VyasaOnline ಸುದರ್ಶನೋಪಾಖ್ಯಾನ

  • Thread starter Ramesh Banadakoppa Manjappa
  • Start date
R

Ramesh Banadakoppa Manjappa

Guest

ಸುದರ್ಶನೋಪಾಖ್ಯಾನ


“ಗೃಹಸ್ಥಧರ್ಮವನ್ನು ಆಶ್ರಯಿಸಿ ಮೃತ್ಯುವನ್ನು ಗೆದ್ದವರ್ಯಾರು?” ಎಂಬ ಯುಧಿಷ್ಠಿರನ ಪ್ರಶ್ನೆಗೆ ಉತ್ತರವಾಗಿ ಭೀಷ್ಮನು ಉದಾಹರಿಸಿದ ಅಗ್ನಿಪುತ್ರ ಸುದರ್ಶನನ ಈ ಉಪಾಖ್ಯಾನವು ಅನುಶಾಸನಪರ್ವದ ದಾನಧರ್ಮಪರ್ವದ ಅಧ್ಯಾಯ 2ರಲ್ಲಿ ಬರುತ್ತದೆ.

Flowers White Background - Free photo on Pixabay
ಪ್ರಜಾಪತಿ ಮನುವಿಗೆ ಇಕ್ಷ್ವಾಕುವು ಸುತನಾದನು. ಆ ನೃಪತಿಗೆ ಸೂರ್ಯವರ್ಚಸ ನೂರು ಪುತ್ರರು ಜನಿಸಿದರು. ಭಾರತ! ಅವರಲ್ಲಿ ಹತ್ತನೆಯ ಪುತ್ರನು ದಶಾಶ್ವ ಎಂಬ ಹೆಸರಿನವನು. ಆ ಧರ್ಮಾತ್ಮಾ ಸತ್ಯವಿಕ್ರಮನು ಮಾಹಿಷ್ಮತಿಗೆ ರಾಜನಾದನು. ದಶಾಶ್ವನ ಮಗನು ಪರಮಧಾರ್ಮಿಕ ರಾಜನಾಗಿದ್ದನು. ನಿತ್ಯವೂ ಅವನ ಮನಸ್ಸು ಸತ್ಯ, ತಪಸ್ಸು ಮತ್ತು ದಾನಗಳಲ್ಲಿ ನಿರತವಾಗಿತ್ತು. ಪೃಥ್ವಿಯಲ್ಲಿ ಮದಿರಾಶ್ವನೆಂದು ಖ್ಯಾತನಾದ ಆ ಪೃಥಿವೀಪತಿಯು ಸದಾ ಧನುರ್ವೇದ ಮತ್ತು ವೇದಗಳಲ್ಲಿ ನಿರತನಾಗಿದ್ದನು. ಮದಿರಾಶ್ವನ ಪುತ್ರನಾದರೋ ದ್ಯುತಿ ಎಂಬ ಹೆಸರಿನ ಪಾರ್ಥಿವನು. ಅವನು ಮಹಾಭಾಗನೂ ಮಹಾತೇಜಸ್ವಿಯೂ ಮಹಾಸತ್ತ್ವಯುತನೂ ಮಹಾಬಲಶಾಲಿಯೂ ಆಗಿದ್ದನು. ದ್ಯುತಿಮತನಿಗೆ ಪಾರ್ಥಿವ ಸುವೀರನೆಂಬ ಹೆಸರಿನ ಪುತ್ರನಿದ್ದನು. ಇನ್ನೊಬ್ಬ ದೇವರಾಜನಂತಿದ್ದ ಅವನು ಧರ್ಮಾತ್ಮನೂ ಕೋಶವಾನನೂ ಆಗಿದ್ದನು. ಸುವೀರನ ಪುತ್ರನು ಸರ್ವಸಂಗ್ರಾಮ ದುರ್ಜಯನಾದ ಸರ್ವಶಾಸ್ತ್ರವಿಶಾರದನಾದ ದುರ್ಜಯ ಎಂಬ ಹೆಸರಿನಿಂದ ವಿಖ್ಯಾತನು. ದುರ್ಜಯನಿಗೆ ಇಂದ್ರನಂಥಹ ಶರೀರವಿದ್ದ ಅಗ್ನಿಸದೃಶದ್ಯುತಿಯಾಗಿದ್ದ ದುರ್ಯೋಧನ ಎಂಬ ಹೆಸರಿನ ಮಹಾರಾಜನು ಪುತ್ರನಾದನು. ವೀರ್ಯದಲ್ಲಿ ಇಂದ್ರನ ಸಮನಾಗಿದ್ದ ಮತ್ತು ಸಂಗ್ರಾಮದಿಂದ ಹಿಮ್ಮೆಟ್ಟದಿದ್ದ ಅವನ ರಾಜ್ಯದ ಪ್ರಭಾವವು ಸರಿಸಾಟಿಯಿಲ್ಲದಂತೆ ಇದ್ದಿತ್ತು. ಅವನ ರಾಜ್ಯ ಮತ್ತು ನಗರಗಳು ನಾನಾವಿಧದ ರತ್ನ, ಧನ, ಪಶುಗಳು, ಸಸ್ಯಗಳಿಂದ ಪರಿಪೂರ್ಣವಾಗಿದ್ದವು. ಅವನ ರಾಜ್ಯದಲ್ಲಿ ಯಾವ ನರನೂ ಕೃಪಣನಾಗಲೀ ದುರ್ಗತನಾಗಲೀ ವ್ಯಾಧಿತನಾಗಲೀ ಕೃಶನಾಗಲೀ ಆಗಿರಲಿಲ್ಲ. ದುರ್ಯೋಧನನು ಉದಾರನೂ, ಮಧುರಭಾಷಿಯೂ, ಅನಸೂಯನೂ, ಜಿತೇಂದ್ರಿಯನೂ, ಧರ್ಮಾತ್ಮನೂ, ಅಕ್ರೂರಿಯೂ, ವಿಕ್ರಾಂತನೂ ಆಗಿದ್ದು ಅವನು ಆತ್ಮಪ್ರಶಂಸೆಯನ್ನು ಮಾಡಿಕೊಳ್ಳುತ್ತಿರಲಿಲ್ಲ. ಅವನು ಯಾಗಶೀಲನೂ, ಮೇಧಾವಿಯೂ, ಬ್ರಹ್ಮಣ್ಯನೂ, ಸತ್ಯಸಂಗರನೂ, ವೇದವೇದಾಂಗಪಾರಂಗತನೂ ದಾನಶೀಲನೂ ಆಗಿದ್ದು ಯಾರನ್ನೂ ಅಪಮಾನಿಸುತ್ತಿರಲಿಲ್ಲ. ದೇವನದೀ ಪುಣ್ಯೆ ಶೀತಜಲಾ ಶಿವೆ ನರ್ಮದೆಯು ಆ ಪುರುಷಶ್ರೇಷ್ಠನನ್ನು ತನ್ನ ಬಯಕೆಯಂತೆಯೇ ವಿವಾಹವಾದಳು. ಅವನಿಗೆ ಆ ನದಿಯಲ್ಲಿ ರೂಪದಲ್ಲಿ ಸುಂದರಳಾಗಿದ್ದ ರಾಜೀವಲೋಚನೆ ಸುದರ್ಶನಾ ಎಂಬ ಕನ್ಯೆಯು ಜನಿಸಿದಳು. ದುರ್ಯೋಧನಸುತೆ ಆ ವರವರ್ಣಿನಿಯು ಎಷ್ಟು ಸುಂದರಿಯಾಗಿದ್ದಳೆಂದರೆ ಅದಕ್ಕೆ ಹಿಂದೆ ನಾರಿಯರಲ್ಲಿ ಅಷ್ಟೊಂದು ರೂಪವತಿಯರು ಯಾರೂ ಇರಲಿಲ್ಲ.

ರಾಜಕನ್ಯೆ ಸುದರ್ಶನೆಯನ್ನು ಸಾಕ್ಷಾದ್ ಅಗ್ನಿಯೇ ಬಯಸಿ ಬ್ರಾಹ್ಮಣನ ವೇಷಧರಿಸಿ ಸಾಕ್ಷಾದ್ ರಾಜನಲ್ಲಿ ಅವಳನ್ನು ವಿವಾಹದಲ್ಲಿ ಕೊಡುವಂತೆ ಕೇಳಿಕೊಂಡನು. “ಇವನು ದರಿದ್ರ ಮತ್ತು ನನ್ನ ವರ್ಣಕ್ಕೆ ಸೇರಿದವನಲ್ಲ!” ಎಂದು ಪಾರ್ಥಿವನು ತನ್ನ ಸುತೆ ಸುದರ್ಶನೆಯನ್ನು ಆ ವಿಪ್ರನಿಗೆ ಕೊಡಲಿಲ್ಲ. ಕುಪಿತನಾದ ಹವ್ಯವಾಹನನು ರಾಜನು ಮಾಡುತ್ತಿದ್ದ ಯಜ್ಞದಲ್ಲಿ ಅದೃಶ್ಯನಾಗಿ ಹೋದನು. ಆಗ ರಾಜಾ ದುರ್ಯೋಧನನು ಋತ್ವಿಜರಲ್ಲಿ ಕೇಳಿದನು:


“ದ್ವಿಜರ್ಷಭರೇ! ನನ್ನಿಂದಾಗಲೀ ನಿಮ್ಮಿಂದಾಗಲೀ ಯಾವುದೇ ದುಷ್ಕೃತವು ನಡೆದುಹೋಗಿಲ್ಲ ತಾನೇ? ಕೆಟ್ಟಪುರುಷರಿಗೆ ಮಾಡಿದ ಉಪಕಾರವು ಹಾಳಾಗಿಹೋಗುವಂತೆ ಯಾವ ಕೃತ್ಯದಿಂದ ಈ ಅಗ್ನಿಯು ನಾಶವಾಗಿಹೋಯಿತು? ಅಲ್ಪ ದುಷ್ಕೃತ್ಯಕಾಗಿ ಈ ಅಗ್ನಿಯು ನಾಶಹೊಂದಲಿಲ್ಲ. ನನ್ನಿಂದ ಅಥವಾ ನಿಮ್ಮಿಂದ ಏನಾದರೂ ದುಷ್ಕರ್ಮವು ನಡೆದುಹೋಯಿತೇ ಎಂದು ನೀವು ವಿಮರ್ಶಿಸಬೇಕು.”

ರಾಜನ ಈ ಮಾತನ್ನು ಕೇಳಿ ವಿಪ್ರರು ನಿಯಮದಿಂದಲೂ ಮಂತ್ರಗಳಿಂದಲೂ ಪಾವಕನಿಗೆ ಶರಣು ಹೋದರು. ಭಗವಾನ್ ಹವ್ಯವಾಹನನು ತನ್ನ ರೂಪವನ್ನು ಶರತ್ಕಾಲದ ಸೂರ್ಯನಂತೆ ದೀಪ್ತವನ್ನಾಗಿಸಿಕೊಂಡು ಬೆಳಗುತ್ತಾ ಅವರಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡನು. ಮಹಾತ್ಮ ದಹನನು ಬ್ರಾಹ್ಮಣರ್ಷಭರಿಗೆ “ದುರ್ಯೋಧನನ ಸುತೆಯನ್ನು ನನಗಾಗಿ ನಾನು ವರಿಸಿದ್ದೇನೆ” ಎಂದನು. ಚಿತ್ರಭಾನುವು ಹೇಳಿದುದನ್ನು ಕೇಳಿ ಬ್ರಾಹ್ಮಣರೆಲ್ಲರೂ ವಿಸ್ಮಿತರಾದರು. ಬೆಳಿಗ್ಗೆ ಎದ್ದು ಅವರು ಅದನ್ನು ರಾಜನಿಗೆ ನಿವೇದಿಸಿದರು. ಬ್ರಹ್ಮವಾದಿಗಳ ಆ ಮಾತನ್ನು ಕೇಳಿ ಬುದ್ಧಿಮಾನ್ ರಾಜನು ಪರಮ ಹರ್ಷವನ್ನು ತಾಳಿ “ಹಾಗೆಯೇ ಆಗಲಿ!” ಎಂದನು. “ಚಿತ್ರಭಾನೋ! ನಿತ್ಯವೂ ಇಲ್ಲಿ ನಿನ್ನ ಸಾನ್ನಿಧ್ಯವು ಇರಲಿ!” ಎಂದು ನೃಪನು ಶುಲ್ಕವಾಗಿ ಭಗವಂತ ವಿಭಾವಸುವಿನಲ್ಲಿ ಯಾಚಿಸಿದನು. ಭಗವಾನ್ ಅಗ್ನಿಯೂ ಕೂಡ ಪಾರ್ಥಿವನಿಗೆ “ಹಾಗೆಯೇ ಆಗಲಿ” ಎಂದನು.

ಆಗ ರಾಜಾ ದುರ್ಯೋಧನನು ಆ ಕನ್ಯೆಯನ್ನು ಮಹುಮೂಲ್ಯ ವಸ್ತ್ರಗಳಿಂದ ಸಮಲಂಕರಿಸಿ ಮಹಾತ್ಮ ಪಾವಕನಿಗೆ ನೀಡಿದನು. ಅಗ್ನಿಯು ರಾಜಪುತ್ರಿ ಸುದರ್ಶನೆಯನ್ನು ವೇದದೃಷ್ಟ ವಿಧಿಗಳಿಂದ ಅಧ್ವರದಲ್ಲಿ ವಸೋರ್ಧಾರೆಯನ್ನು ಹೇಗೋ ಹಾಗೆ ಸ್ವೀಕರಿಸಿದನು. ಅವಳ ರೂಪ, ಶೀಲ, ಕುಲ ಮತ್ತು ಮುಖದ ಕಾಂತಿಯಿಂದ ಅತ್ಯಂತ ಪ್ರೀತಿಮಾನನಾದ ಅಗ್ನಿಯು ಅವಳಲ್ಲಿ ಗರ್ಭವನ್ನಿರಿಸಿದನು. ಅವಳಲ್ಲಿ ಅಗ್ನಿಯ ಮಗ ಸುದರ್ಶನ ಎಂಬ ಹೆಸರಿನ ಪುತ್ರನು ಜನಿಸಿದನು. ಶಿಶುವಾಗಿದ್ದಾಗಲೇ ಅವನು ಸರ್ವ ಸನಾತನ ಬ್ರಹ್ಮ[1]ವನ್ನೂ ಅಧ್ಯಯನ ಮಾಡಿದನು. ಅದೇ ಕಾಲದಲ್ಲಿ ನೃಗನ ಪಿತಾಮಹ ಓಘವಾನ್ ಎಂಬ ಹೆಸರಿನ ರಾಜನಿದ್ದನು. ಅವನಿಗೆ ಓಘವತೀ ಎಂಬ ಕನ್ಯೆಯೂ ಓಘರಥನೆಂಬ ಪುತ್ರನೂ ಆದರು. ಸ್ವಯಂ ಓಘವಾನನು ತನ್ನ ಸುತೆ ದೇವರೂಪಿಣೀ ಓಘವತಿಯನ್ನು ಸುದರ್ಶನನಿಗೆ ಪತ್ನಿಯನ್ನಾಗಿ ನೀಡಿದನು.

ಓಘವತಿಯನ್ನು ಕೂಡಿ ಗೃಹಸ್ಥಾಶ್ರಮನಿರತನಾದ ಸುದರ್ಶನನು ಕುರುಕ್ಷೇತ್ರದಲ್ಲಿ ವಾಸಿಸುತ್ತಿದ್ದನು. ಗೃಹಸ್ಥಾಶ್ರಮದಲ್ಲಿದ್ದುಕೊಂಡು ಮೃತ್ಯುವನ್ನು ಜಯಿಸುತ್ತೇನೆ ಎಂಬ ಪ್ರತಿಜ್ಞೆಯನ್ನು ಆ ಧೀಮಾನ್ ದೀಪ್ತತೇಜಸ್ವಿಯು ಮಾಡಿದ್ದನು. ಆ ಪಾವಕಸುತನು ಓಘವತಿಗೆ ಹೇಳಿದನು:


“ಅತಿಥಿಗಳಿಗೆ ಪ್ರತಿಕೂಲವಾಗುವಂಥಹುದನ್ನು ಎಂದೂ ನೀನು ಮಾಡಬಾರದು. ಅತಿಥಿಯು ಯಾವುದರಿಂದ ತೃಪ್ತಿಹೊಂದುತ್ತಾನೋ ಅದನ್ನು ನಿತ್ಯವೂ ಅವನಿಗೆ ನೀಡಬೇಕು. ಒಂದು ವೇಳೆ ನಿನ್ನನ್ನು ನೀನು ಕೊಡಬೇಕಾಗಿ ಬಂದರೂ ಅದರಲ್ಲಿ ವಿಚಾರಮಾಡಬಾರದು. ಈ ವ್ರತವು ಸದಾ ನನ್ನ ಹೃದಯದಲ್ಲಿರುತ್ತದೆ. ಸುಶ್ರೋಣಿ! ಗೃಹಸ್ಥರಿಗೆ ಅತಿಥಿಯೇ ಎಲ್ಲಕ್ಕಿಂತ ಹೆಚ್ಚಿನವನು. ವಾಮೋರು! ಶೋಭನೇ! ನನ್ನ ಮಾತು ನಿನಗೆ ಪ್ರಮಾಣಯುಕ್ತವಾಗಿದ್ದರೆ ಈ ಮಾತನ್ನು ಅನನ್ಯ ಮನಸ್ಕಳಾಗಿ ಸದಾ ನಿನ್ನ ಹೃದಯದಲ್ಲಿ ಇಟ್ಟುಕೊಂಡಿರು. ಕಲ್ಯಾಣಿ! ಅನಘೇ! ಒಂದು ವೇಳೆ ನಾನು ಪ್ರಾಮಾಣಭೂತನೆಂದೆನಿಸಿದರೆ ನಾನು ಹೊರಗಿರಲಿ ಅಥವಾ ನಿನ್ನ ಜೊತೆಯೇ ಇರಲಿ ಅತಿಥಿಯನ್ನು ನೀನು ಅಪಮಾನಿಸಬಾರದು.”

ಓಘವತಿಯು ತನ್ನ ನೆತ್ತಿಯ ಮೇಲೆ ಕೈಜೋಡಿಸಿ “ಎಂದೂ ನಾನು ನಿನ್ನ ಮಾತಿನಂತೆ ಮಾಡದೇ ಇರುವುದಿಲ್ಲ” ಎಂದು ಅವನಿಗೆ ಹೇಳಿದಳು. ಸುದರ್ಶನನ ಗೃಹಸ್ಥಧರ್ಮವನ್ನು ಪರೀಕ್ಷಿಸಲು ಮೃತ್ಯುವು ಸದಾ ಅವನ ಹಿಂದೆಯೇ ಇದ್ದು ಅವನಲ್ಲುಂಟಾಗಬಹುದಾದ ನ್ಯೂನತೆಗಳನ್ನೇ ಹುಡುಕುತ್ತಿದ್ದನು. ಅಗ್ನಿಪುತ್ರ ಸುದರ್ಶನನು ಸಮಿತ್ತಿಗಾಗಿ ಹೋಗಿರಲು ಶ್ರೀಮಾನ್ ಅತಿಥಿ ಬ್ರಾಹ್ಮಣನೊಬ್ಬನು ಓಘವತಿಯಲ್ಲಿ ಹೇಳಿದನು:

“ವರವರ್ಣಿನಿ! ಗೃಹಸ್ಥಾಶ್ರಮ ಸಮ್ಮತ ಧರ್ಮವು ನಿನಗೆ ಪ್ರಮಾಣಭೂತವಾಗಿದ್ದರೆ ನಿನ್ನಿಂದ ಇಂದು ಆತಿಥ್ಯವನ್ನು ಪಡೆಯಲು ಇಚ್ಛಿಸುತ್ತೇನೆ.”

ಆ ವಿಪ್ರನು ಹೀಗೆ ಹೇಳಲು ಯಶಸ್ವಿನೀ ರಾಜಪುತ್ರಿಯು ವೇದೋಕ್ತ ವಿಧಿಗಳಿಂದ ಅವನನ್ನು ಸ್ವಾಗತಿಸಿದಳು. ದ್ವಿಜಾತಿಯವನಿಗೆ ಆಸನ, ಪಾದ್ಯಗಳನ್ನಿತ್ತು ಓಘವತಿಯು ವಿಪ್ರನಿಗೆ “ನಿನಗೆ ಏನನ್ನು ಕೊಡಲಿ?” ಎಂದು ಕೇಳಿದಳು. ಆ ರಾಜಪುತ್ರಿ ಸುಂದರಿಗೆ ವಿಪ್ರನು ಹೇಳಿದನು:

“ಕಲ್ಯಾಣೀ! ನೀನು ನನಗಾಗಿ ನಿರ್ವಿಶಂಕಳಾಗಿ ಈ ಕಾರ್ಯವನ್ನು ಮಾಡಿಕೊಡು. ಒಂದು ವೇಳೆ ಗೃಹಸ್ಥಾಶ್ರಮ ಸಮ್ಮತ ಧರ್ಮದ ಪ್ರಮಾಣವು ನಿನ್ನಲ್ಲಿದ್ದರೆ ನಿನ್ನನ್ನು ನೀನು ನನಗೆ ಕೊಡು. ರಾಜ್ಞಿ! ನನ್ನನ್ನು ಪ್ರೀತಿಸು!”

ಆ ನೃಪಕನ್ಯೆಯು ಬೇರೆ ಯಾವುದನ್ನಾದರೂ ಇಚ್ಛಿಸು ಎಂದು ಎಷ್ಟೇ ಕೇಳಿಕೊಂಡರೂ ಆತ್ಮಪ್ರದಾನವಲ್ಲದೇ ಬೇರೆ ಯಾವುದನ್ನೂ ಅವಳಿಂದ ಆ ದ್ವಿಜನು ಕೇಳಲಿಲ್ಲ. ಆ ರಾಜಸುತೆಯಾದರೋ ಮೊದಲೇ ಹೇಳಿದ್ದ ಪತಿಯ ವಚನವನ್ನು ನೆನಪಿಸಿಕೊಂಡು ಲಜ್ಜಿತಳಾಗಿ ದ್ವಿಜರ್ಷಭನಿಗೆ “ಹಾಗೆಯೇ ಆಗಲಿ!” ಎಂದಳು. ಗೃಹಸ್ಥಾಶ್ರಮದಲ್ಲಿ ಆಸಕ್ತನಾಗಿದ್ದ ಪತಿಯ ಮಾತನ್ನು ಗೌರವಿಸಿ ಅವಳು ಒಪ್ಪಿಕೊಂಡಳು. ಆಗ ವಿಪ್ರರ್ಷಿಯು ನಸುನಗುತ್ತಾ ಅವಳೊಡನೆ ಮನೆಯನ್ನು ಪ್ರವೇಶಿಸಿದನು. ಅಷ್ಟರಲ್ಲಿ ಸಮಿತ್ತುಗಳನ್ನು ಎತ್ತಿಕೊಂಡು ಪಾವಕಿಯು ಹಿಂದಿರುಗಿದನು. ನಿತ್ಯದಂತೆ ರೌದ್ರಭಾವದ ಮೃತ್ಯುವು ಅವನ ಬಂಧುವಿನಂತೆ ಹಿಂಬಾಲಿಸಿ ಬಂದನು. ಆಶ್ರಮಕ್ಕೆ ಬಂದು ಪಾವಕಸುತನು “ಓಘವತೀ! ಎಲ್ಲಿದ್ದೀಯೆ?” ಎಂದು ಕೂಗಿ ಕರೆದನು.

ಆಗ ಆ ವಿಪ್ರನ ಕೈಗಳಿಂದ ಮುಟ್ಟಲ್ಪಟ್ಟ ಪತಿವ್ರತೆ ಸತಿಯು ಪತಿಗೆ ಪ್ರತ್ಯುತ್ತರವನ್ನು ನೀಡಲಿಲ್ಲ. ತಾನು ಉಚ್ಚಿಷ್ಟಳಾಗಿಬಿಟ್ಟೆ ಎಂದು ಲಜ್ಜಿತಳಾದ ಆ ಸಾಧ್ವಿಯು ಸುಮ್ಮನಾಗಿದ್ದು ಪತಿಗೆ ಏನನ್ನೂ ಹೇಳಲಿಲ್ಲ. ಆಗ ಸುದರ್ಶನನು ಪುನಃ ಅವಳನ್ನು ಕರೆದು ಹೇಳಿದನು:


“ಸಾಧ್ವೀ! ಎಲ್ಲಿರುವೆ? ನನಗಿಂತಲೂ ಹೆಚ್ಚಿನದು ಏನಿದೆ? ನಿತ್ಯವೂ ನನ್ನ ಸೇವೆಯಲ್ಲಿಯೇ ನಿರತಳಾಗಿರುವ ಪತಿವ್ರತೆ ಸತ್ಯಶೀಲೆಯು ಇಂದು ಹೇಗೆ ನಗುತ್ತಾ ನನ್ನನ್ನು ಎದಿರುಗೊಳ್ಳುತ್ತಿಲ್ಲ?”

ಒಳಗಿದ್ದ ವಿಪ್ರನು ಸುದರ್ಶನನಿಗೆ ಪ್ರತ್ಯುತ್ತರಿಸಿದನು:

“ಪಾವಕೇ! ನಾನು ನಿನ್ನ ಮನೆಗೆ ಬಂದಿರುವ ಅತಿಥಿ ಬ್ರಾಹ್ಮಣನೆಂದು ತಿಳಿ. ಸತ್ತಮ! ಈ ನಿನ್ನ ಭಾರ್ಯೆಯು ಅತಿಥಿಸತ್ಕಾರದ ಮೂಲಕ ನನ್ನ ಇಚ್ಛೆಯನ್ನು ಪೂರೈಸುವುದಾಗಿ ಹೇಳಿದಳು. ಅಗ ದೃಢ ಮನಸ್ಸಿನಿಂದ ನಾನು ಇವಳನ್ನೇ ವರಿಸಿದೆ. ಈ ಶುಭಾನನೆಯು ವಿಧಿವತ್ತಾಗಿ ನನ್ನೊಡನಿದ್ದಾಳೆ. ಈ ಸಮಯದಲ್ಲಿ ನಿನಗೆ ಅನುರೂಪವಾಗಿ ಕಂಡದ್ದನ್ನು ಹೇಳಬಹುದು.”

“ಈಗ ಪ್ರತಿಜ್ಞಾಹೀನನಾಗುವ ಇವನನ್ನು ವಧಿಸುತ್ತೇನೆ” ಎಂದು ಯೋಚಿಸಿ ಮೃತ್ಯುವು ಲೋಹದ ದಂಡವನ್ನು ಹಿಡಿದು ಅವನ ಹಿಂದೆಯೇ ನಿಂತಿದ್ದನು. ಸುದರ್ಶನನಾದರೋ ಮನಸ್ಸು-ಕರ್ಮ-ಕಣ್ಣು ಮತ್ತು ಮಾತುಗಳಿಂದ ಈರ್ಷ್ಯೆ-ಕೋಪಗಳನ್ನು ತ್ಯಜಿಸಿ ಮುಗುಳ್ನಗುತ್ತಾ ಈ ಮಾತನ್ನಾಡಿದನು:

“ವಿಪ್ರಾಗ್ರ್ಯ! ನಿನ್ನ ಸುರತೇಚ್ಛೆಯು ಪೂರ್ಣವಾಗಲಿ. ಇದರಿಂದ ನನಗೆ ಪರಮ ಸಂತೋಷವೇ ಆಗಿದೆ. ಆಗಮಿಸಿದ ಅತಿಥಿಯ ಪೂಜೆಯೇ ಗೃಹಸ್ಥನ ಅಗ್ರ ಧರ್ಮವಾಗಿದೆ. ಯಾರ ಮನೆಯಿಂದ ಪೂಜಿತನಾಗಿ ಅತಿಥಿಯು ಹೋಗುವನೋ ಅವನ ಧರ್ಮಕ್ಕಿಂತ ಹೆಚ್ಚಿನ ಧರ್ಮವು ಬೇರೆಯಿಲ್ಲ ಎಂದು ಮನೀಷಿಣರು ಹೇಳುತ್ತಾರೆ. ನನ್ನ ಪ್ರಾಣ, ಪತ್ನಿ ಮತ್ತು ಸಂಪತ್ತು ಎಲ್ಲವನ್ನೂ ಹಿಂದು-ಮುಂದು ನೋಡದೇ ಅತಿಥಿಗಳಿಗೆ ಕೊಡಬೇಕೆಂಬುದು ನನ್ನ ವ್ರತವಾಗಿದೆ. ನಿನಗೆ ಹೇಳಿರುವ ಈ ಮಾತುಗಳನ್ನು ನಾನು ಸಂದಿಗ್ಧತೆಯಲ್ಲದೇ ಸಂತೋಷದಿಂದ ಹೇಳುತ್ತಿದ್ದೇನೆ. ವಿಪ್ರ! ಸ್ವಯಂ ನನ್ನ ಮೇಲೆ ಆಣೆಯಿಟ್ಟು ಈ ಸತ್ಯವನ್ನು ಹೇಳುತ್ತಿದ್ದೇನೆ. ಧರ್ಮಭೃತರಲ್ಲಿ ಶ್ರೇಷ್ಠ! ಪೃಥ್ವಿ, ವಾಯು, ಆಕಾಶ, ಆಪ, ಮತ್ತು ಐದನೆಯದಾದ ಜ್ಯೋತಿ, ಬುದ್ಧಿ, ಆತ್ಮ, ಮನಸ್ಸು, ಕಾಲ ಮತ್ತು ದಿಕ್ಕುಗಳು – ಈ ಹತ್ತು ಗುಣಗಳು ನಿತ್ಯವೂ ಪ್ರಾಣಿಗಳ ದೇಹದಲ್ಲಿದ್ದುಕೊಂಡು ಅವುಗಳು ಮಾಡುವ ಒಳ್ಳೆಯ ಅಥವಾ ಕೆಟ್ಟ ಕೆಲಸಗಳನ್ನು ನೋಡುತ್ತಾ ಇರುತ್ತವೆ. ಇಂದು ನಾನು ಸಂತೋಷದಿಂದ ಆಡಿದ ಈ ಮಾತು ಸತ್ಯವಾಗಿದ್ದರೆ ದೇವತೆಗಳು ನನ್ನನ್ನು ಪರಿಪಾಲಿಸಲಿ ಅಥವಾ ಸುಳ್ಳಾಗಿದ್ದರೆ ದಹಿಸಲಿ.”

ಆಗ “ಇವನು ಸತ್ಯವನ್ನೇ ಹೇಳಿದ್ದಾನೆ. ಇದರಲ್ಲಿ ಸ್ವಲ್ಪವೂ ಸುಳ್ಳಿಲ್ಲ!” ಎಂದು ಎಲ್ಲ ದಿಕ್ಕುಗಳಿಂದ ಹಲವಾರು ನಾದಗಳು ಕೇಳಿಬಂದವು. ಆಗ ಒಳಗಿದ್ದ ಆ ದ್ವಿಜನು ಹೊರಬಂದನು. ವಾಯುವಿನಂತೆಯೇ ಅವನು ತನ್ನ ಶರೀರದಿಂದ ಭೂಮ್ಯಾಕಾಶಗಳೆರಡನ್ನೂ ವ್ಯಾಪಿಸಿದ್ದನು. ಆ ವಿಪ್ರನು ಶಿಕ್ಷಾಸ್ವರದಲ್ಲಿ ಮೂರು ಲೋಕಗಳನ್ನೂ ಮೊಳಗಿಸುತ್ತಾ ಮೊದಲು ಧರ್ಮಜ್ಞ ಸುದರ್ಶನನ ಹೆಸರನ್ನು ಹೇಳಿ ಸಂಬೋಧಿಸಿ ಹೇಳಿದನು:

“ಅನಘ! ನಾನು ಧರ್ಮ! ನಿನಗೆ ಮಂಗಳವಾಗಲಿ! ನಿನ್ನನ್ನು ಪರೀಕ್ಷಿಸಲು ಬಂದಿದ್ದೆ. ನಿನ್ನ ಈ ಸತ್ಯವನ್ನು ತಿಳಿದು ನಿನ್ನ ಮೇಲೆ ಪರಮ ಪ್ರೀತನಾಗಿದ್ದೇನೆ. ನಿನ್ನಲ್ಲಿ ನ್ಯೂನತೆಯನ್ನು ಹುಡುಕುತ್ತಾ ನಿನ್ನ ಹಿಂದೆಯೇ ಬರುತ್ತಿರುವ ಮೃತ್ಯುವನ್ನು ನೀನು ಜಯಿಸಿದ್ದೀಯೆ. ಧೈರ್ಯದಿಂದ ಅವನನ್ನು ನೀನು ವಶಪಡಿಸಿಕೊಂಡಿರುವೆ. ಪುರುಷೋತ್ತಮ! ಮೂರು ಲೋಕಗಳಲ್ಲಿ ಯಾರಿಗೇ ಆಗಲೀ ಪತಿವ್ರತೆಯಾಗಿರುವ ಈ ಸಾಧ್ವಿಯನ್ನು ಕಣ್ಣೆತ್ತಿ ನೋಡಲೂ ಕೂಡ ಶಕ್ತಿಯಿಲ್ಲ. ನಿನ್ನ ಗುಣಗಳು ಮತ್ತು ತನ್ನ ಪತಿವ್ರತಗುಣಗಳಿಂದ ರಕ್ಷಿತಳಾದ ಇವಳು ಏನನ್ನೇ ಹೇಳಿದರೂ ಅದು ಸತ್ಯವಾಗುತ್ತದೆ. ಅನ್ಯಥಾ ಆಗುವುದಿಲ್ಲ. ತನ್ನದೇ ತಪಸ್ಸಿನಿಂದ ಸಂಯುಕ್ತಳಾಗಿರುವ ಈ ಬ್ರಹ್ಮವಾದಿನಿಯು ಲೋಕವನ್ನು ಪಾವನಗೊಳಿಸಲೋಸುಗ ಶ್ರೇಷ್ಠ ನದಿಯಾಗುವಳು. ಅರ್ಧ ಶರೀರದಿಂದ ಇವಳು ಓಘವತೀ ಎಂಬ ನದಿಯಾಗುತ್ತಾಳೆ. ಇನ್ನೊಂದು ಅರ್ಧದಿಂದ ನಿನ್ನ ಸೇವೆಗೈಯುತ್ತಾಳೆ. ಯೋಗವು ಈ ಮಹಾಭಾಗೆಯ ವಶದಲ್ಲಿರುತ್ತದೆ. ಇವಳೊಂದಿಗೆ ನೀನು ಕೂಡ ತಪಸ್ಸಿನಿಂದ ಗಳಿಸಿದ ಈ ಪ್ರಪಂಚಕ್ಕೆ ಹಿಂದುರುಗಬೇಕಾಗದ ಶಾಶ್ವತ ಸನಾತನ ಲೋಕಗಳಿಗೆ ಹೋಗುತ್ತೀಯೆ. ನಿನ್ನ ಈ ದೇಹದಿಂದಲೇ ನೀನು ಲೋಕಗಳಿಗೆ ಹೋಗುತ್ತೀಯೆ. ನೀನು ಮೃತ್ಯುವನ್ನು ಜಯಿಸಿದ್ದೀಯೆ. ಉತ್ತಮ ಐಶ್ವರ್ಯವು ನಿನ್ನದಾಗುತ್ತದೆ. ನೀನು ನಿನ್ನ ವೀರ್ಯಾತಿಶಯದಿಂದ ಪಂಚಭೂತಗಳನ್ನೂ ಅತಿಕ್ರಮಿಸಿ ಮನಸ್ಸಿನ ವೇಗದಲ್ಲಿ ಪ್ರಯಾಣಮಾಡಲೂ ಸಮರ್ಥನಾಗುವೆ. ಈ ಗೃಹಸ್ಥಧರ್ಮದಿಂದ ನೀನು ಕಾಮ-ಕ್ರೋಧಗಳನ್ನೂ ಜಯಿಸಿದ್ದೀಯೆ. ರಾಜನ್! ನಿನ್ನ ಶುಶ್ರೂಷೆಯಿಂದ ಈ ರಾಜಪುತ್ರಿಯು ಸ್ನೇಹ, ಅನುರಾಗ, ಆಲಸ್ಯ, ಮೋಹ ಮತ್ತು ದ್ರೋಹ ಇವೇ ಮೊದಲಾದವುಗಳನ್ನು ಗೆದ್ದಿದ್ದಾಳೆ.””

ಆಗ ಭಗವಾನನು ಸಹಸ್ರ ಕುದುರೆಗಳನ್ನು ಕಟ್ಟಿದ್ದ ಉತ್ತಮ ರಥದಲ್ಲಿ ಅವರಿಬ್ಬರನ್ನೂ ಕರೆದುಕೊಂಡು ಹೋದನು. ಹೀಗೆ ಸುದರ್ಶನನು ಮೃತ್ಯು, ಆತ್ಮ, ಲೋಕಗಳು. ಪಂಚಭೂತಗಳು, ಬುದ್ಧಿ, ಕಾಲ, ಮನಸ್ಸು, ಆಕಾಶ, ಮತ್ತು ಕಾಮ-ಕ್ರೋಧಗಳನ್ನೂ ಗೆದ್ದನು.

***

ಈ ಉತ್ತಮ ಆಖ್ಯಾನವು ಧನ, ಯಶಸ್ಸು, ಆಯುಷ್ಯಗಳನ್ನು ನೀಡುತ್ತದೆ. ಸಕಲ ದುಷ್ಕರ್ಮಗಳನ್ನೂ ನಾಶಪಡಿಸುತ್ತದೆ. ಏಳ್ಗೆಯನ್ನು ಬಯಸುವವನು ಇದನ್ನು ಕೇಳಬೇಕು. ಸುದರ್ಶನನ ಈ ಚರಿತೆಯನ್ನು ಪ್ರತಿದಿನವೂ ಹೇಳುವ ವಿದ್ವಾನನು ಪುಣ್ಯ ಲೋಕಗಳನ್ನು ಪಡೆಯುತ್ತಾನೆ.

[1] ವೇದಗಳು.


The other stories:

  1. ಆರುಣಿ ಉದ್ದಾಲಕ
  2. ಉಪಮನ್ಯು
  3. ಸಮುದ್ರಮಥನ
  4. ಗರುಡೋತ್ಪತ್ತಿ; ಅಮೃತಹರಣ
  5. ಶೇಷ
  6. ಯಯಾತಿ
  7. ಸಂವರಣ-ತಪತಿ
  8. ವಸಿಷ್ಠೋಪಾಽಖ್ಯಾನ
  9. ಔರ್ವೋಪಾಽಖ್ಯಾನ
  10. ಸುಂದೋಪಸುಂದೋಪಾಽಖ್ಯಾನ
  11. ಸಾರಂಗಗಳು
  12. ಸೌಭವಧೋಪಾಽಖ್ಯಾನ
  13. ನಲೋಪಾಽಖ್ಯಾನ
  14. ಅಗಸ್ತ್ಯೋಪಾಽಖ್ಯಾನ
  15. ಭಗೀರಥ
  16. ಋಷ್ಯಶೃಂಗ
  17. ಪರಶುರಾಮ
  18. ಚ್ಯವನ
  19. ಮಾಂಧಾತ
  20. ಸೋಮಕ-ಜಂತು
  21. ಗಿಡುಗ-ಪಾರಿವಾಳ
  22. ಅಷ್ಟಾವಕ್ರ
  23. ರೈಭ್ಯ-ಯವಕ್ರೀತ
  24. ತಾರ್ಕ್ಷ್ಯ ಅರಿಷ್ಠನೇಮಿ
  25. ಅತ್ರಿ
  26. ವೈವಸ್ವತ ಮನು
  27. ಮಂಡೂಕ-ವಾಮದೇವ
  28. ಧುಂಧುಮಾರ
  29. ಮಧು-ಕೈಟಭ ವಧೆ
  30. ಕಾರ್ತಿಕೇಯನ ಜನ್ಮ
  31. ಮುದ್ಗಲ
  32. ರಾಮೋಪಾಽಖ್ಯಾನ: ರಾಮಕಥೆ
  33. ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
  34. ಇಂದ್ರವಿಜಯೋಪಾಽಖ್ಯಾನ
  35. ದಂಬೋದ್ಭವ
  36. ಮಾತಲಿವರಾನ್ವೇಷಣೆ
  37. ಗಾಲವ ಚರಿತೆ
  38. ವಿದುಲೋಪಾಽಖ್ಯಾನ
  39. ತ್ರಿಪುರವಧೋಪಾಽಖ್ಯಾನ
  40. ಪರಶುರಾಮನು ಅಸ್ತ್ರಗಳನ್ನು ಪಡೆದುದು
  41. ಪ್ರಭಾಸಕ್ಷೇತ್ರ ಮಹಾತ್ಮೆ
  42. ತ್ರಿತಾಖ್ಯಾನ
  43. ಸಾರಸ್ವತೋಪಾಽಖ್ಯಾನ
  44. ವಿಶ್ವಾಮಿತ್ರ
  45. ವಸಿಷ್ಠಾಪವಾಹ ಚರಿತ್ರೆ
  46. ಬಕ ದಾಲ್ಭ್ಯನ ಚರಿತ್ರೆ
  47. ಕಪಾಲಮೋಚನತೀರ್ಥ ಮಹಾತ್ಮೆ
  48. ಮಂಕಣಕ
  49. ವೃದ್ಧಕನ್ಯೆ
  50. ಬದರಿಪಾಚನ ತೀರ್ಥ
  51. ಕುಮಾರನ ಪ್ರಭಾವ-ಅಭಿಷೇಕ
  52. ಅಸಿತದೇವಲ-ಜೇಗೀಷವ್ಯರ ಕಥೆ
  53. ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
  54. ಕುರುಕ್ಷೇತ್ರ ಮಹಾತ್ಮೆ
  55. ಶಂಖಲಿಖಿತೋಪಾಽಖ್ಯಾನ
  56. ಜಾಮದಗ್ನೇಯೋಪಾಽಖ್ಯಾನ
  57. ಷೋಡಶರಾಜಕೀಯೋಪಾಽಖ್ಯಾನ
  58. ನೃಗೋಽಪಾಖ್ಯಾನ

Continue reading...
 
Top