VyasaOnline ಭೀಷ್ಮ-ಯುಧಿಷ್ಠಿರ ಸಂವಾದ: ರಾಜಧರ್ಮ – 2

  • Thread starter Ramesh Banadakoppa Manjappa
  • Start date
R

Ramesh Banadakoppa Manjappa

Guest

ಭೀಷ್ಮ-ಯುಧಿಷ್ಠಿರ ಸಂವಾದ: ರಾಜಧರ್ಮ - 2


ಓಂ' ಬಗ್ಗೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳು | things-you-dint-know-about-om - Kannada BoldSky


ರಾಜಧರ್ಮವನ್ನು ಪಾಲಿಸುವುದರಿಂದ ನಾಲ್ಕೂ ಆಶ್ರಮಗಳ ಫಲಗಳು ದೊರಯುತ್ತವೆ ಎಂದು ಪ್ರತಿಪಾದಿಸುವ ಈ ಭೀಷ್ಮ-ಯುಧಿಷ್ಠಿರರ ಸಂವಾದವು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 66ರಲ್ಲಿ ಬರುತ್ತದೆ.

***

ಯುಧಿಷ್ಠಿರನು ಹೇಳಿದನು:

“ಪಿತಾಮಹ! ಈ ಹಿಂದೆ ನೀನು ಹೇಳಿದ ನಾಲ್ಕು ಮಾನವಾಶ್ರಮಗಳ ಕುರಿತು ನಾನು ಕೇಳಿದೆ. ಈಗ ನನಗೆ ಅವುಗಳ ವ್ಯಾಖ್ಯಾನಗಳನ್ನು ಹೇಳು. ನಾನು ಕೇಳುತ್ತಿದ್ದೇನೆ.”

ಭೀಷ್ಮನು ಹೇಳಿದನು:

“ಯುಧಿಷ್ಠಿರ! ಮಹಾಬಾಹೋ! ಸಾಧುಸಮ್ಮತವಾದ ಈ ಧರ್ಮಗಳು ನನಗೆ ಹೇಗೆ ತಿಳಿದಿವೆಯೋ ಹಾಗೆ ನಿನಗೂ ಕೂಡ ತಿಳಿದಿವೆ. ಯುಧಿಷ್ಠಿರ! ನರಾಧಿಪ! ಧರ್ಮಭೃತರಲ್ಲಿ ಶ್ರೇಷ್ಠ! ಬೇರೆಯೇ ಚಿಹ್ನೆಗಳನ್ನು ಧರಿಸಿರುವ ಧರ್ಮಗಳ ಕುರಿತು ನನ್ನನ್ನು ಕೇಳುತ್ತಿದ್ದೀಯೆ. ಅದನ್ನು ಕೇಳು. ಕೌಂತೇಯ! ಮನುಜರ್ಷಭ! ಇವೆಲ್ಲವೂ ಉತ್ತಮ ಆಚಾರಪ್ರವೃತ್ತರಾಗಿರುವ ಮತ್ತು ನಾಲ್ಕು ಆಶ್ರಮಕರ್ಮಿಗಳಾದ ಸಾಧುಗಳಿಗೆ ತಿಳಿದಿರುತ್ತವೆ. ಯುಧಿಷ್ಠಿರ! ಕಾಮ-ದ್ವೇಷರಹಿತನಾಗಿ ದಂಡನೀತಿಯನ್ನನುಸರಿಸಿ, ಸರ್ವಭೂತಗಳನ್ನೂ ಸಮದೃಷ್ಟಿಯಿಂದ ಕಾಣುವ ರಾಜನಿಗೂ ಕೂಡ ಭೈಕ್ಷಾಶ್ರಮದ (ಸಂನ್ಯಾಸಾಶ್ರಮದ) ಫಲವು ದೊರೆಯುತ್ತದೆ. ದಾನ ಮತ್ತು ತ್ಯಾಗಗಳನ್ನು ತಿಳಿದುಕೊಂಡಿರುವ, ಇಂದ್ರಿಯನಿಗ್ರಹ ಮತ್ತು ಜೀವಿಗಳಿಗೆ ಅನುಗ್ರಹ ಇವುಗಳ ಕುರಿತು ತಿಳಿದುಕೊಂಡಿರುವ, ಮತ್ತು ಮೊದಲು ಹೇಳಿದಂತೆ ನಡೆದುಕೊಳ್ಳುವ ವೀರನಿಗೆ ಕ್ಷೇಮಾಶ್ರಮದ (ಗೃಹಸ್ಥಾಶ್ರಮದ) ಫಲವು ದೊರೆಯುತ್ತದೆ. ಯುಧಿಷ್ಠಿರ! ಸಂಕಟದಲ್ಲಿರುವ ದಾಯಾದಿಗಳನ್ನೂ, ಸಂಬಂಧಿಗಳನ್ನೂ ಮತ್ತು ಮಿತ್ರರನ್ನೂ ಉದ್ಧರಿಸುವ ಕ್ಷತ್ರಿಯನಿಗೆ ದೀಕ್ಷಾಶ್ರಮದ (ವಾನಪ್ರಸ್ಥಾನಾಶ್ರಮದ) ಫಲವು ಲಭಿಸುತ್ತದೆ. ಪಾರ್ಥ! ಆಹ್ನಿಕ, ಭೂತಯಜ್ಞ, ಪಿತೃಯಜ್ಞ ಮತ್ತು ಮನುಷ್ಯಯಜ್ಞಗಳನ್ನು ಮಾಡುವ ಕ್ಷತ್ರಿಯನಿಗೆ ವನ್ಯಾಶ್ರಮದ (ವಾನಪ್ರಸ್ಥಾಶ್ರಮದ) ಫಲವು ಲಭಿಸುತ್ತದೆ. ಸರ್ವಭೂತಗಳ ಪಾಲನೆಯಿಂದ, ಸ್ವರಾಷ್ಟ್ರದ ಪರಿಪಾಲನೆಯಿಂದ, ಮತ್ತು ಬಹುವಿಧದ ಯಜ್ಞದೀಕ್ಷೆಗಳನ್ನು ಕೈಗೊಳ್ಳುವುದರಿಂದ ರಾಜನಿಗೆ ವಾನಪ್ರಸ್ಥಾಶ್ರಮದ ಫಲವು ಲಭಿಸುತ್ತದೆ. ನಿತ್ಯವೇದಾಧ್ಯಯನ, ಕ್ಷಮೆ, ಆಚಾರ್ಯಪೂಜನ, ಮತ್ತು ಉಪಾಧ್ಯಾಯಶುಶ್ರೂಷೆಯಿಂದ ಕ್ಷತ್ರಿಯನಿಗೆ ಬ್ರಹ್ಮಾಶ್ರಮಿಯ (ಸಂನ್ಯಾಸಿಯ) ಫಲವು ಲಭಿಸುತ್ತದೆ. ಭಾರತ! ಸರ್ವಭೂತಗಳೊಂದಿಗೂ ಯಾವಾಗಲೂ ಋಜುತ್ವದಿಂದ ಮತ್ತು ನಿಷ್ಕಪಟತೆಯಿಂದ ವರ್ತಿಸುವ ಕ್ಷತ್ರಿಯನು ಸಂನ್ಯಾಸಾಶ್ರಮಿಯ ಫಲವನ್ನು ಪಡೆಯುತ್ತಾನೆ. ಭಾರತ! ವಾನಪ್ರಸ್ಥದಲ್ಲಿರುವ ಮತ್ತು ಮೂರುವೇದಗಳನ್ನು ತಿಳಿದಿರುವ ವಿಪ್ರರಿಗೆ ವಿಪುಲ ಧನವನ್ನು ದಾನಮಾಡುವ ಕ್ಷತ್ರಿಯನಿಗೆ ವಾನಪ್ರಸ್ಥಾಶ್ರಮದ ಫಲವು ದೊರೆಯುತ್ತದೆ. ಭಾರತ! ಸರ್ವಭೂತಗಳ ಕುರಿತೂ ಅನುಕಂಪ ತೋರಿಸುವ ಮತ್ತು ಕ್ರೂರನಾಗಿ ವರ್ತಿಸದ ಅವನಿಗೆ ಎಲ್ಲ ಆಶ್ರಮಗಳ ಫಲವು ದೊರೆಯುತ್ತದೆ. ಕೌರವ್ಯ! ಯುಧಿಷ್ಠಿರ! ಎಲ್ಲ ಸಮಯಗಳಲ್ಲಿಯೂ ಬಾಲಕ-ವೃದ್ಧರ ಕುರಿತು ಅನುಕಂಪ ತೋರಿಸುವ ಕ್ಷತ್ರಿಯನಿಗೆ ಎಲ್ಲ ಆಶ್ರಮಗಳ ವಿವಿಧ ಫಲಗಳೂ ದೊರೆಯುತ್ತವೆ. ಕರೂದ್ವಹ! ಕೌರವ್ಯ! ಬಲಾತ್ಕಾರಕ್ಕೊಳಗಾದ ಮತ್ತು ಶರಣಾಗತರ ಸಂರಕ್ಷಣೆ ಮಾಡುತ್ತಾ ಕ್ಷತ್ರಿಯನು ಗೃಹಸ್ಥಾಶ್ರಮದಲ್ಲಿರಬೇಕು. ಸದಾ ಎಲ್ಲಕಡೆ ಚರಾಚರ ಭೂತಗಳ ರಕ್ಷಣೆ ಮತ್ತು ಯಥಾರ್ಹವಾಗಿ ಪೂಜೆಗಳನ್ನು ಮಾಡುತ್ತಾ ಕ್ಷತ್ರಿಯನು ಗೃಹಸ್ಥಾಶ್ರಮದಲ್ಲಿರಬೇಕು. ಪಾರ್ಥ! ಹಿರಿಯ ಪತ್ನಿಯಾಗಲೀ, ಕಿರಿಯ ಪತ್ನಿಯಾಗಲೀ, ಸಹೋದರರಾಗಲೀ, ಮಕ್ಕಳು-ಮೊಮ್ಮಕ್ಕಳಾಗಲೀ ಅವರಿಗೆ ನಿಗ್ರಹ-ಅನುಗ್ರಹಗಳನ್ನು ಮಾಡುತ್ತಿರಬೇಕು. ಇದೇ ಗೃಹಸ್ಥಾಶ್ರಮದ ತಪಸ್ಸು. ಪುರುಷವ್ಯಾಘ್ರ! ಸಾಧುಗಳ ಮತ್ತು ಆತ್ಮಜ್ಞಾನಿ ಪ್ರಜೆಗಳ ಅರ್ಚನೆ- ಪಾಲನೆಗಳನ್ನು ಮಾಡುವುದರಿಂದ ಗೃಹಸ್ಥಾಶ್ರಮದ ಫಲವು ದೊರೆಯುತ್ತದೆ. ಭಾರತ! ಯುಧಿಷ್ಠಿರ! ಆಶ್ರಮಸ್ಥರಾಗಿರುವ ಸರ್ವರನ್ನೂ ಮನೆಗೆ ಕರೆತಂದು ಭೋಜನಾದಿಗಳಿಂದ ತೃಪ್ತಿಗೊಳಿಸುವುದೇ ಗೃಹಸ್ಥಧರ್ಮ. ಧಾತೃವು ಸೃಷ್ಟಿಸಿದ ಧರ್ಮದಲ್ಲಿ ಯಥಾರ್ಥವಾಗಿ ನಡೆದುಕೊಳ್ಳುವ ಪುರುಷನು ಸರ್ವ ಆಶ್ರಮಗಳ ಅನುತ್ತಮ ಫಲಗಳನ್ನು ಪಡೆಯುತ್ತಾನೆ. ಕೌಂತೇಯ! ಯುಧಿಷ್ಠಿರ! ಯಾವ ಪುರುಷನ ಸದ್ಗುಣಗಳು ಸದಾ ನಶಿಸದೇ ಇರುವುದೋ ಆ ಆಶ್ರಮಸ್ಥ ಪುರುಷನನ್ನು ನರಶ್ರೇಷ್ಠನೆಂದು ಕರೆಯುತ್ತಾರೆ. ಯುಧಿಷ್ಠಿರ! ಸ್ಥಾನಕ್ಕೆ ತಕ್ಕುದಾದ ಸನ್ಮಾನ, ವಯಸ್ಸಿಗೆ ತಕ್ಕುದಾದ ಸನ್ಮಾನ ಮತ್ತು ಕುಲಕ್ಕೆ ತಕ್ಕುದಾದ ಸನ್ಮಾನ ಇವುಗಳನ್ನು ಮಾಡುವವನು ಸರ್ವ ಆಶ್ರಮಗಳ ಫಲಗಳನ್ನು ಪಡೆಯುತ್ತಾನೆ. ಕೌಂತೇಯ! ಪುರುಷವ್ಯಾಘ್ರ! ದೇಶಧರ್ಮಗಳು ಮತ್ತು ಕುಲಧರ್ಮಗಳನ್ನು ಪಾಲಿಸುವ ರಾಜನು ಸರ್ವ ಆಶ್ರಮಗಳನ್ನೂ ಪಾಲಿಸಿದಂತಾಗುತ್ತದೆ. ಪುರುಷವ್ಯಾಘ್ರ! ಆಗಾಗ ಐಶ್ವರ್ಯ ಮತ್ತು ಉಪಹಾರಗಳನ್ನು ಅರ್ಹರಾದವರಿಗೆ ನೀಡುವವನಿಗೆ ಸಾಧುಗಳ ಆಶ್ರಮ (ಸಂನ್ಯಾಸಾಶ್ರಮದ) ಫಲವು ಲಭಿಸುತ್ತದೆ. ಕೌಂತೇಯ! ದಶಧರ್ಮಗಳನ್ನು ಅನುಸರಿಸಿ ಧರ್ಮವನ್ನು ರಕ್ಷಿಸುವವನು ಸರ್ವಲೋಕಗಳ ರಾಜನಾಗುತ್ತಾನೆ ಮತ್ತು ಸರ್ವ ಆಶ್ರಮಗಳ ಫಲಗಳನ್ನು ಪಡೆಯುತ್ತಾನೆ. ಯಾರ ರಾಜ್ಯದಲ್ಲಿ ಧರ್ಮಕುಶಲರಾದ ಸಾಧುಗಳ ಧರ್ಮವು ರಕ್ಷಿಸಲ್ಪಡುತ್ತದೆಯೋ ಅವರ ಆರನೆಯ ಒಂದು ಭಾಗವು ಆ ರಾಜನಿಗೂ ದೊರೆಯುತ್ತದೆ. ಪುರುಷವ್ಯಾಘ್ರ! ಧರ್ಮದಲ್ಲಿಯೇ ರಮಿಸುವ ಧರ್ಮಪರಾಯಣರಾದ ಮಾನವರನ್ನು ರಕ್ಷಿಸದ ಪಾರ್ಥಿವನು ಅವರ ಪಾಪಗಳೆಲ್ಲವನ್ನೂ ಪಡೆದುಕೊಳ್ಳುತ್ತಾನೆ. ಯುಧಿಷ್ಠಿರ! ಅನಘ! ಧರ್ಮರಕ್ಷಣೆಯಲ್ಲಿ ಪಾರ್ಥಿವರಿಗೆ ಸಹಾಯಮಾಡುವವರಿಗೂ ಇತರರು ಮಾಡುವ ಸರ್ವ ಧರ್ಮಕಾರ್ಯಗಳ ಫಲದ ಅಂಶವು ದೊರೆಯುತ್ತದೆ. ಪುರುಷವ್ಯಾಘ್ರ! ನಾವು ಯಾವ ಧರ್ಮವನ್ನು ಉಪಾಸಿಸುತ್ತಿರುವೆವೋ ಆ ಗೃಹಸ್ಥಾಶ್ರಮ ಧರ್ಮವೇ ಸರ್ವ ಆಶ್ರಮಪದಗಳಲ್ಲಿ ಪಾವನವೂ ಶ್ರೇಷ್ಠವೂ ಆಗಿರುವುದೆಂದು ನಿರ್ಣಯಿಸಿ ಹೇಳಿದ್ದಾರೆ. ಎಲ್ಲವನ್ನೂ ತನಗೆ ಸಮಾನವೆಂದು ಯಾರು ಭಾವಿಸುವವನೋ, ದಂಡವನ್ನು ಯಾರು ತ್ಯಜಿಸುವವನೋ ಮತ್ತು ಕ್ರೋಧವನ್ನು ಯಾರು ಗೆಲ್ಲುವವನೋ ಅವನಿಗೆ ಇಹದಲ್ಲಿಯೂ ಪರದಲ್ಲಿಯೂ ಸುಖವುಂಟಾಗುತ್ತದೆ. ಧರ್ಮರೂಪದ ಸಮುದ್ರದಲ್ಲಿ ತೇಲುತ್ತಿರುವ ರಾಜಧರ್ಮವೆಂಬ ನೌಕೆಗೆ ಸತ್ತ್ವಗುಣವೇ ನಾವಿಕ, ಧರ್ಮಶಾಸ್ತ್ರವೇ ನೌಕೆಯನ್ನು ಬಂಧಿಸುವ ರಜ್ಜು. ತ್ಯಾಗರೂಪದಿಂದ ಬೀಸುವ ಗಾಳಿಯಿಂದ ಪ್ರೇರಿತವಾಗಿ ಅದು ಸಂಸಾರರೂಪವಾದ ಸಮುದ್ರವನ್ನು ಶೀಘ್ರವಾಗಿ ದಾಟಿಸುತ್ತದೆ. ಸರ್ವಕಾಮನೆಗಳಿಂದ ನಿವೃತ್ತನಾಗಿ ಹೃದಯದಲ್ಲಿ ಸ್ಥಿತನಾಗಿರುವಾಗ ಸತ್ತ್ವಸ್ಥನೆನಿಸಿಕೊಂಡು ಬ್ರಹ್ಮವನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ. ನರಾಧಿಪ! ಪುರುಷಶಾರ್ದೂಲ! ಸುಪ್ರಸನ್ನ ಭಾವದ ಯೋಗದಿಂದ ಪಾಲನೆಮಾಡುತ್ತಿರುವ ರಾಜನು ಧರ್ಮವನ್ನು ಪರಿಪಾಲಿಸಿದ ಫಲವನ್ನು ಹೊಂದುತ್ತಾನೆ. ಅನಘ! ವೇದಾಧ್ಯಯನ ಶೀಲರಾದ ವಿಪ್ರರ, ಸಾಧುಕರ್ಮಿಗಳ ಮತ್ತು ಸರ್ವಲೋಕದ ಪಾಲನೆಗೆ ಪ್ರಯತ್ನಿಸು! ಭಾರತ! ವನದಲ್ಲಿ ಸಂಚರಿಸುವ ಆಶ್ರಮಧರ್ಮವನ್ನು ಪಾಲಿಸುವುದಕ್ಕಿಂತ ಎಷ್ಟೋ ಗುಣ ಹೆಚ್ಚು ಫಲವನ್ನು ಧರ್ಮರಕ್ಷಣೆಮಾಡುವ ಪಾರ್ಥಿವನು ಪಡೆಯುತ್ತಾನೆ.

ಪಾಂಡವಶ್ರೇಷ್ಠ! ಇಗೋ ನಿನಗೆ ವಿವಿಧ ಧರ್ಮಗಳ ಕುರಿತು ಹೇಳಿದ್ದೇನೆ. ನಮ್ಮ ಪೂರ್ವಜರು ಆಚರಿಸಿಕೊಂಡು ಬಂದಿರುವ ಈ ಸನಾತನ ಧರ್ಮವನ್ನು ನೀನೂ ಅನುಷ್ಠಾನ ಮಾಡು. ಪಾಂಡವ! ಪುರುಷಶಾರ್ದೂಲ! ನಾಲ್ಕು ಆಶ್ರಮದವರೂ ನಾಲ್ಕು ವರ್ಣದವರೂ ಪಡೆದುಕೊಳ್ಳುವ ಪುಣ್ಯವನ್ನು ಧರ್ಮಪಾಲನೆಯಲ್ಲಿ ನಿರತನಾಗಿರುವ ರಾಜನು ಪಡೆದುಕೊಳ್ಳುತ್ತಾನೆ.”

The other spiritual discourses in Mahabharata (Kannada):

  1. ತೀರ್ಥಯಾತ್ರಾಮಹಾತ್ಮೆ: ಭೀಷ್ಮ-ಪುಲಸ್ತ್ಯರ ಸಂವಾದ
  2. ಧೌಮ್ಯನು ಯುಧಿಷ್ಠಿರನಿಗೆ ತೀರ್ಥಯಾತಾಕ್ಷೇತ್ರಗಳನ್ನು ವರ್ಣಿಸಿದುದು
  3. ಯುಧಿಷ್ಠಿರ-ಮಾರ್ಕಂಡೇಯ ಸಂವಾದ
  4. ಸರಸ್ವತೀಗೀತೆ
  5. ಕೌಶಿಕ-ಪತಿವ್ರತೆ-ಧರ್ಮವ್ಯಾಧ
  6. ವಿದುರನೀತಿ
  7. ಸನತ್ಸುಜಾತಿಯ
  8. ಭೌಮಗುಣಕಥನ
  9. ಶ್ರೀಮದ್ಭಗವದ್ಗೀತಾ
  10. ಸೇನಜಿತ್-ಬ್ರಾಹ್ಮಣ ಸಂವಾದ; ಪಿಂಗಲ ಗೀತೆ
  11. ಪಿತಾಪುತ್ರ ಸಂವಾದ
  12. ಶಮ್ಯಾಕಗೀತೆ
  13. ಮಂಕಿಗೀತೆ
  14. ಭೃಗು-ಭರದ್ವಾಜ ಸಂವಾದ
  15. ಸಾಂಖ್ಯ ಯೋಗ: ಯಾಜ್ಞವಲ್ಕ್ಯ-ಜನಕ ಸಂವಾದ

Continue reading...
 
Top