VyasaOnline ಭೀಷ್ಮ-ಯುಧಿಷ್ಠಿರ ಸಂವಾದ: ರಾಜಧರ್ಮ – 5

  • Thread starter Ramesh Banadakoppa Manjappa
  • Start date
R

Ramesh Banadakoppa Manjappa

Guest

ಭೀಷ್ಮ-ಯುಧಿಷ್ಠಿರ ಸಂವಾದ: ರಾಜಧರ್ಮ - 5


ಓಂ' ಬಗ್ಗೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳು | things-you-dint-know-about-om - Kannada BoldSky


ರಾಜನ ಕರ್ತ್ಯವ್ಯಗಳು ಮತ್ತು ರಾಜ್ಯದ ಮಹಿಮೆಯನ್ನು ವರ್ಣಿಸುವ ಈ ಭೀಷ್ಮ-ಯುಧಿಷ್ಠಿರರ ಸಂವಾದವು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 77-78ರಲ್ಲಿ ಬರುತ್ತದೆ.

***

ಯುಧಿಷ್ಠಿರನು ಹೇಳಿದನು:

“ಪಿತಾಮಹ! ಮಹೀಪಾಲನು ಹೇಗೆ ನಡೆದುಕೊಂಡರೆ ಪ್ರಜೆಗಳ ವೃದ್ಧಿಯಾಗುತ್ತದೆ? ಮತ್ತು ಪುಣ್ಯ ಲೋಕಗಳನ್ನು ಜಯಿಸಬಲ್ಲ? ಇದನ್ನು ನನಗೆ ಹೇಳು.”

ಭೀಷ್ಮನು ಹೇಳಿದನು:

“ಭಾರತ! ರಾಜನಾದವನು ದಾನಶೀಲನೂ ಯಜ್ಞಶೀಲನೂ ಆಗಿರಬೇಕು. ಉಪವಾಸ ಮತ್ತು ತಪಃಶೀಲನಾಗಿ ಪ್ರಜೆಗಳ ಪಾಲನೆಯಲ್ಲಿಯೇ ನಿರತನಾಗಿರಬೇಕು. ಸರ್ವ ಪ್ರಜೆಗಳನ್ನು ರಾಜನು ನಿತ್ಯವೂ ಧರ್ಮದಿಂದ ಪಾಲಿಸಬೇಕು. ಧಾರ್ಮಿಕರನ್ನು ಅಪ್ರಮಾದದಿಂದ ಮೇಲೆದ್ದು ಪೂಜಿಸಬೇಕು. ರಾಜನಿಂದ ಪೂಜಿಸಲ್ಪಟ್ಟ ಧರ್ಮವು ಸರ್ವತ್ರ ಪೂಜಿಸಲ್ಪಡುತ್ತದೆ. ಆಗ ರಾಜನು ಆಚರಿಸಿದುದೆಲ್ಲವೂ ಪ್ರಜೆಗಳಿಗೆ ಹಿತವೆನಿಸುತ್ತವೆ. ನಿತ್ಯವೂ ದಂಡವನ್ನು ಎತ್ತಿ ಹಿಡಿದು ಶತ್ರುಗಳಿಗೆ ಮೃತ್ಯುವಿನಂತಿರಬೇಕು. ಎಲ್ಲಕಡೆ ಎಲ್ಲ ದಸ್ಯುಗಳನ್ನೂ ಸಂಹರಿಸಬೇಕು. ಯಾರಿಗೂ ಕ್ಷಮೆಯನ್ನು ನೀಡಬಾರದು. ಭಾರತ! ರಾಜನಿಂದ ಸುರಕ್ಷಿತರಾದ ಪ್ರಜೆಗಳು ಇಲ್ಲಿ ಯಾವ ಧರ್ಮಕರ್ಮಗಳನ್ನು ಮಾಡುತ್ತಾರೋ ಅದರ ನಾಲ್ಕನೆಯ ಒಂದು ಭಾಗವು ರಾಜನಿಗೆ ಸೇರುತ್ತದೆ. ಪ್ರಜೆಗಳನ್ನು ಧರ್ಮದಿಂದ ಪಾಲಿಸಿದ ರಾಜನಿಗೆ ಅವರು ಅಧ್ಯಯನ ಮಾಡುವುದರ, ಯಜ್ಞಗಳ, ದಾನಗಳ ಮತ್ತು ಪೂಜೆಗಳ ನಾಲ್ಕನೆಯ ಒಂದು ಭಾಗವು ದೊರೆಯುತ್ತದೆ. ಭಾರತ! ಯಾವ ರಾಷ್ಟ್ರದಲ್ಲಿ ರಾಜನು ಪ್ರಜೆಗಳನ್ನು ರಕ್ಷಿಸುವುದಿಲ್ಲವೋ ಮತ್ತು ಪ್ರಜೆಗಳು ಅಕುಶಲರಾಗಿರುವರೋ ಆ ರಾಷ್ಟ್ರದಲ್ಲಿ ಪ್ರಜೆಗಳು ಮಾಡುವ ಪಾಪಕರ್ಮಗಳ ಫಲಗಳ ನಾಲ್ಕನೆಯ ಒಂದು ಭಾಗವು ರಾಜನಿಗೂ ದೊರೆಯುತ್ತದೆ. ಕೆಲವರು ಪಾಪಗಳೆಲ್ಲವೂ ರಾಜನಿಗೇ ಸೇರುತ್ತವೆ ಎನ್ನುತ್ತಾರೆ. ಇನ್ನು ಕೆಲವರು ಅರ್ಧ ಪಾಪವೇ ರಾಜನಿಗೆ ಸೇರುತ್ತದೆ ಎನ್ನುತ್ತಾರೆ. ಪೃಥಿವೀಪಾಲನು ತನ್ನ ಕರ್ಮದಿಂದ ಕ್ರೂರಿಯೆಂದೂ ಮಿಥ್ಯಾವಾದಿಯೆಂದು ಕರೆಯಲ್ಪಡುತ್ತಾನೆ. ಅಂಥಹ ಪಾಪಗಳಿಂದ ರಾಜನು ಹೇಗೆ ಮುಕ್ತನಾಗಬಲ್ಲ ಎನ್ನುವುದನ್ನು ಕೇಳು. ಒಂದು ವೇಳೆ ಕಳ್ಳರು ಕದಿದುಕೊಂಡು ಹೋದ ಧನವನ್ನು ತಿರುಗಿ ಪಡೆಯಲು ಸಾಧ್ಯವಾಗದೇ ಇದ್ದರೆ ರಾಜನಾದವನು ಧನವನ್ನು ಕಳೆದುಕೊಂಡವನ ಉಪಜೀವನವನ್ನು ನಡೆಸಲು ತನ್ನ ಕೋಶದಿಂದಲೇ ಅಷ್ಟು ಧನವನ್ನು ಕೊಡಬೇಕು. ಬ್ರಾಹ್ಮಣರನ್ನು ಮತ್ತು ಬ್ರಾಹ್ಮಣರ ಸ್ವತ್ತನ್ನು ಇತರ ವರ್ಣದವರು ಸದಾ ರಕ್ಷಿಸಬೇಕು. ಬ್ರಾಹ್ಮಣರಿಗೆ ಅಪಕಾರವನ್ನು ಮಾಡುವವರನ್ನು ರಾಜನು ತನ್ನ ದೇಶದಲ್ಲಿ ಇಟ್ಟುಕೊಳ್ಳಬಾರದು. ಬ್ರಾಹ್ಮಣರು ರಕ್ಷಿತರಾದರೆ ಸರ್ವವೂ ರಕ್ಷಿತವಾಗಿರುತ್ತದೆ. ಅವರ ಪ್ರಸಾದದಿಂದಲೇ ನೃಪನು ಕೃತಕೃತ್ಯನಾಗುತ್ತಾನೆ. ಜೀವಿಗಳು ಮಳೆಗರೆಯುವ ಮೋಡಗಳನ್ನು ಮತ್ತು ಪಕ್ಷಿಗಳು ಮಹಾವೃಕ್ಷವನ್ನು ಹೇಗೋ ಹಾಗೆ ಸರ್ವಾರ್ಥಸಾಧಕ ನೃಪನನ್ನು ಮನುಷ್ಯರು ಅವಲಂಬಿಸಿ ಜೀವಿಸುತ್ತಾರೆ. ಕಾಮಾತ್ಮನಾಗಿ ಸತತವೂ ಕಾಮವಸ್ತುಗಳ ಕುರಿತು ಯೋಜಿಸುವ, ಕ್ರೂರಿ ಮತ್ತು ಅತಿ ಲುಬ್ಧ ರಾಜನು ಪ್ರಜೆಗಳನ್ನು ಪಾಲಿಸಲು ಶಕ್ಯನಾಗುವುದಿಲ್ಲ.”

ಯುಧಿಷ್ಠಿರನು ಹೇಳಿದನು:

“ನಾನು ರಾಜ್ಯಸುಖವನ್ನು ಅರಸುತ್ತಿಲ್ಲ. ಒಂದು ಕ್ಷಣಕ್ಕಾದರೂ ರಾಜ್ಯವನ್ನು ಇಚ್ಛಿಸುವುದಿಲ್ಲ. ಧರ್ಮಸಿದ್ಧಿಗಾಗಿ ನಾನು ರಾಜ್ಯವನ್ನು ಇಷ್ಟಪಡುತ್ತೇನೆ. ಆದರೆ ಅದರಿಂದಲೂ ಧರ್ಮದ ಸಿದ್ಧಿಯಾಗುವುದಿಲ್ಲ. ಯಾವುದರಿಂದ ಧರ್ಮಸಿದ್ಧಿಯಾಗುವುದಿಲ್ಲವೋ ಆ ರಾಜ್ಯವು ನನಗೆ ಬೇಡ. ಆದುದರಿಂದ ಧರ್ಮವನ್ನು ಬಯಸಿ ನಾನು ವನಕ್ಕೇ ಹೋಗುತ್ತೇನೆ. ಪವಿತ್ರ ಆ ಅರಣ್ಯಗಳಲ್ಲಿ ದಂಡವನ್ನು ಕೆಳಗಿರಿಸಿ ಜಿತೇಂದ್ರಿಯನಾಗಿ ಫಲ-ಮೂಲಗಳನ್ನು ತಿಂದುಕೊಂಡು ಮುನಿಯಂತೆ ಧರ್ಮವನ್ನು ಆರಾಧಿಸುತ್ತೇನೆ.”

ಭೀಷ್ಮನು ಹೇಳಿದನು:

“ನಿನ್ನ ಬುದ್ಧಿಯು ದಯಾಪೂರ್ಣಗುಣಗಳಿಂದ ಕೂಡಿದೆಯೆನ್ನುವುದನ್ನು ನಾನು ಅರಿತಿದ್ದೇನೆ. ಸಂಪೂರ್ಣ ದಯಾಪೂರ್ಣನಾಗಿರುವವನಿಗೆ ರಾಜ್ಯಭಾರವನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದರೆ ನಿನಗೆ ರಾಜ್ಯಭಾರದಿಂದ ತಪ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ನೀನು ಅತ್ಯಂತ ಮೃದುವಾಗಿದ್ದರೂ, ಮಹಾ ಸತ್ಪುರುಷನಾಗಿದ್ದರೂ, ಅತ್ಯಂತ ಧರ್ಮಾತ್ಮನಾಗಿದ್ದರೂ, ರಾಜಧರ್ಮಕ್ಕೆ ವಿರುದ್ಧವಾಗಿರುವುದರಿಂದ ನಿನ್ನನ್ನು ಲೋಕದ ಬಹುಜನರು ನಪುಂಸಕನೆಂದೇ ಭಾವಿಸುತ್ತಾರೆ. ನಿನ್ನನ್ನು ಪ್ರಜೆಗಳು ಗೌರವಿಸುವುದಿಲ್ಲ. ನಿನ್ನ ಪಿತೃ-ಪಿತಾಮಹರ ರಾಜಧರ್ಮಗಳನ್ನು ನೋಡಿಕೊಂಡು ನಿನಗೆ ಉಚಿತವಾದುದನ್ನು ಮಾಡು. ನೀನು ಏನು ಮಾಡಲು ಬಯಸುತ್ತಿರುವೆಯೋ ಅದು ರಾಜರ ವರ್ತನೆಯಲ್ಲ. ಆದರೆ ವ್ಯಾಕುಲತೆಯಿಂದ ಹುಟ್ಟಿರುವ ನಿನ್ನ ಈ ದಯಾಪೂರ್ಣತೆಯು ಪ್ರಜಾಪಾಲನೆಯಿಂದ ದೊರೆಯುವ ಧರ್ಮಫಲವನ್ನು ನೀನು ಪಡೆಯಲಾರೆ. ಮಗೂ! ನಿನ್ನ ಪ್ರಜ್ಞೆ ಮತ್ತು ಬುದ್ಧಿಯಿಂದ ವಿವೇಚಿಸಿ ನೀನು ಏನನ್ನು ಮಾಡಲು ಹೊರಟಿರುವೆಯೋ ಅದನ್ನು ನಿನ್ನಿಂದ ಪಾಂಡುವಾಗಲೀ ಕುಂತಿಯಾಗಲೀ ಆಶಿಸಿರಲಿಲ್ಲ. ನಿನ್ನ ತಂದೆಯು “ನನ್ನ ಈ ಮಗನು ಶೂರನೂ, ಬಲಶಾಲಿಯೂ ಮತ್ತು ಸತ್ಯನಿಷ್ಠನಾಗಿರಬೇಕು” ಎಂದು ಸದಾ ಹೇಳುತ್ತಿದ್ದನು. ಕುಂತಿಯು ನಿನ್ನಿಂದ ಮಹಾತ್ಮೆ, ಬಲ ಮತ್ತು ಔದಾರ್ಯಗಳನ್ನು ಬಯಸಿದ್ದಳು. ಪಿತೃಗಳು ಪುತ್ರರಿಂದ ನಿತ್ಯವೂ ಮನುಷ್ಯ-ದೇವತೆಗಳಿಬ್ಬರಿಗೂ ಸ್ವಾಹಾ-ಸ್ವಧಾಗಳನ್ನು ಬಯಸುತ್ತಾರೆ. ದಾನ, ಅಧ್ಯಯನ, ಯಜ್ಞ, ಪ್ರಜೆಗಳ ಪರಿಪಾಲನೆ – ಇವು ಜನ್ಮದಿಂದಲೇ ನಿನ್ನೊಡನೆ ಹುಟ್ಟಿಕೊಂಡ ಕರ್ಮಗಳು. ಇದು ಅಧರ್ಮವೆಂದು ಬಿಟ್ಟುಬಿಡುವುದು ಅಧರ್ಮವೇ ಆಗುತ್ತದೆ. ಕೌಂತೇಯ! ನೊಗಕ್ಕೆ ಕಟ್ಟಿದ ಎತ್ತು ಮಹಾ ಭಾರವನ್ನು ಹೊರದೇ ಮುಗ್ಗರಿಸಿ ಬೀಳಬಹುದು. ಆದರೂ ಅದರ ಕೀರ್ತಿಯು ಕಡಿಮೆಯಾಗುವುದಿಲ್ಲ. ಹಾಗೆಯೇ ನೀನೂ ಕೂಡ ರಾಜ್ಯಭಾರದ ಜವಾಬ್ದಾರಿಯಿಂದ ಕುಸಿಯಬಹುದು. ಆದರೆ ನಿನ್ನ ಕೀರ್ತಿಯು ಕಡಿಮೆಯಾಗುವುದಿಲ್ಲ. ಎಲ್ಲ ಕಡೆಗಳಿಂದಲೂ ಮನಸ್ಸು-ಇಂದ್ರಿಯಗಳನ್ನು ಸ್ವಾಧೀನಪಡಿಸಿಕೊಂಡು ಅಸ್ಖಲಿತವಾಗಿ ತನ್ನ ಮೇಲಿರುವ ಜವಾಬ್ಧಾರಿಯನ್ನು ಹೊರುವವನು ನಿರ್ದೋಷಿಯಾಗುತ್ತಾನೆ. ಏಕೆಂದರೆ ಕರ್ಮಗಳಿಂದಲೇ ಸಿದ್ಧಿಯು ದೊರೆಯುತ್ತದೆ. ಧಾರ್ಮಿಕನಾಗಿರಲಿ, ಗೃಹಸ್ಥನಾಗಿರಲಿ, ರಾಜನಾಗಿರಲಿ ಅಥವಾ ಬ್ರಹ್ಮಚಾರಿಯಾಗಿರಲಿ ತಾನು ಮಾಡಬೇಕಾದ ಕರ್ಮಗಳನ್ನು ಸಂಪೂರ್ಣವಾಗಿ ಮಾಡಲು ಸಾಧ್ಯವಿಲ್ಲ. ಧರ್ಮಕಾರ್ಯಗಳಲ್ಲಿ ಯಾವುದಾದರೂ ನ್ಯೂನತೆಯು ಇದ್ದೇ ಇರುತ್ತದೆ. ಕಾರ್ಯವು ಅಲ್ಪವಾಗಿದ್ದರೂ ಸಾರಭೂಯಿಷ್ಠವಾಗಿದ್ದರೆ ಅದು ಮಹಾ ಕಾರ್ಯವೆಂದೇ ಹೇಳಿಸಿಕೊಳ್ಳುತ್ತದೆ. ಕರ್ಮವನ್ನು ಮಾಡದೇ ಇರುವುದಕ್ಕಿಂತ ಕರ್ಮವನ್ನು ಮಾಡುವುದೇ ಶ್ರೇಯಸ್ಕರ. ಏಕೆಂದರೆ ಕರ್ಮಗಳನ್ನೇ ಮಾಡದಿರುವವನಷ್ಟು ಪಾಪಿಷ್ಠನು ಬೇರೊಬ್ಬನಿಲ್ಲ. ಕುಲೀನ, ಧರ್ಮಜ್ಞ, ಮತ್ತು ಉತ್ತಮ ಐಶ್ವರ್ಯವನ್ನು ಹೊಂದಿದವನು ರಾಜ್ಯಾಧಿಕಾರವನ್ನು ವಹಿಸಿಕೊಂಡರೆ ರಾಜನ ಯೋಗ-ಕ್ಷೇಮಗಳು ರಾಜ್ಯದ ಒಳ್ಳೆಯದಕ್ಕೇ ಆಗುತ್ತದೆ. ಧಾರ್ಮಿಕ ರಾಜನು ರಾಜ್ಯವನ್ನು ಪಡೆದುಕೊಂಡು ಕೆಲವರನ್ನು ದಾನಗಳಿಂದ, ಇತರರನ್ನು ಬಲದಿಂದ ಮತ್ತು ಕೆಲವರನ್ನು ಸುಮಧುರ ಮಾತುಗಲ ಮೂಲಕ ಎಲ್ಲಕಡೆಗಳಿಂದಲೂ ತನ್ನ ಅಧೀನರನ್ನಾಗಿ ಮಾಡಿಕೊಳ್ಳಬೇಕು. ವೃತ್ತಿಯಿಲ್ಲದೇ ಭಯಪೀಡಿತರಾದ ಉತ್ತಮ ಕುಲದಲ್ಲಿ ಹುಟ್ಟಿದ ವಿದ್ವಾಂಸರು ಯಾರನ್ನು ಸೇರಿ ತೃಪ್ತರಾಗುತ್ತಾರೋ ಅಂಥಹ ರಾಜನ ಧರ್ಮಕ್ಕಿಂತಲೂ ಅಧಿಕ ಧರ್ಮವು ಯಾವುದಿದೆ?”

ಯುಧಿಷ್ಠಿರನು ಹೇಳಿದನು:

“ಸ್ವರ್ಗಪ್ರಾಪ್ತಿಗೆ ಶ್ರೇಷ್ಠ ಸಾಧನವು ಯಾವುದು? ಅದರಿಂದ ಎಂತಹ ಪ್ರಸನ್ನತೆಯುಂಟಾಗುತ್ತದೆ? ಅದಕ್ಕಿಂತಲೂ ಅತಿಶಯ ಪರಮೈಶ್ವರ್ಯವು ಯಾವುದು? ನಿನಗೆ ಅನಿಸಿದರೆ ಇದರ ಕುರಿತು ನನಗೆ ಹೇಳು.”

ಭೀಷ್ಮನು ಹೇಳಿದನು:

“ನೆಲೆಯಿಲ್ಲದವನಿಗೆ ಒಂದು ಕ್ಷಣಕ್ಕಾಗಿಯಾದರೂ ಸಮಾಧಾನ ಹೊಂದಿ ಕ್ಷೇಮದಿಂದಿದ್ದರೆ ಆ ರಾಜನು ಸ್ವರ್ಗವನ್ನು ಜಯಿಸುವವರಲ್ಲಿ ಶ್ರೇಷ್ಠನಾಗುತ್ತಾನೆ. ಈ ವಿಷಯದಲ್ಲಿ ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ಕುರುಸತ್ತಮ! ಕುರುಗಳಿಗೆ ನೀನೇ ಪ್ರೀತಿಮಾನನು. ರಾಜನಾಗು. ಸ್ವರ್ಗವನ್ನು ಜಯಿಸು. ಸತ್ಪುರುಷರನ್ನು ರಕ್ಷಿಸು. ದುಷ್ಟರನ್ನು ಸಂಹರಿಸು. ಮಗೂ! ಜೀವಿಗಳು ಮೋಡಗಳ ಮೇಲೆ ಮತ್ತು ಪಕ್ಷಿಗಳು ಫಲಗಳಿರುವ ಮರವನ್ನು ಹೇಗೆ ಆಶ್ರಯಿಸಿರುತ್ತವೆಯೋ ನಿನ್ನ ಸುಹೃದಯರು ಮತ್ತು ಸಾಧುಗಳೊಂದಿಗೆ ನೀನು ಜೀವಿಸು. ಭಯರಹಿತನಾದ ಶೂರ, ಪ್ರಹಾರಕುಶಲ, ದಯಾಳುವಾದ, ಜಿತೇಂದ್ರಿಯನಾದ, ಪ್ರಜಾವತ್ಸಲನಾದ ಮತ್ತು ದಾನಶೀಲ ರಾಜನ ಆಶ್ರಯವನ್ನು ಪಡೆದ ಪ್ರಜೆಗಳು ತಮ್ಮ ಜೀವನಿರ್ವಹಣೆಯನ್ನು ಮಾಡುತ್ತಾರೆ.”

ಉತ್ತಮ ಮತ್ತು ಅಧಮ ಬ್ರಾಹ್ಮಣರೊಡನೆ ರಾಜನ ವ್ಯವಹಾರ ನಿರ್ವಹಣೆ


ಯುಧಿಷ್ಠಿರನು ಹೇಳಿದನು:

“ಪಿತಾಮಹ! ಬ್ರಾಹ್ಮಣರಲ್ಲಿ ಕೆಲವರು ಸ್ವಕರ್ಮಗಳಲ್ಲಿ ನಿರತರಾಗಿದ್ದರೆ ಇನ್ನು ಕೆಲವರು ತಮ್ಮದಲ್ಲದ ಕರ್ಮಗಳಲ್ಲಿ ನಿರತರಾಗಿದ್ದಾರೆ. ಅವರಲ್ಲಿರುವ ವ್ಯತ್ಯಾಸವನ್ನು ಹೇಳು.”

ಭೀಷ್ಮನು ಹೇಳಿದನು:

“ವಿದ್ಯಾಲಕ್ಷಣ ಸಂಪನ್ನರು ಮತ್ತು ಸರ್ವವನ್ನೂ ಸಮಾನ ದೃಷ್ಟಿಯಿಂದ ಕಾಣುವ ಬ್ರಾಹ್ಮಣರು ಬ್ರಹ್ಮನ ಸಮಾನರು ಎಂದು ಹೇಳಿದ್ದಾರೆ. ರಾಜನ್! ಋತ್ವಿಜರು, ಆಚಾರ್ಯಸಂಪನ್ನರು ಮತ್ತು ತಮ್ಮ ಕರ್ಮಗಳಲ್ಲಿ ನಿರತರಾಗಿರುವ ಬ್ರಾಹ್ಮಣರು ದೇವತೆಗಳಿಗೆ ಸಮನಾಗುತ್ತಾರೆ. ರಾಜರಿಗೆ ಯಾಗ ಮಾಡಿಸುವ ಪುರೋಹಿತರು, ಮಂತ್ರಿಗಳು, ರಾಜದುತರು ಮತ್ತು ಸಂದೇಶವಾಹಕ ಬ್ರಾಹ್ಮಣರು ಕ್ಷತ್ರಿಯರಿಗೆ ಸಮಾನರೆಂದು ಹೇಳುತ್ತಾರೆ. ರಾಜನ್! ಅಶ್ವಾರೋಹೀ, ಗಜಾರೋಹೀ, ರಥಿಗಳು, ಪದಾತಿಗಳು ಆಗಿರುವ ಬ್ರಾಹ್ಮಣರು ವೈಶ್ಯರಿಗೆ ಸಮನಾದವರೆಂದು ಪರಿಗಣಿಸಲ್ಪಟ್ಟಿದ್ದಾರೆ. ರಾಜನ್! ತಮ್ಮ ಜನ್ಮಕರ್ಮಗಳಿಂದ ವಿಹೀನರಾಗಿ, ಕುತ್ಸಿತ ಕರ್ಮಗಳನ್ನು ಮಾಡಿಕೊಂಡು ಹೆಸರಿಗೆ ಮಾತ್ರ ಬ್ರಹ್ಮಬಂಧುವೆಂದು ಎನಿಸಿಕೊಂಡಿರುವ ಬ್ರಾಹ್ಮಣನು ಶೂದ್ರನ ಸಮವೆಂದು ಹೇಳುತ್ತಾರೆ. ವೇದ-ಶಾಸ್ತ್ರಗಳನ್ನು ಕಲಿತಿರದ ಮತ್ತು ಅಗ್ನಿಹೋತ್ರಗಳನ್ನು ಮಾಡದೇ ಇರುವ ಬ್ರಾಹ್ಮಣರೆಲ್ಲರೂ ಶೂದ್ರಸಮಾನರೇ. ಧಾರ್ಮಿಕ ರಾಜನು ಅಂಥವರಿಂದ ತೆರಿಗೆಯನ್ನು ತೆಗೆದುಕೊಳ್ಳುವುದಲ್ಲದೇ ವೇತನವನ್ನು ಕೊಡದೇ ಅವರಿಂದ ಸೇವೆ ಮಾಡಿಸಿಕೊಳ್ಳಬೇಕು. ಹೆಸರು ಕೂಗಿ ಕರೆಯುವವರು, ವೇತನವನ್ನು ತೆಗೆದುಕೊಂಡು ದೇವಾಲಯಗಳಲ್ಲಿ ಅರ್ಚಕರಾಗಿರುವವರು, ನಕ್ಷತ್ರವಿದ್ಯೆಯಿಂದ ಜ್ಯೋತಿಷ್ಯವನ್ನು ಹೇಳಿ ಜೀವನ ನಡೆಸುವವರು, ಗ್ರಾಮದ ಪೌರೋಹಿತ್ಯವನ್ನು ನಡೆಸುವವರು ಮತ್ತು ಸಮುದ್ರಯಾನ ಮಾಡುವವರು – ಈ ಐವರೂ ಬ್ರಾಹ್ಮಣರಲ್ಲಿ ಚಾಂಡಾಲರೆನಿಸಿಕೊಳ್ಳುತ್ತಾರೆ. ಬೊಕ್ಕಸದಲ್ಲಿ ಹಣದ ಕೊರತೆಯುಂಟಾದಾಗ ಬ್ರಹ್ಮಸದೃಶ[1] ಮತ್ತು ದೇವಸದೃಶಬ್ರಾಹ್ಮಣರನ್ನು[2] ಬಿಟ್ಟು ಉಳಿದ ಬ್ರಾಹ್ಮಣರಿಂದ ತೆರಿಗೆಯನ್ನು ಪಡೆದುಕೊಳ್ಳಬಹುದು. ಬ್ರಾಹ್ಮಣರನ್ನು ಬಿಟ್ಟು ಉಳಿದ ವರ್ಣದವರ ವಿತ್ತಕ್ಕೆ ರಾಜನು ಸ್ವಾಮಿಯೆಂದು ವೈದಿಕಸಿದ್ಧಾಂತವಾಗಿದೆ. ಬ್ರಾಹ್ಮಣರಲ್ಲಿ ಯಾರು ತಮ್ಮ ವರ್ಣಾಶ್ರಮಧರ್ಮಗಳಿಗೆ ವಿಪರೀತ ಕರ್ಮಗಳನ್ನು ಮಾಡುವರೋ ಅಂಥವರ ಧನವೂ ರಾಜನಿಗೆ ಸೇರುತ್ತದೆ. ರಾಜನು ಯಾವುದೇ ಕಾರಣದಿಂದಲೂ ಧರ್ಮಭ್ರಷ್ಟ ಬ್ರಾಹ್ಮಣರ ವಿಷಯದಲ್ಲಿ ಉಪೇಕ್ಷೆಮಾಡಬಾರದು. ಧರ್ಮಕ್ಕೆ ಅನುಗ್ರಹವಾಗಲೆಂಬ ಕಾರಣದಿಂದ ಅವರನ್ನು ದಂಡಿಸಬೇಕು ಮತ್ತು ಅವರನ್ನು ಬ್ರಹ್ಮ-ದೇವ ಕಲ್ಪ ಬ್ರಾಹ್ಮಣರ ಸಮೂಹದಿಂದ ಪ್ರತ್ಯೇಕಿಸಬೇಕು. ಯಾವ ರಾಜನ ರಾಜ್ಯದಲ್ಲಿ ಬ್ರಾಹ್ಮಣನು ಕಳ್ಳನಾಗುವನೋ ಆ ರಾಜ್ಯದ ಪರಿಸ್ಥಿತಿಯನ್ನು ತಿಳಿದಿರುವವರು, ರಾಜನ ಅಪರಾಧವೇ ಬ್ರಾಹ್ಮಣನು ಕಳ್ಳನಾಗಿದ್ದುದಕ್ಕೆ ಕಾರಣವೆಂದು ಭಾವಿಸುತ್ತಾರೆ. ಒಂದು ವೇಳೆ ವೇದಾಧ್ಯಯನ ಮಾಡಿ ಸ್ನಾತಕನಾದ ಬ್ರಾಹ್ಮಣನು ಜೀವಿಕೆಗೆ ಅವಕಾಶವಿಲ್ಲದೇ ಕಳ್ಳನಾದರೆ ಅಂಥವನ ಭರಣ-ಪೋಷಣೆಗಳ ವ್ಯವಸ್ಥೆಯನ್ನು ರಾಜನೇ ಮಾಡಬೇಕೆಮ್ದು ಹೇಳುತ್ತಾರೆ. ಭರಣ-ಪೋಷಣದ ವ್ಯವಸ್ಥೆಯನ್ನು ಮಾಡಿಕೊಟ್ಟರೂ ಅವನು ಪರಿವರ್ತನೆಯನ್ನು ಹೊಂದದೇ ಹಿಂದಿನಂತೆಯೇ ಚೌರ್ಯವೃತ್ತಿಯನ್ನು ಅವಲಂಬಿಸಿದರೆ, ಅವನನ್ನು ಬಂಧುಗಳ ಸಮೇತ ದೇಶದಿಂದಲೇ ಹೊರಗಟ್ಟಬೇಕು!”

***

[1] ವಿದ್ಯಾಲಕ್ಷಣ ಸಂಪನ್ನರು ಮತ್ತು ಸರ್ವವನ್ನೂ ಸಮಾನ ದೃಷ್ಟಿಯಿಂದ ಕಾಣುವ ಬ್ರಾಹ್ಮಣರು

[2] ಋತ್ವಿಜರು, ಆಚಾರ್ಯಸಂಪನ್ನರು ಮತ್ತು ತಮ್ಮ ಕರ್ಮಗಳಲ್ಲಿ ನಿರತರಾಗಿರುವ ಬ್ರಾಹ್ಮಣರು

The other spiritual discourses in Mahabharata (Kannada):

  1. ತೀರ್ಥಯಾತ್ರಾಮಹಾತ್ಮೆ: ಭೀಷ್ಮ-ಪುಲಸ್ತ್ಯರ ಸಂವಾದ
  2. ಧೌಮ್ಯನು ಯುಧಿಷ್ಠಿರನಿಗೆ ತೀರ್ಥಯಾತಾಕ್ಷೇತ್ರಗಳನ್ನು ವರ್ಣಿಸಿದುದು
  3. ಯುಧಿಷ್ಠಿರ-ಮಾರ್ಕಂಡೇಯ ಸಂವಾದ
  4. ಸರಸ್ವತೀಗೀತೆ
  5. ಕೌಶಿಕ-ಪತಿವ್ರತೆ-ಧರ್ಮವ್ಯಾಧ
  6. ವಿದುರನೀತಿ
  7. ಸನತ್ಸುಜಾತಿಯ
  8. ಭೌಮಗುಣಕಥನ
  9. ಶ್ರೀಮದ್ಭಗವದ್ಗೀತಾ
  10. ಸೇನಜಿತ್-ಬ್ರಾಹ್ಮಣ ಸಂವಾದ; ಪಿಂಗಲ ಗೀತೆ
  11. ಪಿತಾಪುತ್ರ ಸಂವಾದ
  12. ಶಮ್ಯಾಕಗೀತೆ
  13. ಮಂಕಿಗೀತೆ
  14. ಭೃಗು-ಭರದ್ವಾಜ ಸಂವಾದ
  15. ಸಾಂಖ್ಯ ಯೋಗ: ಯಾಜ್ಞವಲ್ಕ್ಯ-ಜನಕ ಸಂವಾದ

Continue reading...
 
Top