VyasaOnline ಭೀಷ್ಮ-ಯುಧಿಷ್ಠಿರ ಸಂವಾದ: ರಾಜಧರ್ಮ – 4

  • Thread starter Ramesh Banadakoppa Manjappa
  • Start date
R

Ramesh Banadakoppa Manjappa

Guest

ಭೀಷ್ಮ-ಯುಧಿಷ್ಠಿರ ಸಂವಾದ: ರಾಜಧರ್ಮ - 4


ಓಂ' ಬಗ್ಗೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳು | things-you-dint-know-about-om - Kannada BoldSky


ದಂಡನೀತಿಯೊಂದಿಗೆ ರಾಜನ ಪ್ರಧಾನ ಕರ್ತವ್ಯಗಳು ಮತ್ತು ಲಕ್ಷಣಗಳನ್ನು ವರ್ಣಿಸುವ ಈ ಭೀಷ್ಮ-ಯುಧಿಷ್ಠಿರ ಸಂವಾದವು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 69-72ರಲ್ಲಿ ಬರುತ್ತದೆ.

***

ರಾಜನ ಪ್ರಧಾನ ಕರ್ತವ್ಯಗಳು ಮತ್ತು ದಂಡನೀತಿಯ ಕಾರಣದಿಂದ ಯುಗಗಳ ನಿರ್ಮಾಣವಾದುದರ ವರ್ಣನೆ.




ಯುಧಿಷ್ಠಿರನು ಹೇಳಿದನು:

“ರಾಜನ ಇನ್ನು ಉಳಿದ ಕಾರ್ಯಗಳ್ಯಾವುವು? ವಿಶೇಷವಾಗಿ ಅವನು ಜನಪದವನ್ನು ಹೇಗೆ ರಕ್ಷಿಸಬೇಕು? ಶತ್ರುಗಳಿಂದ ಹೇಗೆ ರಕ್ಷಣೆಯನ್ನು ಪಡೆಯಬೇಕು? ಭಾರತ! ಚಾರರನ್ನು ಹೇಗೆ ನಿಯೋಜಿಸಬೇಕು? ಎಲ್ಲ ವರ್ಣದವರಲ್ಲಿಯೂ ರಾಜನ ಮೇಲಿನ ವಿಶ್ವಾಸವನ್ನು ಹೇಗೆ ಹುಟ್ಟಿಸಬೇಕು? ಸೇವಕರಲ್ಲಿ, ಪತ್ನಿಯರಲ್ಲಿ ಮತ್ತು ಪುತ್ರರಲ್ಲಿ ರಾಜನ ಮೇಲಿರುವ ವಿಶ್ವಾಸವನ್ನು ಹೇಗೆ ಉಳಿಸಿಕೊಳ್ಳಬೇಕು?”

ಭೀಷ್ಮನು ಹೇಳಿದನು:

“ಮಹಾರಾಜ! ರಾಜನ ಆಚಾರ-ವ್ಯವಹಾರಗಳ ಕುರಿತು, ಮತ್ತು ಪಾರ್ಥಿವನ ಅಥವಾ ಪಾರ್ಥಿವನ ಪರವಾಗಿ ಕಾರ್ಯನಿರ್ವಹಿಸುವವರ ಮೊದಲ ಕಾರ್ಯವೇನೆನ್ನುವುದನ್ನು ಸಾವಧಾನ ಚಿತ್ತನಾಗಿ ಕೇಳು! ರಾಜನು ಸದಾ ಆತ್ಮನನ್ನು ಗೆಲ್ಲಬೇಕು. ಅನಂತರ ಶತ್ರುಗಳನ್ನು ಗೆಲ್ಲಬೇಕು. ಅಜಿತಾತ್ಮಾ ನರಪತಿಯು ರಿಪುಗಳನ್ನು ಹೇಗೆ ತಾನೇ ಜಯಿಸಿಯಾನು? ಐದು ಇಂದ್ರಿಯಗಳನ್ನು ನಿಗ್ರಹಿಸುವುದೇ ಆತ್ಮವಿಜಯವೆನಿಸಿಕೊಳ್ಳುತ್ತದೆ. ಜಿತೇಂದ್ರಿಯ ನರಪತಿಯು ಅರಿಗಳನ್ನು ಬಾಧಿಸಲು ಶಕ್ಯನಾಗುತ್ತಾನೆ. ಕುರುನಂದನ! ಕೋಟೆ, ಸಂಧಿಗಳಲ್ಲಿ, ನಗರದ ಉಪವನಗಳಲ್ಲಿ ಮತ್ತು ಪುರಗಳ ಉದ್ಯಾನಗಳಲ್ಲಿ ಸೈನ್ಯದ ಗುಲ್ಮಗಳನ್ನು ಇರಿಸಬೇಕು. ನರಶಾರ್ದೂಲ! ಹಾಗೆಯೇ ಪುರ-ನಗರಗಳ ಎಲ್ಲ ಸಂಸ್ಥಾನಗಳ ಮಧ್ಯೆಯೂ ಮತ್ತು ರಾಜನಿವೇಶನದಲ್ಲಿಯೂ ಸೇನೆಗಳನ್ನಿಟ್ಟಿರಬೇಕು. ಅನಂತರ ಜಡರು, ಅಂಧರು ಮತ್ತು ಕಿವುಡರಂತೆ ನಡೆದುಕೊಳ್ಳುವ ಪುರುಷರನ್ನು, ಅವರ ಪ್ರಜ್ಞೆಗಳನ್ನೂ, ಅವರು ಹಸಿವು-ಬಾಯಾರಿಕೆಗಳನ್ನು ಸಹಿಸಿಕೊಳ್ಳುವವರೋ ಎನ್ನುವುದನ್ನು ಪರೀಕ್ಷಿಸಿ, ಗೂಢಚರರನ್ನಾಗಿ ನಿಯೋಜಿಸಿಕೊಳ್ಳಬೇಕು. ಮಹಾರಾಜ! ಸಮಾಹಿತ ರಾಜನು ಅಮಾತ್ಯರು, ಮಿತ್ರರು ಮತ್ತು ಪುತ್ರರು ಈ ಮೂರು ಕಡೆಗಳಲ್ಲಿಯೂ ಗೂಢಚಾರರನ್ನು ಇಟ್ಟಿರಬೇಕು. ಪುರ-ಗ್ರಾಮಗಳಲ್ಲಿ, ಮತ್ತು ಹಾಗೆಯೇ ಸಾಮಂತರಾಜರುಗಳಲ್ಲಿ, ಪರಸ್ಪರರಿಗೆ ತಿಳಿಯದಂತೆ ಗೂಢಚಾರರನ್ನು ಇಟ್ಟಿರಬೇಕು. ಭರತರ್ಷಭ! ಶತ್ರುಗಳು ಕಳುಹಿಸಿದ ಗೂಢಚಾರರನ್ನು ರಾಜನು ತನ್ನ ಗೂಢಚಾರರ ಮೂಲಕ ಅಂಗಡಿಗಳಲ್ಲಿ, ವಿಹಾರಸ್ಥಳಗಳಲ್ಲಿ, ಸಮಾಜೋತ್ಸವಗಳಲ್ಲಿ, ಭಿಕ್ಷುಗಳಲ್ಲಿ, ತೋಟಗಳಲ್ಲಿ, ಉದ್ಯಾನವನಗಳಲ್ಲಿ, ಪಂಡಿತರ ಸಮಾಗಮಗಳಲ್ಲಿ, ವಾಸಸ್ಥಳಗಳಲ್ಲಿ, ಚೌಕಗಳಲ್ಲಿ, ಸಭೆಗಳಲ್ಲಿ, ಮತ್ತು ಧರ್ಮಶಾಲೆಗಳಲ್ಲಿ ಕಣ್ಣಿಟ್ಟು ಹುಡುಕಿಸಬೇಕು. ಪಾಂಡವ! ರಾಜನು ಶತ್ರುಗಳ ಗೂಢಚಾರರ ಮೇಲೆ ಕಣ್ಣಿಟ್ಟು ಅವರ ಕುರಿತು ಮೊದಲೇ ತಿಳಿದುಕೊಳ್ಳುವುದರಿಂದ ರಾಷ್ಟ್ರಕ್ಕೆ ಮತ್ತು ರಾಜನಿಗೆ ಹಿತವುಂಟಾಗುತ್ತದೆ. ತಾನು ಶತ್ರುವಿಗಿಂತ ದುರ್ಬಲನೆನ್ನುವುದನ್ನು ಸ್ವತಃ ತಿಳಿದುಕೊಂಡ ಕೂಡಲೇ ನೃಪತಿಯು ತನ್ನ ಅಮಾತ್ಯರೊಂದಿಗೆ ಸಮಾಲೋಚನೆಗೈದು ಬಲಶಾಲಿಯೊಂದಿಗೆ ಸಂಧಿಯನ್ನು ಮಾಡಿಕೊಳ್ಳಬೇಕು. ತನ್ನ ದುರ್ಬಲತ್ವದಿಂದ ಇವನು ಸಂಧಿಯನ್ನು ಮಾಡಿಕೊಳ್ಳುತ್ತಿದ್ದಾನೆ ಎಂದು ಶತ್ರುವಿಗೆ ತಿಳಿಯುವ ಮೊದಲೇ ಜಾಗರೂಕ ರಾಜನು ತ್ವರೆಮಾಡಿ ಬೇರೆಯಾವುದಾದರೂ ಉದ್ದೇಶವನ್ನು ಹೇಳಿ ಸಂಧಿಮಾಡಿಕೊಳ್ಳಬೇಕು.

ರಾಷ್ಟ್ರವನ್ನು ಧರ್ಮದಿಂದ ಪಾಲಿಸುತ್ತ ನೃಪನು ಗುಣವಂತನೂ, ಮಹೋತ್ಸಾಹಿಯೂ, ಧರ್ಮಜ್ಞನೂ, ಸಾಧುವೂ ಆದ ರಾಜರೊಂದಿಗೆ ಸಂಧಿಯನ್ನು ಮಾಡಿಕೊಳ್ಳಬೇಕು. ಮಹಾಮತಿ ರಾಜನು ತನಗೆ ಪ್ರಾಣಾಪಾಯವಿರುವುದೆಂಬುದನ್ನು ತಿಳಿದುಕೊಂಡು ತನಗೆ ಹಿಂದೆ ಅಪಕಾರಮಾಡಿದವರನ್ನೂ ಮತ್ತು ಪ್ರಜಾದ್ವೇಷಿಗಳನ್ನೂ ಸಂಪೂರ್ಣವಾಗಿ ನಾಶಪಡಿಸಬೇಕು. ಯಾವ ಮಹೀಪತಿಯು ಮಿತ್ರರಿಗೆ ಉಪಕಾರಮಾಡಲೂ, ಶತ್ರುಗಳಿಗೆ ಅಪಕಾರಮಾಡಲೂ ಅಸಮರ್ಥನೋ ಮತ್ತು ಯಾವ ರಾಜನನ್ನು ಉದ್ಧಾರಮಾಡಲು ಯಾರಿಂದಲೂ ಸಾಧ್ಯವಿಲ್ಲವೋ ಅಂತಹ ರಾಜನು ಎಲ್ಲರಿಂದಲೂ ಉಪೇಕ್ಷಿತನಾಗುತ್ತಾನೆ. ಶತ್ರುರಾಜನ ಮೇಲೆ ಯುದ್ಧಕ್ಕೆ ಹೋಗುವ ಮುನ್ನ ಈ ಅಂಶಗಳನ್ನು ಗಮನೆಗೆ ತೆಗೆದುಕೊಳ್ಳಬೇಕು: ಶತ್ರುರಾಜನು ಮಿತ್ರಹೀನನೇ? ಸಹಾಯಕರಿಂದಲೂ ಬಂಧುಗಳಿಂದಲೂ ವಿಹೀನನಾಗಿರುವನೇ? ಮತ್ತೊಬ್ಬ ಶತ್ರುವಿನೊಡನೆ ಯುದ್ಧಕ್ಕೆ ತೊಡಗಿರುವನೇ? ಪ್ರಮತ್ತನಾಗಿರುವನೇ? ದುರ್ಬಲನಾಗಿರುವನೇ? ಇವುಗಳನ್ನು ತಿಳಿದುಕೊಂಡು ಪುಷ್ಟವಾದ ಚತುರಂಗಸೈನ್ಯವನ್ನು ಹೊಂದಿರುವ ವಿಚಕ್ಷಣ, ವೀರ, ಸಮರ್ಥ ಮತ್ತು ಸುಖಸಾಧನಸಂಪನ್ನ ರಾಜನು ಮೊದಲು ತನ್ನ ನಗರದ ರಕ್ಷಣೆಯ ವ್ಯವಸ್ಥೆಯನ್ನು ಮಾಡಿ ಬಳಿಕ ಸೈನಿಕರಿಗೆ ಯುದ್ಧಕ್ಕೆ ಸಿದ್ಧರಾಗಲು ಆಜ್ಞಾಪಿಸಬೇಕು. ಬಲ ಮತ್ತು ವೀರ್ಯಗಳಲ್ಲಿ ತಾನು ಹೀನನಾಗಿದ್ದರೂ ಮತ್ತು ಶತ್ರುವು ವೀರ್ಯವಂತನಾಗಿದ್ದರೂ ನೃಪನು ಶತ್ರುವಿನ ವಶದಲ್ಲಿ ಬರಬಾರದು. ಶತ್ರುವನ್ನು ಕ್ಷೀಣಗೊಳಿಸಲು ಸದಾ ಪ್ರಯತ್ನಿಸುತ್ತಿರಬೇಕು. ಆ ರಾಷ್ಟ್ರವನ್ನು ಶಸ್ತ್ರ, ಅಗ್ನಿ, ವಿಷ ಮತ್ತು ಮೂರ್ಚನಗಳಿಂದ ಪೀಡಿಸಬೇಕು. ಅಮಾತ್ಯರು ಮತ್ತು ರಾಜರ ನಡುವೆ ವಿವಾದವಾಗುವಂತೆ ಮಾಡಬೇಕು. ಧೀಮಂತನಾದವನು ರಾಜ್ಯವನ್ನು ವಿಸ್ತರಿಸುವ ಕಾರಣದಿಂದ ಯುದ್ಧವನ್ನು ಸದಾ ವರ್ಜಿಸಬೇಕು.

ನರಾಧಿಪ! ಸಾಮ, ದಾನ ಮತ್ತು ಭೇದ ಈ ಮೂರು ಉಪಾಯಗಳಿಂದ ರಾಜ್ಯವನ್ನು ಪಡೆದುಕೊಳ್ಳಬಹುದು ಎಂದು ಬೃಹಸ್ಪತಿಯು ಹೇಳಿದ್ದಾನೆ. ಇವುಗಳಿಂದ ಎಷ್ಟನ್ನು ಪಡೆದುಕೊಳ್ಳಬಹುದೋ ಅದರಿಂದಲೇ ಪಂಡಿತನಾದವನು ತೃಪ್ತಿಹೊಂದಬೇಕು. ಕುರುನಂದನ! ಪ್ರಾಜ್ಞ ರಾಜನು ಪ್ರಜೆಗಳ ರಕ್ಷಣೆಯ ಸಲುವಾಗಿ ಅವರ ಆದಾಯದ ಆರನೆಯ ಒಂದು ಭಾಗವನ್ನು ಪಡೆದುಕೊಳ್ಳಬೇಕು. ಆದರೆ ದಶಧರ್ಮ[1]ಗತರಾದವರಲ್ಲಿರುವ ಅಲ್ಪ ಅಥವಾ ಬಹು ಐಶ್ವರ್ಯವನ್ನು ಸಂಪೂರ್ಣವಾಗಿ ಪೌರರ ರಕ್ಷಣೆಗೆ ಕೂಡಲೇ ವಶಮಾಡಿಕೊಳ್ಳಬೇಕು. ರಾಜನು ಪ್ರಜೆಗಳನ್ನು ಪುತ್ರರಂತೆ ಕಾಣಬೇಕು ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ವ್ಯವಹಾರಗಳಲ್ಲಿ[2] ಸ್ನೇಹವಶ ಪಕ್ಷಪಾತವನ್ನು ತೋರಿಸಬಾರದು. ರಾಜನು ವ್ಯವಹಾರಗಳಲ್ಲಿ ಪ್ರಾಜ್ಞನೂ ಸರ್ವಾರ್ಥದರ್ಶಿಯೂ ಆದ ಮಗನನ್ನು ಸ್ಥಾಪಿಸಬೇಕು. ಏಕೆಂದರೆ ಸತತ ವ್ಯವಹಾರಗಳ ಮೇಲೆಯೇ ರಾಜ್ಯವು ವ್ಯವಸ್ಥಿತವಾಗಿರುತ್ತದೆ. ಚಿನ್ನ-ಬೆಳ್ಳಿಗಳ ಭಂಡಾರ, ಉಪ್ಪು-ಧಾನ್ಯಗಳ ಖಣಿಜ, ದೋಣಿ-ಹಡಗುಗಳ ಘಾಟಿ ಮತ್ತು ಆನೆಗಳ ಸೇನೆ – ಇವುಗಳ ಸ್ಥಾನಗಳಲ್ಲಿ ನೃಪತಿಯು ತನ್ನ ಆಪ್ತ ಮತ್ತು ಹಿತೈಷಿ ಪುರುಷರನ್ನು ಇಡಬೇಕು. ನಿತ್ಯವೂ ಸರಿಯಾಗಿ ದಂಡವನ್ನು ಧರಿಸಿರುವ ರಾಜನು ಧರ್ಮದ ಭಾಗಿಯಾಗುತ್ತಾನೆ. ನಿರಂತರ ಧಂಡಧಾರಣ ಮಾಡುವುದು ನೃಪನ ಉತ್ತಮ ಧರ್ಮವೆಂದು ಪ್ರಶಂಸಿಸುತ್ತಾರೆ.

ಭಾರತ! ನೃಪನು ವೇದ-ವೇದಾಂಗಗಳ ವಿದ್ವಾಂಸನೂ, ಬುದ್ಧಿವಂತನೂ, ಉತ್ತಮ ತಪಸ್ವಿಯೂ, ಸದಾ ದಾನಶೀಲನೂ ಮತ್ತು ಯಜ್ಞಪರಾಯಣನೂ ಆಗಿರಬೇಕು. ಈ ಸಮಸ್ತ ಗುಣಗಳೂ ರಾಜನಲ್ಲಿ ಸತತವೂ ಸ್ಥಿರವಾಗಿರಬೇಕು. ಅವನ ನ್ಯಾಯೋಚಿತ ವ್ಯವಹಾರಗಳಲ್ಲಿಯೇ ಲೋಪವಾಗಿಬಿಟ್ಟರೆ ರಾಜನಿಗೆ ಎಲ್ಲಿಯ ಸ್ವರ್ಗ ಮತ್ತು ಎಲ್ಲಿಯ ಯಶಸ್ಸು? ರಾಜನಾದವನು ಇನ್ನೊಬ್ಬ ಬಲಶಾಲೀ ರಾಜನಿಂದ ಪೀಡಿತನಾದರೆ ಮೂರುವಿಧದ ಮಿತ್ರರನ್ನು ಕೂಗಿ ಕರೆದು ವಿಧಾನಗಳ ಕುರಿತು ಯೋಜನೆಹಾಕಿಕೊಳ್ಳಬೇಕು. ಘೋಷಣೆ ಮಾಡುವವರನ್ನು ರಾಜಮಾರ್ಗದಲ್ಲಿ ನಿಲ್ಲಿಸಬೇಕು. ತಳವಾರರಿಂದ ಘೋಷಣೆಯನ್ನು ಸಾರಿಸಿ ಗ್ರಾಮದಲ್ಲಿರುವ ಜನರನ್ನು ಎಚ್ಚರಿಸಬೇಕು. ಬಳಿಕ ಗ್ರಾಮದವರೆಲ್ಲರೂ ಉಪನಗರಗಳಿಗೆ ಪ್ರವೇಶಿಸುವಂತೆ ಮಾಡಬೇಕು. ಬಳಿಕ ಐಶ್ವರ್ಯವಂತರನ್ನೂ, ಸೇನಾಪತಿಗಳನ್ನೂ ಬಾರಿ-ಬಾರಿಗೂ ಸಂತೈಸುತ್ತಾ ಅವರೆಲ್ಲರನ್ನೂ ಗೂಢ ದುರ್ಗಮ ಪ್ರದೇಶಗಳಿಗೆ ಕಳುಹಿಸಬೇಕು. ಸ್ವಯಂ ನರಾಧಿಪನು ಪೈರಿನ ಕಟಾವುಮಾಡಿಸಿ ಧಾನ್ಯವನ್ನು ವಿಂಗಡಿಸಿ ಕೋಟೆಯೊಳಗೆ ಇಡುವಂತೆ ನೋಡಿಕೊಳ್ಳಬೇಕು. ಅದು ಸಾಧ್ಯವಾಗದೇ ಇದ್ದರೆ ಶತ್ರುರಾಜನಿಗೆ ದೊರಕದಂತೆ ಪೈರು-ಪಚ್ಚೆಗಳು ತುಂಬಿದ್ದ ಹೊಲ-ಗದ್ದೆಗಳನ್ನೇ ಸುಟ್ಟುಹಾಕಬೇಕು. ಹೊಲಗದ್ದೆಗಳಲ್ಲಿ ಪೈರು ಇರುವಾಗ ಶತ್ರುವಿನ ಕಡೆಯ ಜನರನ್ನೇ ಹತ್ತಿಕ್ಕ ದ್ವಂಸಮಾಡುವಂತೆ ಮಾಡಬೇಕು. ಅಥವಾ ತನ್ನ ಕಡೆಯ ಜನರನ್ನೇ ಕಳುಹಿಸಿ ನಾಶಪಡಿಸಬೇಕು. ಆಹಾರ-ಧಾನ್ಯಗಳು ಶತ್ರುವಿನ ಕೈಗಂತೂ ಸಿಕ್ಕಲೇಬಾರದು. ನದಿಗಳನ್ನು ದಾಟುವಲ್ಲಿರುವ ಸೇತುವೆಗಳನ್ನು ಧ್ವಂಸಮಾಡಬೇಕು. ನೀರಿನ ಒಡ್ಡುಗಳನ್ನೊಡೆದು ಶತ್ರುಗಳಿಗ ನೀರು ದೊರೆಯದಂತೆ ಮಾಡಬೇಕು. ಬಾವಿಯೇ ಮೊದಲಾದ ಜಲಾಶಯಗಳ ನೀರು ಕುಡಿಯಲಿಕ್ಕೆ ಬಾರದಂತೆ ದೂಷಿತಗೊಳಿಸಬೇಕು. ಮಿತ್ರನಿಗಾಗಿ ಮಾಡಬೇಕಾದ ಕಾಲವು ಸನ್ನಿಹಿತವಾಗಿದ್ದರೂ ಅದನ್ನು ಬದಿಗೊತ್ತಿ ತನ್ನ ಶತ್ರುವಿಗೆ ಶತ್ರುವಾದವನ ಆಶ್ರಯವನ್ನು ಪಡೆಯಬೇಕು. ರಾಜನಾದವನು ದುರ್ಗದ ಸುತ್ತಲೂ ಇರುವ ಮರಗಿಡಗಳನ್ನು ಬುಡಸಹಿತ ಕಡಿದುಹಾಕಬೇಕು.

ಆದರೆ ಅಶ್ವತ್ಥಾದಿ ಪೂಜಾವೃಕ್ಷಗಳನ್ನು ನಾಶಗೊಳಿಸಬಾರದು. ಅತಿ ದೊಡ್ಡದಾಗಿ ಬೆಳೆದ ಮರಗಳ ಶಾಖೆಗಳನ್ನು ಕಡಿಯಬೇಕು. ಆದರೆ ಅಶ್ವತ್ಥಾದಿ ವೃಕ್ಷಗಳ ಎಲೆಗಳನ್ನೂ ಕೀಳಬಾರದು. ಕೋಟೆಯ ನಾಲ್ಕೂ ಕಡೆಗಳಲ್ಲಿ ಆಯಕಟ್ಟಿನ ಪ್ರದೇಶಗಳಲ್ಲಿ ಪ್ರಕಂಠಿ[3]ಗಳನ್ನು ನಿರ್ಮಿಸಬೇಕು. ಅಲ್ಲಿ ಆಕಾಶಜನನಿಗಳನ್ನೂ ಅಂದರೆ ಸಣ್ಣ ರಂಧ್ರಗಳನ್ನು ಮಾಡಿರಬೇಕು. ಕೋಟೆಯ ಸುತ್ತಲೂ ಕಂದಕವನ್ನು ತೋದಿಸಿ ಅವುಗಳನ್ನು ಮೇಲ್ಮುಖ ತ್ರಿಶೂಲಗಳು, ಮೀನು, ನಕ್ರ ಮತ್ತು ಮೊಸಳೆಗಳಿಂದ ತುಂಬಿಸಬೇಕು. ಪುರದ ಒಳ ಮತ್ತು ಹೊರಹೋಗಲು ಸಣ್ಣ ದ್ವಾರಗಳನ್ನು ನಿರ್ಮಿಸಿರಬೇಕು. ಆ ದ್ವಾರಗಳನ್ನೂ , ಮುಖ್ಯದ್ವಾರದಂತೆ, ಎಲ್ಲ ಕಾರಣಗಳಲ್ಲಿಯೂ ರಕ್ಷಿಸಬೇಕು. ದ್ವಾರಗಳಲ್ಲಿ ದೊಡ್ಡ ಯಂತ್ರಗಳನ್ನು ಸ್ಥಾಪಿಸಬೇಕು. ಆ ಯಂತ್ರಗಳ ಮೇಲೆ ಶತಘ್ನಿಗಳನ್ನು ಇಟ್ಟಿರಬೇಕು. ಇವೆಲ್ಲವೂ ರಾಜನ ಸ್ವಾಧೀನದಲ್ಲಿರಬೇಕು. ಕೋಟೆಯ ಒಳಗೆ ಕಟ್ಟಿಗೆಯನ್ನು ಸಂಗ್ರಹಿಸಿಟ್ಟಿರಬೇಕು. ಬಾವಿಗಳನ್ನು ತೋಡಿಸಬೇಕು. ಹಳೆಯ ಬಾವಿಗಳನ್ನು ಕೆಸರು ತೆಗೆದು ಶೋಧಿಸಬೇಕು ಮತ್ತು ಕುಡಿಯುವ ನೀರು ಹೇರಳವಾಗಿರುವಂತೆ ನೋಡಿಕೊಳ್ಳಬೇಕು. ಹುಲ್ಲುಹೊಚ್ಚಿದ ಗುಡಿಸಲುಗಳ ಸೂರುಗಳನ್ನು ಮಣ್ಣಿನಿಂದ ಬಳಿಯಬೇಕು. ಚೈತ್ರಮಾಸದಲ್ಲಿ ಪುರವು ಅಗ್ನಿಯ ಭಯದಿಂದ ದೂರವಾಗಿರುವಂತೆ ಒಣಹುಲ್ಲನ್ನು ಪುರದ ಹೊರಹಾಕಬೇಕು.

ನರಾಧಿಪನು ರಾತ್ರಿಮಾತ್ರವೇ ಅಡುಗೆಮಾಡಬೇಕೆಂದು ಆಜ್ಞಾಪಿಸಬೇಕು. ಅಗ್ನಿಹೋತ್ರವನ್ನು ಬಿಟ್ಟು ಬೇರೆ ಯಾವ ಕಾರಣಕ್ಕೂ ಹಗಲಿನಲ್ಲಿ ಬೆಂಕಿಯನ್ನು ಹೊತ್ತಿಸಬಾರದು. ಕಮ್ಮಾರನ ಕುಲುಮೆ ಮತ್ತು ಸೂತಿಕಾಗೃಹಗಳಲ್ಲಿ ಬೆಂಕಿಯನ್ನು ಬಹಳ ಎಚ್ಚರಿಕೆಯಿಂದ ಉರಿಸಬೇಕು. ಮನೆಯ ಒಳಗೆ ತೆಗೆದುಕೊಂಡು ಹೋಗಿ ಅಗ್ನಿಯನ್ನು ಅಡಗಿಸಿಡಬೇಕು. ಪುರದ ರಕ್ಷಣೆಗಾಗಿ ಹಗಲಿನಲ್ಲಿ ಬೆಂಕಿಉರಿಸಿರುವವರಿಗೆ ಮಹಾದಂಡ ಶಿಕ್ಷೆಯಾಗುತ್ತದೆ ಎಂದು ಘೋಷಣೆ ಹಾಕಿಸಬೇಕು. ನರಶ್ರೇಷ್ಠ! ಯುದ್ಧದ ಸಮಯದಲ್ಲಿ ಭಿಕ್ಷುಕರು, ಹೊಗಳುಭಟರು, ನಪುಂಸಕರು, ಹುಚ್ಚರು, ನಟ-ನರ್ತಕರನ್ನು ನಗರದ ಹೊರಹಾಕಬೇಕು. ಇಲ್ಲದಿದ್ದರೆ ಅವರಿಂದಲೇ ಆಪತ್ತುಂಟಾಗಬಹುದು. ಶತ್ರುಗೂಢಚರರು ಆ ವೇಷಗಳಲ್ಲಿದ್ದು ರಾಷ್ಟ್ರಕ್ಕೇ ತೊಂದರೆಯನ್ನುಂಟುಮಾಡಬಹುದು. ನಗರದ ಎಲ್ಲ ಚೌಕಗಳಲ್ಲಿ, ತೀರ್ಥಗಳಲ್ಲಿ, ಸಭೆಗಳಲ್ಲಿ ಮತ್ತು ಧರ್ಮಶಾಲೆಗಳಲ್ಲಿ ರಾಜನು ಅರ್ಹವರ್ಣ ದೂತರನ್ನು ನೇಮಿಸಿರಬೇಕು. ನರಾಧಿಪನು ರಾಜಮಾರ್ಗಗಳನ್ನೂ ವಿಶಾಲಗೊಳಿಸಬೇಕು. ಅವಶ್ಯಕತೆಗಳಿಗನುಗುಣವಾಗಿ ಅರವಟ್ಟಿಗೆ-ಅಂಗಡಿಗಳನ್ನು ಇಡಿಸಿರಬೇಕು. ಕೌರವ್ಯ! ಯುಧಿಷ್ಠಿರ! ಧಾನ್ಯದ ಕಣಜಗಳು, ಆಯುಧಾಗಾರಗಳು, ಮತ್ತು ಯೋಧರ ವಸತಿಗಳು, ಅಶ್ವಾಗಾರಗಳು, ಗಜಾಗಾರಗಳು, ಸೇನೆಗಳು, ಕಂದಕಗಳು, ಮತ್ತು ರಾಜನ ಉದ್ಯಾನವನಗಳನ್ನು ಶತ್ರುಗಳಿಗೆ ಕಾಣದಂತಿರಬೇಕು. ಇವಿಷ್ಟೂ ಶತ್ರುವಿನಿಂದ ಗೌಪ್ಯವಾಗಿಡತಕ್ಕ ವಿಷಯಗಳು. ಶತ್ರುಬಲಕ್ಕಿಂತ ಕಡಿಮೆ ಬಲ್ಲವುಳ್ಳವನು ಎಣ್ಣೆ, ಮಧು, ಘೃತ, ಔಷಧೀ ಸಸ್ಯಗಳು-ಮೂಲಿಕೆಗಳು, ಇದ್ದಿಲು, ದರ್ಬೆ, ಮುಂಜೆಹುಲ್ಲು, ಮುತ್ತುಗ, ಬಾಣ, ಮತ್ತು ಎಲೆಗಳನ್ನು ಕೂಡಿಸಿಕೊಂಡಿರಬೇಕು. ಅಂಥಹ ನರಾಧಿಪನು ಕಟ್ಟಿಗೆ, ವಿಷಯುಕ್ತ ಬಾಣಗಳು ಮೊದಲಾದವುಗಳನ್ನು ಸಂಗ್ರಹಿಸಿಟ್ಟುಕೊಂಡಿರಬೇಕು. ಎಲ್ಲ ತರಹದ ಆಯುಧಗಳೂ, ಶಕ್ಗಿಗಳೂ, ಋಷ್ಠಿಗಳೂ, ಪ್ರಾಸಗಳೂ, ಕವಚಗಳೂ ಮೊದಲಾದವುಗಳನ್ನು ಸಂಗ್ರಹಿಸಿಟ್ಟುಕೊಂಡಿರಬೇಕು. ವಿಶೇಷವಾಗಿ ಎಲ್ಲ ಔಷಧಿಗಳು, ಗೆಡ್ಡೆಗಳು, ಫಲಗಳು, ನಾಲ್ಕು ಬಗೆಯ ವೈದ್ಯರನ್ನೂ[4] ಸಂಗ್ರಹಿಸಿಟ್ಟುಕೊಂಡಿರಬೇಕು.

ಪುರಜನರ ಮನೋರಂಜನೆಗೆಂದು ಎಲ್ಲಕಡೆ ನಟರು, ನರ್ತಕರು, ಮಲ್ಲರು, ಪವಾಡಗಾರರು ಶೋಭಿಸುತ್ತಿರಬೇಕು. ಸೇವಕರಲ್ಲಿಯಾಗಲೀ, ಮಂತ್ರಿಗಳಲ್ಲಿಯಾಗಲೀ, ಪೌರರಲ್ಲಿಯಾಗಲೀ ಯಾರೊಬ್ಬರ ಮೇಲೂ ನೃಪತಿಗೆ ಶಂಕೆಯುಂಟಾದರೆ ಅವರನ್ನು ರಾಜನು ಕೂಡಲೇ ಬಂಧಿಸಿ ತನ್ನ ಸ್ವಾಧೀನಕ್ಕೆ ತಂದುಕೊಳ್ಳಬೇಕು. ರಾಜೇಂದ್ರ! ತನಗೆ ಅಭೀಷ್ಟ ಕಾರ್ಯವನ್ನು ಮಾಡಿಕೊಟ್ಟವನನ್ನು ಧನಸಂಚಯಗಳಿಂದಲೂ, ಪುರಸ್ಕಾರದಿಂದಲೂ, ಸುಮಧುರ ಮಾತುಗಳಿಂದಲೂ ಸತ್ಕರಿಸಬೇಕು. ಕುರುನಂದನ! ಶತ್ರುವನ್ನು ನೋಯಿಸಿ ಅಥವಾ ಕೊಂದು ಶಾಸ್ತ್ರದಲ್ಲಿ ತೋರಿಸಿದ ವಿಧಿ[5]ಗಳಿಂದ ರಾಜನು ಋಣಮುಕ್ತನಾಗಬೇಕು. ರಾಜನಾದವನು ಈ ಏಳನ್ನು ರಕ್ಷಿಸಲೇ ಬೇಕು. ಅವು ಯಾವುದೆಂದು ನನ್ನನ್ನು ಕೇಳು: ತಾನು, ಅಮಾತ್ಯ, ಕೋಶ, ಸೇನೆ, ಮಿತ್ರರು, ರಾಷ್ಟ್ರ ಮತ್ತು ರಾಜಧಾನಿ. ಈ ಏಳನ್ನು ಆತ್ಮರೂಪದಲ್ಲಿ ಪಡೆದ ರಾಜ್ಯವನ್ನು ಪ್ರಯತ್ನಪಟ್ಟು ಪರಿಪಾಲಿಸಬೇಕು. ಪುರುಷವ್ಯಾಘ್ರ! ಆರು ಗುಣಗಳನ್ನು, ಮೂರು ವರ್ಗಗಳನ್ನು ಮತ್ತು ನಂತರ ಮೂರು ಅಪರವರ್ಗಗಳನ್ನು ತಿಳಿದವನು ಈ ಮಹಿಯನ್ನು ಭೋಗಿಸುತ್ತಾನೆ.

ಯುಧಿಷ್ಠಿರ! ಆರುಗುಣಗಳು ಯಾವುವೆನ್ನುವುದನ್ನು ಕೇಳು: ಸಂಧಾನಾಸನ – ಸಮಾನಬಲವುಳ್ಳ ರಾಜರು ಶಕ್ತಿಗುಂದಿ ಸಂಧಿಮಾಡಿಕೊಂಡು ಕುಳಿತುಕೊಳ್ಳುವುದು, ಸಂಧಾಯಾಸನ – ಪ್ರಬಲ ಶತ್ರುವಿನೊಡನೆ ಹೋರಾಡಿ ಪರಾಜಿತನಾಗಿ ಶತ್ರು ಅಥವಾ ಮಿತ್ರನೊಡನೆ ಸೇರಿಕೊಂಡು ಕುಳಿತುಕೊಳ್ಳುವುದು, ವಿಗೃಹ್ಯಾಸನ – ಶತ್ರುವು ಆಕ್ರಮಣಿಸಿದ ನಂತರ ಅಶಕ್ತ ರಾಜನು ಕೋಟೆಯನ್ನು ಪ್ರವೇಶಿಸಿ ಆತ್ಮರಕ್ಷಣೆಯನ್ನು ಮಾಡಿಕೊಂಡು ಕುಳಿತುಕೊಳ್ಳುವುದು, ಯಾತ್ರಾಸಂಪರಿಗ್ರಹಾಸನ ಅಥವಾ ಪ್ರಸಂಗಾಸನ – ಶತ್ರುವಿನೊಡನೆ ಯುದ್ಧವನ್ನು ಪ್ರಾರಂಭಿಸಿ ನಂತರ ಅಶಕ್ತನಾಗಿ ಮಿತ್ರನಿಗಾಗಿ ಕಾದು ಕುಳಿತುಕೊಳ್ಳುವುದು, ದ್ವೈಧೀಭಾವ – ಇಬ್ಬರು ಪ್ರಬಲ ಶತ್ರುಗಳು ಇಬ್ಬರಿಗೂ ತಿಳಿಯದಂತೆ ಇಬ್ಬರಿಗೂ ಸಮನಾಗಿರುವರಂತೆ ನಟಿಸುತ್ತಾ ಕಪಟದಿಂದ ವ್ಯವಹರಿಸುತ್ತಿರುವುದು ಅಥವಾ ಶತ್ರುವಿನ ಸೇನೆಯನ್ನು ಬೇರ್ಪಡಿಸಿ ಮೂಲಬಲದೊಂದಿಗೆ ಸ್ನೇಹಮಾಡಿಕೊಂಡು ಶತ್ರುವಿನೊಡನೆ ಯುದ್ಧಮಾಡುವುದು, ಪರಸಂಶ್ರಯ – ಪ್ರಬಲ ಶತ್ರುವಿನೊಡನೆ ಸಂಧಿಮಾಡಿಕೊಂಡು ದುರ್ಬಲನೊಡನೆ ಯುದ್ಧಮಾಡುವುದು. ಯಾವುದಕ್ಕೆ ತ್ರಿವರ್ಗಗಳೆಂದು ಹೇಳುತ್ತಾರೆ ಎನ್ನುವುದನ್ನೂ ಏಕಾಗ್ರಚಿತ್ತನಾಗಿ ಕೇಳು. ಕ್ಷಯ, ಸ್ಥಾನ, ವೃದ್ಧಿ – ಇವು ತ್ರಿವರ್ಗಗಳು. ಧರ್ಮ, ಅರ್ಥ ಮತ್ತು ಕಾಮಗಳು ಪರಮತ್ರಿವರ್ಗಗಳು. ರಾಜನಾದವನು ಕಾಲಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಏಕೆಂದರೆ ಧರ್ಮದಿಂದ ಪಾಲಿಸಿದರೆ ಮಹೀಪಾಲನು ಹೆಚ್ಚುಕಾಲ ಮಹಿಯನ್ನು ಪಾಲಿಸಿಕೊಂಡಿರಬಹುದು. ಇದೇ ಅರ್ಥಕೊಡುವ ಈ ಎರಡು ಶ್ಲೋಕಗಳನ್ನು ಸ್ವಯಂ ಬೃಹಸ್ಪತಿಯೇ ಹಾಡಿದ್ದನು. ಯಾದವೀಪುತ್ರ! ನಿನಗೆ ಮಂಗಳವಾಗಲಿ. ಅದನ್ನು ನೀನೂ ಕೇಳಬೇಕು. “ಎಲ್ಲ ಕಾರ್ಯಗಳನ್ನೂ ಸರಿಯಾಗಿ ಪೂರೈಸಿ, ಮೇದಿನಿಯನ್ನು ಸರಿಯಾಗಿ ಆಳಿಕೊಂಡು ಪ್ರಜೆಗಳನ್ನು ಮಕ್ಕಳಂತೆ ಪರಿಪಾಲಿಸಿದ ರಾಜನಿಗೆ ಮರಣಾನಂತರ ಸುಖವು ದೊರೆಯುತ್ತದೆ. ಎಲ್ಲ ಧರ್ಮವನ್ನು ಅಲ್ಲಗಳೆದು ಪ್ರಜೆಗಳನ್ನು ಯಾರು ಪರಿಪಾಲಿಸುವುದಿಲ್ಲವೋ ಆ ರಾಜನಿಗೆ ತಪಸ್ಸೆಂದರೇನು? ಅಥವಾ ಯಜ್ಞಗಳೆಂದರೇನು?””

ದಂಡನೀತಿ




ಯುಧಿಷ್ಠಿರನು ಹೇಳಿದನು:

“ಪಿತಾಮಹ! ದಂಡನೀತಿ ಮತ್ತು ರಾಜ – ಇವೆರಡೂ ಸೇರಿದರೆ ರಾಜನೀತಿಯಾಗುತ್ತದೆ. ಯಾರಿಗೆ ಏನನ್ನು ಮಾಡಿದರೆ ರಾಜನೀತಿಯು ಸಿದ್ಧಿಸುವುದು ಎನ್ನುವುದನ್ನು ಹೇಳು.”

ಭೀಷ್ಮನು ಹೇಳಿದನು:

“ರಾಜನ್! ಭಾರತ! ದಂಡನೀತಿಯ ಮಹಾಭಾಗ್ಯದಕುರಿತು ಸಿದ್ಧ ಶಬ್ಧಗಳಿಂದ ಕಾರಣಗಳೊಂದಿಗೆ ಹೇಳುವ ನನ್ನನ್ನು ಕೇಳು. ದಂಡನೀತಿಯು ನಾಲ್ಕು ವರ್ಣದವರೂ ಸ್ವರ್ಧರ್ಮಗಳಲ್ಲಿ ನಿರತರಾಗಿರುವುದನ್ನು ನಿಯಂತ್ರಿಸುತ್ತದೆ. ಒಡೆಯನಿಂದ ಚೆನ್ನಾಗಿ ಬಳಸಲ್ಪಟ್ಟ ಇದು ಎಲ್ಲ ರೀತಿಯ ಅಧರ್ಮಗಳನ್ನೂ ನಾಶಗೊಳಿಸುತ್ತದೆ. ನಾಲ್ಕುವರ್ಣದವರನ್ನೂ ಸ್ವಧರ್ಮದಲ್ಲಿ ನಿರತರಾಗಿರುವಂತೆ ಮತ್ತು ಮರ್ಯಾದೆಗಳ ಸಂಕರವಾಗದಂತೆ ದಂಡನೀತಿಯನ್ನು ಬಳಸಿ ಪ್ರಜೆಗಳ ಕ್ಷೇಮವನ್ನು ನೋಡಿಕೊಂಡಾಗ ಅವರಿಗೆ ಭಯವೆನ್ನುವುದೇ ಇರುವುದಿಲ್ಲ. ಮೂರು ವರ್ಣದವರೂ ಯಥಾವಿಧಿಯಾಗಿ ಯಜ್ಞಾದಿಗಳಿಗೆ ಪ್ರಯತ್ನಿಸುತ್ತಿರಲು ದೇವ-ಮನುಷ್ಯರ ಸುಖವು ಸಮಾಹಿತವಾಗಿದೆ ಎಂದು ತಿಳಿದುಕೋ. ರಾಜನಿಗೆ ಕಾಲವು ಕಾರಣವೋ ಅಥವಾ ರಾಜನು ಬಂದಿರುವ ಕಾಲಕ್ಕೆ ಕಾರಣವೋ? ಎನ್ನುವುದರಲ್ಲಿ ಸಂಶಯತಾಳಬೇಡ. ರಾಜನೇ ಬಂದಿರುವ ಕಾಲಕ್ಕೆ ಕಾರಣನು. ದಂಡನೀತಿಯನ್ನು ಅಳವಡಿಸಿಕೊಂಡು ರಾಜನು ಯಾವಾಗ ಎಲ್ಲರೊಡನೆಯೂ ಸಮನಾಗಿ ವರ್ತಿಸುತ್ತಾನೋ ಆಗ ಶ್ರೇಷ್ಠವಾದ ಕೃತಯುಗ ಎಂಬ ಕಾಲವು ನಡೆಯುತ್ತದೆ. ಕೃತಯುಗದಲ್ಲಿ ಧರ್ಮವೇ ನಡೆಯುತ್ತದೆ. ಅಧರ್ಮವೆನ್ನುವುದೇ ಯಾರಿಗೂ ತಿಳಿದಿರುವುದಿಲ್ಲ. ಎಲ್ಲ ವರ್ಣದವರ ಮನಸ್ಸೂ ಅಧರ್ಮದಲ್ಲಿ ರಮಿಸುವುದಿಲ್ಲ. ಪ್ರಜೆಗಳ ಯೋಗ-ಕ್ಷೇಮಗಳು ನಡೆಯುತ್ತಿರುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ಉತ್ತಮ ಗುಣಯುಕ್ತ ವೈದಿಕ ಕರ್ಮಗಳು ನಡೆಯುತ್ತಿರುತ್ತವೆ. ಎಲ್ಲ ಋತುಗಳೂ ಎಲ್ಲರಿಗೂ ಸುಖವಾಗಿಯೇ ಇರುತ್ತವೆ. ಎಲ್ಲರೂ ನಿರಾಮಯರಾಗಿರುತ್ತಾರೆ. ಸ್ವರ-ವರ್ಣ-ಮನಸ್ಸುಗಳು ಮನುಷ್ಯರಿಗೆ ಪ್ರಸನ್ನವಾಗಿರುತ್ತವೆ. ವ್ಯಾಧಿಗಳು ಇರುವುದಿಲ್ಲ. ಅಲ್ಪಾಯು ನರನು ಅಲ್ಲಿ ಕಾಣಬರುವುದಿಲ್ಲ. ಅಲ್ಲಿ ವಿಧವೆಯರಿರುವುದಿಲ್ಲ. ಕ್ರೂರಿಯು ಹುಟ್ಟುವುದೇ ಇಲ್ಲ. ಕೃಷಿಮಾಡದೇ ಬೆಳೆಗಳು ಬೆಳೆಯುತ್ತವೆ. ಔಷಧಿಗಳು ತಾವಾಗಿಯೇ ಬೆಳೆಯುತ್ತವೆ. ತೊಗಟೆಗಳೂ, ಎಲೆಗಳೂ, ಫಲಗಳೂ ಮತ್ತು ಬೇರುಗಳೂ ವೀರ್ಯವತ್ತಾಗಿರುತ್ತವೆ. ಯುಧಿಷ್ಠಿರ! ಆಗ ಅಧರ್ವವೆನ್ನುವುದೇ ಇರುವುದಿಲ್ಲ. ಕೇವಲ ಧರ್ಮ ಮಾತ್ರ ಇರುತ್ತದೆ. ಇದು ಕೃತಯುಗದ ಗುಣಗಳೆಂದು ತಿಳಿ.

ಯಾವಾಗ ರಾಜನು ದಂಡನೀತಿಯ ನಾಲ್ಕನೆಯ ಅಂಶವನ್ನು ಬಿಟ್ಟು ಮೂರು ಅಂಶಗಳನ್ನು ಮಾತ್ರ ಅನುಸರಿಸುತ್ತಾನೆಯೋ ಆಗ ತ್ರೇತಾಯುಗವು ಪ್ರಾರಂಭವಾಗುತ್ತದೆ. ಸಂಪೂರ್ಣ ನಾಲ್ಕೂ ಅಂಶಗಳನ್ನು ಬಳಸದೇ ದಂಡನೀತಿಯ ಮೂರೇ ಅಂಶಗಳನ್ನು ಬಳಸಿದ ಆ ಕಾಲದಲ್ಲಿ ಬೆಳೆ ಮತ್ತು ಔಷಧಿಗಳನ್ನು ಬೆಳೆಯಲು ಕೃಷಿಮಾಡಬೇಕಾಗುತ್ತದೆ. ಯಾವಾಗ ರಾಜನು ದಂಡನೀತಿಯ ಅರ್ಧವನ್ನು ತ್ಯಜಿಸಿ ಇನ್ನೊಂದು ಅರ್ಧವನ್ನು ಮಾತ್ರ ಅನುಸರಿಸುತ್ತಾನೋ ಆಗ ದ್ವಾಪರ ಎಂಬ ಹೆಸರಿನ ಕಾಲವಾಗಿ ಪರಿವರ್ತನೆಯಾಗುತ್ತದೆ. ಸಂಪೂರ್ಣ ದಂಡನೀತಿಯಲ್ಲದೇ ಅರ್ಧವನ್ನೇ ಅನುಸರಿಸುವ ಕಾಲದಲ್ಲಿ ಭೂಮಿಯಲ್ಲಿ ಕೃಷಿಮಾಡಬೇಕಲ್ಲದೇ ಅದು ಅಲ್ಪ ಫಲವನ್ನೇ ನೀಡುತ್ತದೆ.

ಯಾವಾಗ ಭೂಮಿಪನು ದಂಡನೀತಿಯನ್ನು ಸಂಪೂರ್ಣವಾಗಿ ಪರಿತ್ಯಜಿಸಿ ಅನ್ಯಾಯಮಾರ್ಗಗಳಿಂದ ಪ್ರಜೆಗಳಿಗೆ ಕಷ್ಟಗಳನ್ನು ಕೊಡುತ್ತಾನೋ ಆಗ ಕಲಿಯ ಪ್ರವೇಶವಾಗುತ್ತದೆ. ಕಲಿಕಾಲದಲ್ಲಿ ಅಧರ್ಮವೇ ಹೆಚ್ಚಾಗಿರುತ್ತದೆ. ಧರ್ಮವೆನ್ನುವುದು ಎಲ್ಲಿಯೂ ಇರುವುದಿಲ್ಲ. ಸರ್ವ ವರ್ಣದವರಿಗೂ ತಮ್ಮ ಧರ್ಮದಲ್ಲಿ ಮನಸ್ಸಿರುವುದಿಲ್ಲ. ಶೂದ್ರರು ಭಿಕ್ಷೆಬೇಡಿ ಜೀವಿಸುತ್ತಾರೆ. ಬ್ರಾಹ್ಮಣರು ಸೇವಕರಾಗಿ ಜೀವಿಸುತ್ತಾರೆ. ಯೋಗಕ್ಷೇಮಗಳು ನಾಶವಾಗಿ ವರ್ಣಸಂಕರವಾಗುತ್ತದೆ. ವೈದಿಕ ಕರ್ಮಗಳಲ್ಲಿ ಗುಣವಿರುವಿದಿಲ್ಲ. ಎಲ್ಲ ಋತುಗಳೂ ಎಲ್ಲರಿಗೂ ಸುಖವನ್ನು ನೀಡುವುದಿಲ್ಲ. ಮನುಷ್ಯರು ರೋಗಿಗಳೂ ಆಗುತ್ತಾರೆ. ಮನುಷ್ಯರ ಸ್ವರ-ವರ್ಣ-ಮನಸ್ಸುಗಳು ಸಂಕುಚಿತಗೊಳ್ಳುತ್ತವೆ. ವ್ಯಾಧಿಗಳು ನಡೆಯುತ್ತವೆ. ಚಿಕ್ಕ ವಯಸ್ಸಿನಲ್ಲಿಯೇ ಸಾಯುತ್ತಾರೆ. ವಿಧವೆಯರಾಗುತ್ತಾರೆ. ಪ್ರಜೆಗಳು ಕ್ರೂರಿಗಳಾಗಿ ಹುಟ್ಟುತ್ತಾರೆ. ಕೆಲವು ಕಡೆ ಮಾತ್ರ ಮಳೆಸುರಿಯುತ್ತದೆ ಮತ್ತು ಕೆಲ ಕಡೆಗಳಲ್ಲಿ ಮಾತ್ರ ಕೃಷಿಗಳನ್ನು ಮಾಡಬಹುದು.

ಉತ್ತಮ ದಂಡನೀತಿಯನ್ನು ಸಂಪೂರ್ಣವಾಗಿ ಬಳಸಿ ಪ್ರಜೆಗಳನ್ನು ರಕ್ಷಿಸಲು ರಾಜನು ಬಯಸದೇ ಇದ್ದಾಗ ರಸಗಳೆಲ್ಲವೂ ನಾಶಹೊಂದುತ್ತವೆ. ರಾಜನಾದವನು ಕೃತಯುಗ, ತ್ರೇತಾಯುಗ ಮತ್ತು ದ್ವಾಪರ ಯುಗಗಳನ್ನು ಸೃಷ್ಟಿಸುತ್ತಾನೆ. ಈ ನಾಲ್ಕು ಯುಗಗಳಿಗೆ ರಾಜನೇ ಕಾರಣನಾಗುತ್ತಾನೆ. ಕೃತಯುಗವನ್ನು ಮಾಡಿದ ರಾಜನು ಅಕ್ಷಯ ಸ್ವರ್ಗವನ್ನು ಪಡೆದುಕೊಳ್ಳುತ್ತಾನೆ. ತ್ರೇತಾಯುಗವನ್ನು ನಿರ್ಮಿಸಿದ ರಾಜನಿಗೆ ಅಕ್ಷಯ ಸ್ವರ್ಗವು ದೊರಕುವುದಿಲ್ಲ. ಕಾಲವನ್ನು ದ್ವಾಪರಯುಗವನ್ನಾಗಿ ಪರಿವರ್ತಿಸಿದ ರಾಜನಿಗೆ ಸ್ವಲ್ಪವೇ ಪುಣ್ಯವು ದೊರೆಯುತ್ತದೆ. ಕಲಿಯುಗವನ್ನಾಗಿ ಪರಿವರ್ತಿಸಿದ ರಾಜನು ಅತ್ಯಂತ ಪಾಪವನ್ನು ಪಡೆದುಕೊಳ್ಳುತ್ತಾನೆ. ಅಂತಹ ದುಷ್ಕರ್ಮಿಯು ಪ್ರಜೆಗಳ ಪಾಪಗಳಲ್ಲಿ ಮುಳುಗಿಹೋಗಿ ಅಕೀರ್ತಿಯನ್ನೂ ಪಾಪವನ್ನೂ ಪಡೆದುಕೊಂಡು ಶಾಶ್ವತಕಾಲ ನರಕದಲ್ಲಿ ವಾಸಿಸುತ್ತಾನೆ. ಕ್ಷತ್ರಿಯನಾದವನು ಸದಾ ತಿಳಿದುಕೊಂಡು ದಂಡನೀತಿಯನ್ನು ಮುಂಡಿಟ್ಟುಕೊಂಡು ಇಲ್ಲದಿದ್ದುದನ್ನು ಪಡೆದುಕೊಳ್ಳಬೇಕು ಮತ್ತು ಇದ್ದುದನ್ನು ರಕ್ಷಿಸಿಕೊಳ್ಳಬೇಕು. ಲೋಕಳನ್ನು ಅವುಗಳ ಗಡಿಯೊಳಗೆ ಇರುವಂತೆ ಮಾಡುವ, ಧರ್ಮಮರ್ಯಾದೆಗಳನ್ನು ಮೀರದಂತೆ ನೋಡಿಕೊಳ್ಳುವ, ಮತ್ತು ಚೆನ್ನಾಗಿ ನಡೆಸಿದ ದಂಡನೀತಿಯೇ ತಂದೆ-ತಾಯಿಯರಂತೆ ಪ್ರಜೆಗಳನ್ನು ಪಾಲಿಸುತ್ತದೆ. ಭರತರ್ಷಭ! ದಂಡನೀತಿಯಿಂದಲೇ ಪ್ರಾಣಿಗಳು ಆಗುತ್ತವೆ ಎನ್ನುವುದನ್ನು ತಿಳಿದುಕೋ. ಇದೇ ರಾಜನಾದವನ ಪರಮ ಧರ್ಮ. ಕೌರವ್ಯ! ಆದುದರಿಂದ ಧರ್ಮದಿಂದ ನೀತಿಮಂತನಾಗಿದ್ದುಕೊಂಡು ಪ್ರಜೆಗಳನ್ನು ಪಾಲಿಸು. ಹೀಗೆ ನಡೆದುಕೊಂಡು ಪ್ರಜೆಗಳನ್ನು ರಕ್ಷಿಸಿ ದುರ್ಜಯ ಸ್ವರ್ಗವನ್ನೂ ಗೆಲ್ಲುತ್ತೀಯೆ.”

ರಾಜನಲ್ಲಿರಬೇಕಾದ 36 ಗುಣಗಳ ವರ್ಣನೆ




ಯುಧಿಷ್ಠಿರನು ಹೇಳಿದನು:

“ವೃತ್ತಜ್ಞ! ಯಾವ ವರ್ತನೆಗಳಿಂದ ನಡೆದುಕೊಂಡು ಮಹೀಪತಿಯು ಇಹದಲ್ಲಿ ಮತ್ತು ಪರದಲ್ಲಿ ಸುಖನೀಡುವಂತಹ ವಸ್ತುಗಳನ್ನು ಅನಾಯಾಸವಾಗಿ ಪಡೆದುಕೊಳ್ಳಬಹುದು?”

ಭೀಷ್ಮನು ಹೇಳಿದನು:

“ಯಾವ ಗುಣಗಳನ್ನು ಹೊಂದಿರುವುದರಿಂದ ಮತ್ತು ಕಾರ್ಯಗಳನ್ನು ಮಾಡುವುದರಿಂದ ರಾಜನು ಉತ್ಕರ್ಷವನ್ನು ಹೊಂದುತ್ತಾನೋ ಅವುಗಳ ಸಂಖ್ಯೆಯು ಮೂವತ್ತಾರು. (೧) ಯಾರೊಡನೆಯು ಕಟುಮಾತುಗಳನ್ನಾಡದೇ ಧರ್ಮವನ್ನು ಆಚರಿಸುವುದು (೨) ನಾಸ್ತಿಕನಾಗಿರದೇ ಎಲ್ಲರೊಡನೆ ಸ್ನೇಹದಿಂದಿರುವುದು (೩) ದಯಾಪರನಾಗಿದ್ದುಕೊಂಡೇ ಅರ್ಥವನ್ನು ಸಂಪಾದಿಸವುದು (೪) ಲೋಕಮರ್ಯಾದೆಯನ್ನು ಅತಿಕ್ರಮಿಸದೇ ವಿಷಯಸುಖಗಳನ್ನು ಅನುಭವಿಸುವುದು (೫) ಕೃಪಣತೆಯಿಲ್ಲದೇ ಪ್ರಿಯಮಾತುಗಳನ್ನೇ ಆಡುವುದು (೬) ಶೂರನಾಗಿದ್ದರೂ ಆತ್ಮಪ್ರಶಂಸೆಯನ್ನು ಮಾಡಿಕೊಳ್ಳದೇ ಇರುವುದು (೭) ದಾನಶೀಲನಾಗಿದ್ದುಕೊಂಡು ಅಪಾತ್ರರಿಗೆ ದಾನಮಾಡದ ಇರುವುದು (೮) ಸಾಹಸಿಯಾಗಿರವುದು, ದಯಾಪರನಾಗಿರವುದು ಮತ್ತ ನಿಷ್ಠುರಮಾತುಗಳನ್ನಾಡದಿರುವುದು (೯) ಅನಾರ್ಯರೊಡನೆ ಸಂಬಂಧವನ್ನಿಟ್ಟುಕೊಳ್ಳದೇ ಇರುವುದು (೧೦) ಬಂಧುಗಳೊಡನೆ ಜಗಳವಾಡದೇ ಇರುವುದು (೧೧) ರಾಜನಲ್ಲಿ ಭಕ್ತಿಯಿಲ್ಲದಿರುವವನನ್ನು ಗೂಢಚರನನ್ನಾಗಿಟ್ಟುಕೊಳ್ಳದೇ ಇರುವುದು (೧೨) ಯಾರಿಗೂ ಪೀಡೆಯಾಗದ ರೀತಿಯಲ್ಲಿ ರಾಜಕಾರ್ಯಗಳನ್ನು ಸಾಧಿಸಿಕೊಳ್ಳುವುದು (೧೩) ದುಷ್ಟರಿಗೆ ಅಭೀಷ್ಟ ರಾಜಕಾರ್ಯಗಳನ್ನು ಹೇಳದಿರುವುದು (೧೪) ತನ್ನ ಗುಣಗಳನ್ನು ತಾನೇ ಹೊಗಳಿಕೊಳ್ಳದಿರುವುದು (೧೫) ಸಾಧು-ಸತ್ಪುರುಷರಿಂದ ರಾಜಕಾಣಿಕೆಯನ್ನು ತೆಗೆದುಕೊಳ್ಳದೇ ಇರುವುದು (೧೬) ನೀಚರನ್ನು ಆಶ್ರಯಿಸದೇ ಇರುವುದು (೧೭) ಪರಕ್ಷಿಸದೆಯೇ ದಂಡನೆಯನ್ನು ನೀಡದಿರುವುದು (೧೮) ಮಂತ್ರಾಲೋಚನೆಗಳನ್ನು ಬಹಿರಂಗ ಪಡಿಸದೇ ಇರುವುದು (೧೯) ಲೋಭಿಗಳಿಗೆ ಹಣವನ್ನು ಕೊಡದೇ ಇರುವುದು (೨೦) ಒಮ್ಮೆ ಅಪಕಾರ ಮಾಡಿದವರ ಮೇಲೆ ಪುನಃ ವಿಶ್ವಾಸವನ್ನಿಡದಿರುವುದು (೨೧) ಪರಸ್ಪರರು ಅಸೂಯೆಪಡದಂತೆ ಪತ್ನಿಯರನ್ನು ನೋಡಿಕೊಳ್ಳುವುದು (೨೨) ದಕ್ಷತೆ (೨೩) ಸ್ತ್ರೀಯರಲ್ಲಿ ಹೆಚ್ಚು ಅನುರಕ್ತನಾಗದೇ ಇರುವುದು (೨೪) ಶುದ್ಧವಾದ ಮತ್ತು ರುಚಿಕರ ಭೋಜನವನ್ನೇ ಮಾಡುವುದು (೨೫) ಆಡಂಬರ ತೋರಿಸದೇ ವಿನಯ ಭಾವದಿಂದ ಮಹನೀಯರನ್ನು ಪೂಜಿಸುವುದು (೨೬) ಕಪಟವಿಲ್ಲದೇ ಗುರುಜನರ ಸೇವೆಮಾಡುವುದು (೨೭) ದಂಭಾಹಂಕಾರ ರಹಿತನಾಗಿ ದೇವತೆಗಳನ್ನು ಪೂಜಿಸುವುದು (೨೮) ದೋಷರಹಿತ ಸಂಪತ್ತಿನ ಸಂಗ್ರಹದಲ್ಲಿಯೇ ಆಸಕ್ತನಾಗಿರುವುದು (೨೯) ಪಕ್ಷಪಾತವಿಲ್ಲದೇ ಪ್ರಜೆಗಳನ್ನು ಪಾಲಿಸುವುದು (೩೦) ದಕ್ಷನಾಗಿರುವುದು, ಕಾಲ-ದೇಶಗಳಿಗನುಗುಣವಾಗಿ ಕಾರ್ಯಗಳನ್ನು ಕೈಗೊಳ್ಳುವುದು (೩೧) ಆಸೆಯಿಟ್ಟುಕೊಂಡು ಬಂದಿರುವವನಿಗೆ ಏನನ್ನೂ ಕೊಡದೇ ಕೇವಲ ಸಾಂತ್ವನಮಾತುಗಳನ್ನಾಡಿ ಕಳುಹಿಸದೇ ಇರುವುದು (೩೨) ಕೃಪೆದೋರುವಾಗ ನಿಂದಿಸದೇ ಇರುವುದು (೩೩) ತಿಳಿಯದೇ ಶತ್ರುವೆಂದು ಯಾರನ್ನೂ ಪ್ರಹರಿಸದೇ ಇರುವುದು (೩೪) ಸಂಬಂಧಿಯಾಗಿದ್ದರೂ ಶತ್ರುವನ್ನು ಸಂಹರಿಸಿದ ನಂತರ ಶೋಕಿಸದೇ ಇರುವುದು (೩೫) ಕಾರಣವಿಲ್ಲದೇ ಯಾರಮೇಲೂ ಕೋಪಿಸಿಕೊಳ್ಳದೇ ಇರುವುದು ಮತ್ತು (೩೬) ಪಾಪಿಗಳ ವಿಷಯದಲ್ಲ ಮೃದುವಾಗಿರದೇ ಇರುವುದು.

ಇಲ್ಲಿ ಶ್ರೇಯಸ್ಸನ್ನು ಬಯಸುವೆಯಾದರೆ ರಾಜ್ಯಸ್ಥನಾಗಿ ಹೀಗೆಯೇ ನಡೆದುಕೋ. ಅನ್ಯಥಾ ನರಪತಿಯು ಭಯವನ್ನು ತಂದುಕೊಳ್ಳತ್ತಾನೆ ಮತ್ತು ಸುದಾರುಣ ಆಪತ್ತಿಗೆ ಗುರಿಯಾಗುತ್ತಾನೆ. ಈ ಎಲ್ಲ ಗುಣಗಳನ್ನೂ ಕಾರ್ಯರೂಪಕ್ಕೆ ತರುವ ರಾಜನು ಇಲ್ಲ ಸಕಲವಿಧದ ಕಲ್ಯಾಣಗಳಿಗೂ ಪಾತ್ರನಾಗಿ ಅವಸಾನಾನಂತರ ಸ್ವರ್ಗಲೋಕದಲ್ಲಿ ವಿರಾಜಿಸುತ್ತಾನೆ.”

ಪ್ರಜಾಪರಿಪಾಲನೆಯ ಅರ್ಥ




ಯುಧಿಷ್ಠಿರನು ಹೇಳಿದನು:

“ಪಿತಾಮಹ! ರಾಜನು ಹೇಗೆ ಪ್ರಜೆಗಳನ್ನು ರಕ್ಷಿಸುತ್ತಿದ್ದರೆ ಚಿಂತೆಯಲ್ಲಿ ಮಗ್ನನಾಗುವುದಿಲ್ಲ ಮತ್ತು ಧರ್ಮದ ವಿಷಯದಲ್ಲಿ ಅಪರಾಧಿಯಾಗುವುದಿಲ್ಲ ಎನ್ನುವುದನ್ನು ಹೇಳು.”

ಭೀಷ್ಮನು ಹೇಳಿದನು:

“ಅಯ್ಯಾ! ನಿಶ್ಚಿತ ಧರ್ಮಗಳನ್ನು ಸಂಕ್ಷಿಪ್ತವಾಗಿಯೇ ನಿನಗೆ ಹೇಳುತ್ತೇನೆ. ಈ ಎಲ್ಲ ಧರ್ಮಗಳನ್ನು ವಿಸ್ತಾರವಾಗಿ ಹೇಳಹೊರಟರೆ ಅದು ಮುಗಿಯುವಂಥಹುದ್ದಲ್ಲ. ಧರ್ಮನಿಷ್ಠ, ಶ್ರುತವತ, ವೇದವ್ರತಸಮಾಹಿತ ಗುಣವಂತ ದ್ವಿಜರನ್ನು ನಿನ್ನ ಮನೆಗೆ ಕರೆಯಿಸಿ ಮೇಲೆದ್ದು ಅರ್ಚಸಿ ಸ್ವಾಗತಿಸಬೇಕು. ಅವರ ಚರಣಗಳಿಗೆ ವಂದಿಸಿ ಪುರೋಹಿತನೊಂದಿಗೆ ಸರ್ವ ಕರ್ಮಗಳನ್ನೂ ಮಾಡಿಸಬೇಕು. ಹೀಗೆ ಧರ್ಮಕಾರ್ಯಗಳನ್ನು ಮುಗಿಸಿ ಮಂಗಲ ವಸ್ತುಗಳನ್ನು ಮುಟ್ಟಿ ಅರ್ಥಸಿದ್ಧಿಗಾಗಿ ಜಯಾಶೀರ್ವಚನಗಳನ್ನು ಬ್ರಾಹ್ಮಣರ ಮುಖೇನ ಹೇಳಿಸಿಕೊಳ್ಳಬೇಕು.ಭಾರತ! ಸರಳನಾಗಿರಬೇಕು. ಧೈರ್ಯ-ಬುದ್ಧಿಗಳಿಂದ ಸಂಪನ್ನನಾಗಿರಬೇಕು. ಯಥಾರ್ಥವಾದುದನ್ನೇ ಪ್ರತಿಗ್ರಹಿಸಬೇಕು. ಕಾಮ-ಕ್ರೋಧಗಳನ್ನು ಪರಿತ್ಯಜಿಸಬೇಕು. ಕಾಮ-ಕ್ರೋಧಗಳನ್ನು ಮುಂದಿಟ್ಟುಕೊಂಡು ಅರ್ಥವನ್ನು ಗಳಿಸಲು ಪ್ರಯತ್ನಿಸುವ ಮೂರ್ಖ ರಾಜನು ಧರ್ಮವನ್ನಾಗಲೀ ಅರ್ಥವನ್ನಾಗಲೀ ಪ್ರಹಿಗ್ರಹಿಸಲಾರನು. ಲುಬ್ಧರನ್ನು ಮೂರ್ಖರನ್ನೂ ಕಾಮಾರ್ಥಗಳ ಸಾಧನೆಗೆ ನಿಯೋಜಿಸಬೇಡ. ಅಲುಬ್ಧರನ್ನೂ ಬುದ್ಧಿಸಂಪನ್ನರನ್ನೂ ಎಲ್ಲ ಕಾರ್ಯಗಳಿಗೆ ನಿಯೋಜಿಸಬೇಕು. ಕಾರ್ಯಗಳಲ್ಲಿ ಕುಶಲನಲ್ಲದ ಮತ್ತು ಕಾಮ-ದ್ವೇಷ ಸಮನ್ವಿತನಾದ ಮೂರ್ಖನನ್ನು ಅರ್ಥಸಂಗ್ರಹಕ್ಕೆ ಅಧಿಕಾರಿಯನ್ನಾಗಿ ನಿಯೋಜಿಸಿಕೊಂಡರೆ ಅವನು ಕುತ್ಸಿತ ಉಪಾಯಗಳಿಂದ ಪ್ರಜೆಗಳನ್ನು ಕಷ್ಟಕ್ಕೀಡುಮಾಡುತ್ತಾನೆ. ಪ್ರಜೆಗಳ ಆದಾಯದ ಆರನೆಯ ಒಂದು ಭಾಗವನ್ನು ರಾಜಾದಯವನ್ನಾಗಿ ಪಡೆಯಬೇಕು. ಅಪರಾಧಿಗಳಿಗೆ ದಂದವನ್ನು ವಿಧಿಸಬೇಕು. ಶಾಸ್ತ್ರಾನುಸಾರವಾಗಿ ರಾಜಸೇವಕರಿಂದ ಸಂರಕ್ಷತ ವ್ಯಾಪಾರಿಗಳಿಂದ ಧನವನ್ನು ಸಂಗ್ರಹಿಸಬೇಕು. ಧರ್ಮಾನುಕೂಲವಾಗಿ ಕರವನ್ನು ತೆಗೆದುಕೊಂಡು ಧರ್ಮದಿಂದ ಯಥಾವಿಧಿಯಾಗಿ ನಿತ್ಯವೂ ಆಲಸಿಕೆಯಿಲ್ಲದೇ ರಾಷ್ಟ್ರದ ಯೋಗಕ್ಷೇಮಗಳನ್ನು ನೋಡಿಕೊಳ್ಳಬೇಕು. ರಕ್ಷಿಸುವ, ದಾನಮಾಡುವ, ಧರ್ಮನಿತ್ಯನೂ, ಆಲಸಿಕೆಯಿಲ್ಲದವನೂ, ಕಾಮದ್ವೇಷಗಳಿಲ್ಲದವನೂ ಆದ ರಾಜನನ್ನು ಪ್ರಜೆಗಳು ಪ್ರೀತಿಸುತ್ತಾರೆ. ನೀನು ಅಧರ್ಮಪೂರ್ವಕವಾಗಿ ಲಾಭದ ಆಸೆಯಿಂದ ಧನವನ್ನು ಸಂಗ್ರಹಿಸಬೇಡ. ನೀತಿಶಾಸ್ತ್ರಗಳನ್ನು ಉಲ್ಲಂಘಸಿರುವವನಲ್ಲಿ ಧರ್ಮ-ಅರ್ಥ ಇವೆರಡೂ ಸ್ಥಿರವಾಗಿ ನಿಲ್ಲುವುದಿಲ್ಲ. ಶಾಸ್ತ್ರಕ್ಕೆ ವಿರುದ್ಧವಾಗಿ ವರ್ತಿಸುವ ರಾಜನು ಧರ್ಮಮೂಲವಾಗಿ ಅಧಿಕ ಧನವನ್ನು ಸಂಗ್ರಹಿಸುವುದಿಲ್ಲ. ಅಧರ್ಮಮೂಲಕವಾಗಿ ಪಡೆದ ಎಲ್ಲ ಧನವೂ ದುರ್ವ್ಯಯವಾಗಿ ನಾಶವಾಗುತ್ತದೆ. ಅರ್ಥವನ್ನೇ ಪ್ರಧಾನವಾಗಿಟ್ಟುಕೊಂಡು ಲೋಭಿ ರಾಜನು ಶಾಸ್ತ್ರವಿರುದ್ಧವಾಗಿ ಪ್ರಜೆಗಳನ್ನು ಪೀಡಿಸಿ ಅಧಿಕ ತೆರಿಗೆಗಳ ಮೂಲಕ ಧನಸಂಪಾದಿಸಿದರೆ ಅದು ಅವನಿಗೇ ಪೀಡೆಯನ್ನು ತರುತ್ತದೆ. ಹಾಲನ್ನು ಅಪೇಕ್ಷಿಸುವವನು ಹಸುವು ಕೊಡುವಷ್ಟು ಹಾಲನ್ನು ಕೆಚ್ಚಲಿನಿಂದ ಕರೆದುಕೊಂಡು ತೃಪ್ತನಾಗಬೇಕೇ ಹೊರತು ಕೆಚ್ಚಲನ್ನೇ ಕತ್ತರಿಸಬಿಡಬಾರದು. ಹಾಗೆ ಮಾಡುವುದರಿಂದ ಅವನಿಗೆ ಹಾಲಿನ ಒಂದು ಹನಿಯ ದೊರಕುವುದಿಲ್ಲ. ಹಾಗೆಯೇ ಕುತ್ಸಿತ ಉಪಾಯಗಳಿಂದ ಪ್ರಜೆಗಳನ್ನು ಪೀಡಿಸಿದರೆ ರಾಷ್ಟ್ರವು ಅಭಿವೃದ್ಧಿಹೊಂದುವುದಿಲ್ಲ. ಹಸುವನ್ನು ಸಾಕುವವನಿಗೆ ಹಾಲು ನಿತ್ಯವೂ ದೊರೆಯುತ್ತದೆ. ಹಾಗೆಯೇ ಉಪಾಯದಿಂದ ರಾಷ್ಟ್ರವನ್ನು ಭೋಗಿಸುವವನಿಗೆ ಫಲವು ದೊರೆಯುತ್ತದೆ.

ಯುಧಿಷ್ಠಿರ! ಸುರಕ್ಷಿತವಾಗಿಟ್ಟುಕೊಂಡು ಉಪಾಯದಿಂದ ಭೋಗಿಸುವವನ ರಾಷ್ಟ್ರದಲ್ಲಿ ನಿತ್ಯವೂ ಅತುಲ ಕೋಶವೃದ್ಧಿಯಾಗುತ್ತದೆ. ರಾಜನಿಂದ ಸುರಕ್ಷಿತವಾದ ಈ ಭೂಮಿಯು ತನ್ನ ಕರುವಿಗಲ್ಲದೇ ಇತರರಿಗೂ ಸಾಕಾಗುವಷ್ಟು ಹಾಲನ್ನು ಕೊಡುವ ತಾಯಿಹಸುವಿನಂತೆ ಹಸುಗಳು, ಧಾನ್ಯ, ಹಿರಣ್ಯ ಮತ್ತು ಸಂತಾನಗಳನ್ನು ನೀಡುತ್ತಿರುತ್ತದೆ. ರಾಜನ್! ನೀನು ಹೂವಿನ ಮಾಲೆಕಟ್ಟುವವನಂತಾಗು. ಇದ್ದಿಲು ಮಾಡುವವನಂತಾಗಬೇಡ. ಹಾಗಿದ್ದರೆ ನೀನು ಬಹುಕಾಲ ರಾಷ್ಟ್ರವನ್ನು ಪಾಲಿಸಿಕೊಂಡು ಭೋಗಿಸಬಲ್ಲೆ. ಶತ್ರುಗಳ ಆಕ್ರಮಣದಿಂದಾಗಿ ಒಂದುವೇಳೆ ನಿನ್ನ ಧನವು ಕಡಿಮೆಯಾದರೆ ಸಾಮದಿಂದ ಧನಿಕ ಕ್ಷತ್ರಿಯ, ವೈಶ್ಯ ಶೂದ್ರರಿಂದ ಧನವನ್ನು ಪಡೆದುಕೊಳ್ಳಬೇಕು. ಭಾರತ! ನೀನು ಎಂತಹುದೇ ದುರವಸ್ಥೆಯಲ್ಲಿದ್ದರೂ, ಅಂತ್ಯಾವಸ್ಥೆಯಲ್ಲಿದ್ದರೂ, ಧನದ ಅಭಾವದಿಂದ ಪ್ರಾಣಹೋಗುವ ಸಮಯ ಬಂದರೂ ಐಶ್ವರ್ಯವಂತ ಬ್ರಾಹ್ಮಣರನ್ನು ನೋಡಿ ಅವರಿಂದ ಧನವನ್ನು ಸಂಗ್ರಹಿಸಬೇಕೆಂಬ ಚಾಂಚಲ್ಯವು ನಿನ್ನ ಮನಸ್ಸಿನಲ್ಲಿ ಮೂಡದಿರಲಿ. ಹೀಗಿರುವಾಗ ನೀನು ಐಶ್ವರ್ಯವಂತನಾಗಿರುವಾಗ ಬ್ರಾಹ್ಮಣನ ಸ್ವತ್ತಿನ ವಿಷಯದಲ್ಲಿ ಇನ್ನು ಹೇಳಬೇಕಾಗಿಲ್ಲ. ಯಥಾಶಕ್ತಿ ಯಥಾರ್ಹವಾಗಿ ಬ್ರಾಹ್ಮಣರಿಗೆ ನೀನು ಧನವನ್ನು ನೀಡುತ್ತಲೇ ಇರಬೇಕು. ಅವರನ್ನು ಸಾಂತ್ವನಪೂರ್ವಕವಾಗಿ ಪರಿರಕ್ಷಿಸುವುದರಿಂದ ನೀನು ಜಯಿಸಲಸಾಧ್ಯ ಸ್ವರ್ಗವನ್ನು ಪಡೆದುಕೊಳ್ಳುತ್ತೀಯೆ. ಕುರುನಂದನ! ಈ ರೀತಿಯಲ್ಲಿ ಧರ್ಮದಿಂದ ವ್ಯವಹರಿಸಿ ಪ್ರಜೆಗಳನ್ನು ನೀನು ಪರಿಪಾಲಿಸಿ ಸ್ವಂತ ಪುಣ್ಯವನ್ನೂ ಗಳಿಸುತ್ತೀಯೆ ಮತ್ತು ಯಶೋವಂತನೂ ಆಗುತ್ತೀಯೆ. ಪಾಂಡವ! ಧರ್ಮವ್ಯವಹಾರಗಳಿಂದ ಪ್ರಜೆಗಳನ್ನು ಪಾಲಿಸು.

ಯುಧಿಷ್ಠಿರ! ಆಗ ನೀನು ಮಾನಸಿಕ ವ್ಯಥೆಯ ಬಂಧನಕ್ಕೆ ಒಳಗಾಗುವುದಿಲ್ಲ. ರಾಜನು ಪ್ರಜೆಗಳನ್ನು ರಕ್ಷಿಸುತ್ತಿದ್ದಾನೆ ಎನ್ನುವುದೇ ರಾಜನಾದವನಿಗೆ ಪರಮ ಧರ್ಮವು. ಸರ್ವವನ್ನೂ ರಕ್ಷಿಸುವುದು ಮತ್ತು ಇತರರನ್ನು ಪರಮ ದಯೆಯಿಂದ ಕಾಣುವುದು ಇವೇ ರಾಜನ ಧರ್ಮಗಳು. ಆದುದರಿಂದಲೇ ಜೀವಿಗಳಿಗೆ ದಯೆಯನ್ನು ತೋರಿಸುತ್ತಾ ರಾಜನು ರಕ್ಷಿಸುತ್ತಿದ್ದಾನಂದರೆ ಅದೇ ಪರಮ ಧರ್ಮವೆಂದು ಧರ್ಮಕೋವಿದರು ಮನ್ನಿಸುತ್ತಾರೆ. ಪ್ರಜೆಗಳನ್ನು ಭಯದಿಂದ ಒಂದು ಹಗಲು ರಕ್ಷಿಸದೇ ಇದ್ದರೂ ರಾಜನಾದವನು ಒಂದು ಸಾವಿರ ವರ್ಷಗಳು ನರಕದಲ್ಲಿ ಕಳೆದನಂತರವೇ ಆ ಪಾಪವು ಕೊನೆಯಾಗುತ್ತದೆ. ಪ್ರಜೆಗಳನ್ನು ಧರ್ಮದಿಂದ ಪರಿಪಾಲಿಸಿದ ಪುಣ್ಯವನ್ನು ಒಂದು ಹಗಲೇ ಮಾಡಿದರೂ ಅದರ ಫಲವನ್ನು ರಾಜನು ಹತ್ತು ಸಾವಿರ ವರ್ಷಗಳು ಸ್ವರ್ಗದಲ್ಲಿ ಭೋಗಿಸುತ್ತಾನೆ. ಆಶ್ರಮಧರ್ಮಗಳನ್ನು ಪಾಲಿಸುವವರು ಯಾಗಗಳು, ಸ್ವಾಧ್ಯಾಯ ಮತ್ತು ಮಹಾ ತಪಸ್ಸುಗಳಿಂದ ಯಾವ ಲೋಕವನ್ನು ಗೆಲ್ಲುತ್ತಾರೋ ಆ ಲೋಕಗಳನ್ನು ಪ್ರಜೆಗಳನ್ನು ಧರ್ಮದಿಂದ ಪಾಲಿಸುವ ರಾಜನು ಕ್ಷಣದಲ್ಲಿಯೇ ಪಡೆದುಕೊಳ್ಳುತ್ತಾನೆ. ಕೌಂತೇಯ! ಹೀಗೆ ಪ್ರಯತ್ನಪಟ್ಟು ಧರ್ಮವನ್ನು ಪರಿಪಾಲಿಸು. ಇದರಿಂದ ಪುಣ್ಯಫಲವನ್ನು ಪಡೆದು ಮನೋವ್ಯಥೆಯ ಬಂಧನಕ್ಕೆ ಸಿಲುಕುವುದಿಲ್ಲ. ಪಾಂಡವ! ರಾಜರಲ್ಲದವರಿಗೆ ಈ ರೀತಿಯ ಧರ್ಮವು ಅಸಂಭವವು. ಸ್ವರ್ಗಲೋಕದಲ್ಲಿ ನೀನು ಮಹಾ ಶ್ರೀಯನ್ನು ಪಡೆದುಕೊಳ್ಳುತ್ತೀಯೆ. ಆದುದರಿಂದ ರಾಜ್ಯದಿಂದಲೇ ಈ ಮಹಾ ಫಲವು ಪ್ರಾಪ್ತವಾಗುತ್ತದೆ. ಅನ್ಯಥಾ ಅಲ್ಲ. ಧೈರ್ಯದಿಂದ ಪಡೆದುಕೊಂಡ ಈ ರಾಜ್ಯವನ್ನು ಧರ್ಮದಿಂದ ಪರಿಪಾಲಿಸಿ ಸೋಮದಿಂದ ಇಂದ್ರನನ್ನು ತೃಪ್ತಿಪಡಿಸಿ ಕಾಮಗಳಿಂದ ಸುಹೃದ ಜನರನ್ನು ತೃಪ್ತಿಗೊಳಿಸು.”

***

[1] ಮತ್ತ, ಉನ್ಮತ್ತ, ದಸ್ಯು, ತಸ್ಕರ, ವಂಚಕ, ಶಠ, ಲಂಪಟ, ಜೂಜುಕೋರ, ಸುಳ್ಳುಪತ್ರ ತಯಾರಿಸುವವನು ಮತ್ತು ಲಂಚಕೋರ- ಈ ಹತ್ತು ದಂಡನೀಯ ವ್ಯವಹಾರಗಳಲ್ಲಿರುವವರು.

[2] ನ್ಯಾಯ ನೀಡುವ ಅವಕಾಶವು ಬಂದೊದಗಿದಾಗ

[3] ಪ್ರಕಂಡಿಯ ಲಕ್ಷಣವನ್ನು ಹೀಗೆ ಹೇಳಿದ್ದಾರೆ: ಸಂಚಾರೋ ಯತ್ರಲೋಕಾನಾಂ ದೂರಾದೇವಾವಬುಧ್ಯತೇ| ಪ್ರಕಂಠೀ ಸಾ ಚ ವಿಜ್ಞೇಯಾ ಬಹಿಃಪ್ರಾಕಾರಸಂಜ್ಞಿತಾ|| ಜನರ ಸಂಚಾರವು ಬಹಳ ದೂರದಿಂದಲೇ ತಿಳಿಯಲ್ಪಡುವ ಸ್ಥಾನಕ್ಕೆ ಪ್ರಕಂಡೀ ಎಂದು ಹೆಸರು.ಅದಕ್ಕೆ ಬಹಿಃಪ್ರಾಕಾರವೆಂದೂ ಹೆಸರು.

[4] ವಿಷವನ್ನು ಹೋಗಲಾಡಿಸುವವನು, ಗಾಯದ ಮೇಲೆ ಪಟ್ಟಿಯನ್ನು ಕಟ್ಟುವವನು, ರೋಗವನ್ನು ಹೋಗಲಾಡಿಸುವವನು ಮತ್ತು ಅಭಿಚಾರಿ ಕೃತ್ಯಗಳನ್ನು ನಿವಾರಿಸುವವನು.

[5] ಶತ್ರುರಾಜನ ವಂಶೀಯರಿಗೇ ರಾಜ್ಯದಲ್ಲಿ ಪಟ್ಟಗಟ್ಟಿ.

The other spiritual discourses in Mahabharata (Kannada):

  1. ತೀರ್ಥಯಾತ್ರಾಮಹಾತ್ಮೆ: ಭೀಷ್ಮ-ಪುಲಸ್ತ್ಯರ ಸಂವಾದ
  2. ಧೌಮ್ಯನು ಯುಧಿಷ್ಠಿರನಿಗೆ ತೀರ್ಥಯಾತಾಕ್ಷೇತ್ರಗಳನ್ನು ವರ್ಣಿಸಿದುದು
  3. ಯುಧಿಷ್ಠಿರ-ಮಾರ್ಕಂಡೇಯ ಸಂವಾದ
  4. ಸರಸ್ವತೀಗೀತೆ
  5. ಕೌಶಿಕ-ಪತಿವ್ರತೆ-ಧರ್ಮವ್ಯಾಧ
  6. ವಿದುರನೀತಿ
  7. ಸನತ್ಸುಜಾತಿಯ
  8. ಭೌಮಗುಣಕಥನ
  9. ಶ್ರೀಮದ್ಭಗವದ್ಗೀತಾ
  10. ಸೇನಜಿತ್-ಬ್ರಾಹ್ಮಣ ಸಂವಾದ; ಪಿಂಗಲ ಗೀತೆ
  11. ಪಿತಾಪುತ್ರ ಸಂವಾದ
  12. ಶಮ್ಯಾಕಗೀತೆ
  13. ಮಂಕಿಗೀತೆ
  14. ಭೃಗು-ಭರದ್ವಾಜ ಸಂವಾದ
  15. ಸಾಂಖ್ಯ ಯೋಗ: ಯಾಜ್ಞವಲ್ಕ್ಯ-ಜನಕ ಸಂವಾದ

Continue reading...
 
Top