VyasaOnline ಪುರೂರವ-ಪವನಸಂವಾದ

  • Thread starter Ramesh Banadakoppa Manjappa
  • Start date
R

Ramesh Banadakoppa Manjappa

Guest

ಪುರೂರವ-ಪವನಸಂವಾದ


ಓಂ' ಬಗ್ಗೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳು | things-you-dint-know-about-om - Kannada BoldSky


ಪುರೂರವ ಮತ್ತು ಪವನರ ಸಂವಾದದ ಮೂಲಕ ಭೀಷ್ಮನು ಯುಧಿಷ್ಠಿರನಿಗೆ ರಾಜಪುರೋಹಿತನ ಮಹತ್ವವನ್ನು ವಿವರಿಸಿದುದು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 73ರಲ್ಲಿ ಬರುತ್ತದೆ.

***

ಭೀಷ್ಮನು ಹೇಳಿದನು:

“ರಾಜನ್! ರಾಜನ ಸತ್ಕರ್ಮಗಳನ್ನು ರಕ್ಷಿಸುವುದು ಮತ್ತು ಅವನ ದುಷ್ಕರ್ಮಗಳನ್ನು ಕ್ಷೀಣಿಸುವುದೇ ರಾಜಪುರೋಹಿತನ ಕರ್ತವ್ಯ. ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾಗಿರುವ ಇಲನ ಮಗ ಪುರೂರವ ಮತ್ತು ವಾಯುವಿನ ನಡುವೆ ನಡೆದ ಸಂವಾದವನ್ನು ಉದಾಹರಿಸುತ್ತಾರೆ.

***

ಐಲನು ಹೇಳಿದನು:

“ಬ್ರಾಹ್ಮಣರು ಎಲ್ಲಿಂದ ಹುಟ್ಟಿದರು? ಉಳಿದ ಮೂರು ವರ್ಣದವರೂ ಎಲ್ಲಿಂದ ಹುಟ್ಟಿದವು? ಯಾವ ಕಾರಣದಿಂದ ಬ್ರಾಹ್ಮಣನು ಉಳಿದ ಮೂರು ವರ್ಣದವರಿಗಿಂತಲೂ ಶ್ರೇಷ್ಠನೆನಿಸಿಕೊಂಡಿದ್ದಾನೆ? ಅದನ್ನು ನನಗೆ ಸ್ಪಷ್ಟೀಕರಿಸು.”

ವಾಯುವು ಹೇಳಿದನು:

“ರಾಜಸತ್ತಮ! ಬ್ರಾಹ್ಮಣನು ಬ್ರಹ್ಮನ ಮುಖದಿಂದ ಹುಟ್ಟಿದನು. ಅವನ ಎರಡು ಬಾಹುಗಳಿಂದ ಕ್ಷತ್ರಿಯನು ಹುಟ್ಟಿದನು ಮತ್ತು ತೊಡೆಗಳಿಂದ ವೈಶ್ಯನು ಹುಟ್ಟಿದನು ಎಂದು ಹೇಳುತ್ತಾರೆ. ಪುರುಷರ್ಷಭ! ಈ ಮೂರುವರ್ಣಗಳದವರ ಪರಿಚರ್ಯೆಗಾಗಿ ನಾಲ್ಕನೆಯದಾದ ಶೂದ್ರವರ್ಣವು ಬ್ರಹ್ಮನ ಪಾದಗಳಿಂದ ನಿರ್ಮಿತವಾಯಿತು. ಹುಟ್ಟಿದ ಕೂಡಲೇ ಬ್ರಾಹ್ಮಣನು ಧರ್ಮಕೋಶವನ್ನು ರಕ್ಷಿಸಲೋಸುಗ ಸರ್ವಭೂತಗಳ ಈಶ್ವರನಾಗಿ ಪೃಥ್ವಿಯನ್ನು ಆಳತೊಡಗಿದನು. ಪೃಥ್ವಿಯನ್ನು ರಕ್ಷಿಸಲು ಮತ್ತು ಪ್ರಜೆಗಳನ್ನು ರಕ್ಷಿಸಲು ಎರಡನೆಯ ವರ್ಣವಾದ ದಂಡಧಾರೀ ಕ್ಷತ್ರಿಯನ ಉತ್ಪನ್ನವಾಯಿತು. ವೈಶ್ಯನು ಧನ-ಧಾನ್ಯಗಳಿಂದ ಉಳಿದ ಮೂರೂ ವರ್ಣದವರ ಪೋಷಣೆಯನ್ನು ಮಾಡಬೇಕೆಂದೂ ಶೂದ್ರನು ಇವರ ಸೇವೆಯಲ್ಲಿ ತೊಡಗಿರಬೇಕೆಂದೂ ಬ್ರಹ್ಮನ ಅನುಶಾಸನವಿದೆ.”

ಐಲನು ಹೇಳಿದನು:

“ವಾಯೋ! ವಿತ್ತದಿಂದ ಕೂಡಿರುವ ಈ ಪೃಥ್ವಿಯು ಧರ್ಮದ ಪ್ರಕಾರ ಯಾರದ್ದಾಗುತ್ತದೆ? ಬ್ರಾಹ್ಮಣನದ್ದೋ ಅಥವಾ ಕ್ಷತ್ರಬಂದುವಿನದೋ? ಅದನ್ನು ನನಗೆ ಬಿಡಿಸಿ ಹೇಳು.”

ವಾಯುವು ಹೇಳಿದನು:

“ಜ್ಯೇಷ್ಠನಾಗಿ ಬ್ರಹ್ಮನ ಮುಖದಿಂದ ಹುಟ್ಟಿದುದರಿಂದ ಏನೆಲ್ಲ ಈ ಜಗತ್ತಿದೆಯೋ ಅವೆಲ್ಲವೂ ಬ್ರಾಹ್ಮಣನದ್ದು ಎಂದು ಧರ್ಮಕುಶಲರು ತಿಳಿದಿರುತ್ತಾರೆ. ಬ್ರಾಹ್ಮಣನು ಊಟಮಾಡುವುದು ಅವನದ್ದೇ. ಯಾವುದನ್ನು ಹೊದೆದುಕೊಳ್ಳುತ್ತಾನೋ ಅದು ಅವನದ್ದೇ. ಯಾವುದನ್ನು ಅವನು ಕೊಡುತ್ತಾನೋ ಅದೂ ಅವನದೇ ಆಗಿರುತ್ತದೆ. ಸರ್ವವರ್ಣದವರಿಗೆ ಬ್ರಾಹ್ಮಣನೇ ಗುರು, ಜ್ಯೇಷ್ಠ ಮತ್ತು ಶ್ರೇಷ್ಠ. ಪತಿಯು ಇಲ್ಲದಿರುವಾಗ ಸ್ತ್ರೀಯು ಹೇಗೆ ಮೈದುನನನ್ನು ಪತಿಯನ್ನಾಗಿ ಮಾಡಿಕೊಳ್ಳುತ್ತಾಳೋ ಹಾಗೆ ಬ್ರಾಹ್ಮಣರು ಬಿಟ್ಟನಂತರ ಭೂಮಿಯು ಕ್ಷತ್ರಿಯನನ್ನೇ ಪತಿಯನ್ನಾಗಿಸಿಕೊಂಡಳು. ಇದು ಪ್ರಥಮ ಕಲ್ಪ. ಆಪತ್ಕಾಲಗಳಲ್ಲಿ ಬೇರೆಯದೇ ಆಗಬಹುದು. ಒಂದು ವೇಳೆ ನೀನು ಧರ್ಮತಃ ಸ್ವರ್ಗದ ಪರಮಸ್ಥಾನವನ್ನು ಬಯಸುವೆಯಾದರೆ ನೀನು ಜಯಿಸಿರುವ ಎಷ್ಟು ಭೂಮಿಯಿದೆಯೋ ಅಷ್ಟನ್ನೂ ಓರ್ವ ವಿದ್ವಾಂಸ, ಸ್ವವೃತ್ತಿಯಲ್ಲಿರುವ, ಸ್ವಧರ್ಮದಲ್ಲಿ ಪರಿತೃಪ್ತನಾಗಿರುವ, ವಿತ್ತವನ್ನು ಬಯಸಿರದ ಧರ್ಮಜ್ಞ, ತಪಸ್ವೀ ಬ್ರಾಹ್ಮಣನಿಗೆ ನಿವೇದಿಸು. ಸತ್ಕುಲಪ್ರಸೂತ, ಕೃತಪ್ರಜ್ಞ, ವಿನೀತವಾದೀ ಬ್ರಾಹ್ಮಣನು ತನ್ನ ಸರ್ವ ಪರಿಪೂರ್ಣ ಬುದ್ಧಿಯಿಂದ ರಾಜನನ್ನು ಸನ್ಮಾರ್ಗಪ್ರವೃತ್ತನನ್ನಾಗಿ ಮಾಡುತ್ತಾನೆ. ಚಿತ್ರತರ ಮಾತುಗಳ ಮೂಲಕ ರಾಜನಿಗೆ ಬುದ್ಧಿಹೇಳುತ್ತಾ ಅವನು ರಾಜನಿಗೆ ಶ್ರೇಯಸ್ಸನ್ನು ತರುತ್ತಾನೆ. ಬ್ರಾಹ್ಮಣನು ನಿದರ್ಶಿಸಿದ ಧರ್ಮದಲ್ಲಿ ರಾಜನು ನಡೆಯುತ್ತಾನೆ. ಹೇಳಿದ್ದನ್ನು ಕೇಳುವ, ಅಹಂಕಾರವಾದಿಯಲ್ಲದ ಮತ್ತು ಕ್ಷತ್ರಧರ್ಮದಲ್ಲಿ ಸ್ಥಿತನಾಗಿರುವವನು ಅವರಿಂದ ಕೃತಪ್ರಜ್ಞನಾಗಿ ಬಹುಕಾಲ ಯಶೋವಂತನಾಗಿರುತ್ತಾನೆ. ಅವನ ಸರ್ವ ಧರ್ಮದಳಲ್ಲಿ ರಾಜಪುರೋಹಿತನು ಭಾಗಿಯಾಗುತ್ತಾನೆ. ಹೀಗೆಯ ರಾಜನನ್ನು ಅವಲಂಬಿಸಿರುವ ಸರ್ವ ಪ್ರಜೆಗಳೂ ಸನ್ಮಾರ್ಗದಲ್ಲಿ ನಡೆದುಕೊಂಡು, ಸ್ವಧರ್ಮಗಳಲ್ಲಿಯೇ ಇದ್ದುಕೊಂಡು ಯಾವುದೇ ಭಯವಿಲ್ಲದೇ ಇರುತ್ತಾರೆ. ರಾಜನಿಂದ ರಕ್ಷಿತರಾದ ಸಾಧುಜನರು ಯಾವ ಧರ್ಮವನ್ನು ಆಚರಿಸುತ್ತಾರೋ ಆ ಧರ್ಮದ ನಾಲ್ಕನೇ ಒಂದು ಭಾಗವು ರಾಜನಿಗೆ ಸೇರುತ್ತದೆ. ದೇವತೆಗಳು, ಮನುಷ್ಯರು, ಪಿತೃಗಳು ಮತ್ತು ಗಂಧರ್ವ-ಉರಗ-ರಾಕ್ಷಸರು ಯಜ್ಞವನ್ನೇ ಅವಲಂಬಿಸಿ ಜೀವಿಸುವವು. ರಾಜನಿಲ್ಲದ ರಾಷ್ಟ್ರದಲ್ಲಿ ಇವುಗಳು ನಡೆಯುವುದೆಂತು? ಇಲ್ಲಿ ಮಾಡುವ ದಾನಗಳನ್ನು ಅವಲಂಬಿಸಿಯೇ ದೇವತೆಗಳು ಮತ್ತು ಪಿತೃಗಳು ಜೀವಿಸುತ್ತಾರೆ. ಈ ಯೋಗ-ಕ್ಷೇಮಗಳು ಧರ್ಮಿಷ್ಠ ರಾಜನಲ್ಲಿಯೇ ಪ್ರತಿಷ್ಠಿತವಾಗಿವೆ. ಬೇಸಗೆಯ ಬಿಸಿಯನ್ನು ನೆರಳಿನಲ್ಲಿ ಹೋಗಿಯೋ, ನೀರಿನಲ್ಲಿ ಮುಳುಗಿಯೋ ಮತ್ತು ಗಾಳಿಬೀಸಿಕೊಳ್ಳುವುದರಿಂದಲೋ ಸುಖವಾಗಿ ತಡೆದುಕೊಳ್ಳಬಹುದು. ಬೆಂಕಿ ಕಾಯಿಸುವುದರಿಂದ ಮತ್ತು ಬಿಸಿಲಿನಲ್ಲಿ ನಿಲ್ಲುವುದರಿಂದ ಛಳಿಯನ್ನು ಸುಖವಾಗಿ ತಡೆದುಕೊಳ್ಳಬಹುದು. ಶಬ್ಧ-ಸ್ಪರ್ಶ-ರಸ-ರೂಪ-ಗಂಧಗಳಲ್ಲಿ ಮನಸ್ಸು ರಮಿಸುತ್ತದೆ. ಆದರೆ ಭಯದಲ್ಲಿರುವವನಿಗೆ ಈ ಎಲ್ಲ ಭೋಗಗಳಿಂದಲೂ ಸುಖವು ದೊರೆಯುವುದಿಲ್ಲ. ಅಂಥವನಿಗೆ ಅಭಯವನ್ನು ನೀಡುವವನಿಗೆ ಮಹಾ ಫಲವು ಲಭಿಸುತ್ತದೆ. ಪ್ರಾಣಸಮವಾದ ದಾನವು ಮೂರು ಲೋಕಗಳಲ್ಲಿಯೂ ಬೇರೆ ಇಲ್ಲ. ರಾಜನಾದವನು ಇಂದ್ರ. ರಾಜನಾದವನು ಯಮ. ರಾಜನಾದವನು ಧರ್ಮ ಕೂಡ. ರಾಜನಾದವನು ನಾನಾ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಈ ಎಲ್ಲವೂ ರಾಜನ ಮೇಲೆಯೇ ನಿಂತಿವೆ.”

The other spiritual discourses in Mahabharata (Kannada):

  1. ತೀರ್ಥಯಾತ್ರಾಮಹಾತ್ಮೆ: ಭೀಷ್ಮ-ಪುಲಸ್ತ್ಯರ ಸಂವಾದ
  2. ಧೌಮ್ಯನು ಯುಧಿಷ್ಠಿರನಿಗೆ ತೀರ್ಥಯಾತಾಕ್ಷೇತ್ರಗಳನ್ನು ವರ್ಣಿಸಿದುದು
  3. ಯುಧಿಷ್ಠಿರ-ಮಾರ್ಕಂಡೇಯ ಸಂವಾದ
  4. ಸರಸ್ವತೀಗೀತೆ
  5. ಕೌಶಿಕ-ಪತಿವ್ರತೆ-ಧರ್ಮವ್ಯಾಧ
  6. ವಿದುರನೀತಿ
  7. ಸನತ್ಸುಜಾತಿಯ
  8. ಭೌಮಗುಣಕಥನ
  9. ಶ್ರೀಮದ್ಭಗವದ್ಗೀತಾ
  10. ಸೇನಜಿತ್-ಬ್ರಾಹ್ಮಣ ಸಂವಾದ; ಪಿಂಗಲ ಗೀತೆ
  11. ಪಿತಾಪುತ್ರ ಸಂವಾದ
  12. ಶಮ್ಯಾಕಗೀತೆ
  13. ಮಂಕಿಗೀತೆ
  14. ಭೃಗು-ಭರದ್ವಾಜ ಸಂವಾದ
  15. ಸಾಂಖ್ಯ ಯೋಗ: ಯಾಜ್ಞವಲ್ಕ್ಯ-ಜನಕ ಸಂವಾದ

Continue reading...
 
Top