನಾಗಿ ವೃದ್ಧಿಯಾಗುತ್ತದೆ. ಎಣ್ಣೆಯು ಮುಗಿದುಹೋಗಲು ದೀಪವೂ ಆರಿಹೋಗುವಂತೆ ಕರ್ಮಗಳು ಕ್ಷಯವಾಗುತ್ತಿದ್ದಂತೆ ದೈವಸಹಾಯವೂ ಇಲ್ಲವಾಗುತ್ತದೆ. ವಿಪುಲ ಧನವನ್ನೂ, ಭೋಗವಸ್ತುಗಳನ್ನೂ, ಮತ್ತು ಸ್ತ್ರೀಯರನ್ನು ಹೊಂದಿದ್ದರೂ ಕರ್ಮಹೀನ ಪುರುಷನು ಅವುಗಳನ್ನು ಭೋಗಿಸಲು ಶಕ್ತನಾಗುವುದಿಲ್ಲ. ಆದರೆ ಕರ್ಮಗಳಲ್ಲಿ ನಿರತನಾದ ಸಾಧುವು ದೇವತೆಗಳಿಂದ ರಕ್ಷಿಸಲ್ಪಟ್ಟ ಐಶ್ವರ್ಯವನ್ನೂ ಪಡೆದುಕೊಂಡು ಭೋಗಿಸುತ್ತಾನೆ. ಅವನು ಮನುಜಲೋಕದಲ್ಲಿ ದೇವಲೋಕದಲ್ಲಿರುವವರಿಗಿಂತಲೂ ವಿಶಿಷ್ಟನಾಗುತ್ತಾನೆ. ಆ ಮನುಷ್ಯನ ಮನೆಗಳು ಬಹುತರನಾಗಿ ಸುಸಮೃದ್ಧವಾಗಿರುತ್ತದೆ. ಆದರೆ ಕರ್ಮಗಳನ್ನು ತ್ಯಜಿಸಿರುವವನ ಮನೆಯು ಬಹುವಿಧವಾದ ಸಂಪತ್ತಿನಿಂದ ಕೂಡಿದ್ದರೂ ದೇವತೆಗಳಿಗೆ ಶ್ಮಶಾನ ಸದೃಶವಾಗಿ ಕಾಣುತ್ತದೆ. ದುರ್ಮಾರ್ಗದಲ್ಲಿ ಹೋಗುತ್ತಿರುವವನನ್ನು ಸನ್ಮಾರ್ಗದಲ್ಲಿ ತರುವ ಪ್ರಭುತ್ವವು ದೈವಕ್ಕಿರುವುದಿಲ್ಲ. ಗುರುವನ್ನು ಮುಂದೆಮಾಡಿಕೊಂಡು ಶಿಷ್ಯನು ಹೋಗುವಂತೆ ದೈವವು ಕರ್ಮದ ಹಿಂದೆಯೇ ಹೋಗುತ್ತಿರುತ್ತದೆ. ಪುರುಷನ ಸಂಚಿತ ಕರ್ಮಗಳೇ ದೈವವಾಗಿ ಅಲ್ಲಿಂದಿಲ್ಲಿಗೆ ಕೊಂಡೊಯ್ಯುತ್ತಿರುತ್ತದೆ. ಮುನಿಸತ್ತಮ! ಪುರುಷಕರ್ಮಗಳ ಫಲವನ್ನು ಸದಾ ಕಾಣುತ್ತಿರುವ ನಾನು ತತ್ತ್ವತಃ ಎಲ್ಲವನ್ನೂ ಹೇಳಿದ್ದೇನೆ. ದೈವಬಲದ ಉದಯದಿಂದ ಪ್ರಾರಂಭಿಸಿದ ಕರ್ಮದಿಂದ ಮತ್ತು ವಿಧಿವತ್ತಾಗಿ ಮಾಡಿದ ಕರ್ಮದಿಂದ ಸ್ವರ್ಗಮಾರ್ಗವನ್ನು ಪಡೆದುಕೊಳ್ಳಬಹುದು.”

***

[1] ನೃಗನು ಗೋದಾನ ಮಾಡುವಾಗ ಒಂದೇ ಹಸುವನ್ನು ಎರಡು ಬಾರಿ ದಾರೆಯೆರೆದು ಕೊಟ್ಟ ಪಾಪವನ್ನು ಮಾಡಿದನೆಂದಿದೆ.

The other spiritual discourses in Mahabharata (Kannada):

  1. ತೀರ್ಥಯಾತ್ರಾಮಹಾತ್ಮೆ: ಭೀಷ್ಮ-ಪುಲಸ್ತ್ಯರ ಸಂವಾದ
  2. ಧೌಮ್ಯನು ಯುಧಿಷ್ಠಿರನಿಗೆ ತೀರ್ಥಯಾತಾಕ್ಷೇತ್ರಗಳನ್ನು ವರ್ಣಿಸಿದುದು
  3. ಯುಧಿಷ್ಠಿರ-ಮಾರ್ಕಂಡೇಯ ಸಂವಾದ
  4. ಸರಸ್ವತೀಗೀತೆ
  5. ಕೌಶಿಕ-ಪತಿವ್ರತೆ-ಧರ್ಮವ್ಯಾಧ
  6. ವಿದುರನೀತಿ
  7. ಸನತ್ಸುಜಾತಿಯ
  8. ಭೌಮಗುಣಕಥನ
  9. ಶ್ರೀಮದ್ಭಗವದ್ಗೀತಾ
  10. ಸೇನಜಿತ್-ಬ್ರಾಹ್ಮಣ ಸಂವಾದ; ಪಿಂಗಲ ಗೀತೆ
  11. ಪಿತಾಪುತ್ರ ಸಂವಾದ
  12. ಶಮ್ಯಾಕಗೀತೆ
  13. ಮಂಕಿಗೀತೆ
  14. ಭೃಗು-ಭರದ್ವಾಜ ಸಂವಾದ
  15. ಸಾಂಖ್ಯ ಯೋಗ: ಯಾಜ್ಞವಲ್ಕ್ಯ-ಜನಕ ಸಂವಾದ

Continue reading...
 
Top