VyasaOnline ಭೀಷ್ಮ-ಯುಧಿಷ್ಠಿರ ಸಂವಾದ: ರಾಜಧರ್ಮ – 3

  • Thread starter Ramesh Banadakoppa Manjappa
  • Start date
R

Ramesh Banadakoppa Manjappa

Guest

ಭೀಷ್ಮ-ಯುಧಿಷ್ಠಿರ ಸಂವಾದ: ರಾಜಧರ್ಮ - 3


ಓಂ' ಬಗ್ಗೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳು | things-you-dint-know-about-om - Kannada BoldSky


ರಾಷ್ಟ್ರದ ರಕ್ಷೆ ಮತ್ತು ಉನ್ನತಿಗಾಗಿ ರಾಜನ ಅವಶ್ಯಕತೆಯನ್ನು ಪ್ರತಿಪಾದಿಸುವ ಹಾಗೂ ಬ್ರಹ್ಮನ ಆದೇಶದಂತೆ ಮನುವು ರಾಜನಾದುದರ ಕಥೆಯನ್ನೊಳಗೊಂಡ ಭೀಷ್ಮ-ಯುಧಿಷ್ಠಿರರ ಈ ಸಂವಾದವು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 67ರಲ್ಲಿ ಬರುತ್ತದೆ.

***

ಯುಧಿಷ್ಠಿರನು ಹೇಳಿದನು:

“ಪಿತಾಮಹ! ನಾಲ್ಕು ಆಶ್ರಮಗಳ ಕುರಿತೂ ಮತ್ತು ನಾಲ್ಕು ವರ್ಣಗಳ ಕುರಿತೂ ನೀನು ಹೇಳಿದ್ದೀಯೆ. ಈಗ ರಾಷ್ಟ್ರದ ಮುಖ್ಯ ಕರ್ತವ್ಯವೇನೆಂದು ನನಗೆ ಹೇಳು.”

ಭೀಷ್ಮನು ಹೇಳಿದನು:

“ರಾಜನನ್ನು ಅಭಿಷೇಕಿಸುವುದೇ ರಾಷ್ಟ್ರದ ಮುಖ್ಯ ಕರ್ತವ್ಯ. ರಾಜನಿಲ್ಲದ ರಾಷ್ಟ್ರವು ಬಲಹೀನವಾಗುತ್ತದೆ. ದಸ್ಯುಗಳ ವಶವಾಗುತ್ತದೆ. ರಾಜನಿಲ್ಲದ ರಾಷ್ಟ್ರದಲ್ಲಿ ಧರ್ಮವು ಉಳಿಯುವುದಿಲ್ಲ. ಪರಸ್ಪರರನ್ನು ನುಂಗಿಹಾಕುತ್ತಾರೆ. ಅರಾಜಕತೆಯನ್ನು ಸರ್ವಥಾ ಧಿಕ್ಕರಿಸಬೇಕು. ಪ್ರಜೆಗಳು ರಾಜನನ್ನು ವರಣಮಾಡಿದಾಗ ಇಂದ್ರನನ್ನೇ ಅವರು ವರಣಮಾಡಿದಂತೆ ಎಂಬ ಶೃತಿವಾಕ್ಯವಿದೆ. ಆದುದರಿಂದ ಶ್ರೇಯಸ್ಸನ್ನು ಇಚ್ಛಿಸುವವರು ರಾಜನನ್ನು ಇಂದ್ರನೆಂದು ತಿಳಿದೇ ಪೂಜಿಸುತ್ತಾರೆ. ರಾಜನಿಲ್ಲದ ರಾಷ್ಟ್ರದಲ್ಲಿ ವೈದಿಕ ಧರ್ಮವು ವಾಸಿಸುವುದಿಲ್ಲ. ರಾಜನಿಲ್ಲದ ರಾಷ್ಟ್ರದಲ್ಲಿ ಅಗ್ನಿಯು ಹವಿಸ್ಸುಗಳನ್ನು ಒಯ್ಯುವುದಿಲ್ಲ. ರಾಜನಿಲ್ಲದಿರುವ ಅಥವಾ ರಾಜನು ಹತನಾಗಿರುವ ರಾಷ್ಟ್ರವನ್ನು ಬಲವತ್ತರ ರಾಜ್ಯಾರ್ಥಿಯು ಆಕ್ರಮಣಿಸಿದರೆ ಅವನನ್ನು ಪೂಜಿಸಿ ಸ್ವಾಗತಿಸುವುದೇ ರಾಷ್ಟ್ರದ ಜನರಿಗೆ ಉತ್ತಮವಾದುದು ಎಂಬ ಸಲಹೆಯಿದೆ. ಅರಾಜಕತೆಯ ಪಾಪಕ್ಕಿಂತ ಹೆಚ್ಚಿನ ಪಾಪವು ಇಲ್ಲ. ಅವನು ಅವರನ್ನು ಒಳ್ಳೆಯದಾಗಿಯೇ ನೋಡಿಕೊಳ್ಳಬಹುದು. ಸಮಗ್ರವೂ ಕುಶಲವಾಗಬಹುದು. ಕೋಪಿಷ್ಠನಾದ ಬಲವಾನನು ರಾಷ್ಟ್ರವನ್ನು ನಿಃಶೇಷವನ್ನಾಗಿಯೂ ಮಾಡಬಹುದು. ಸುಲಭವಾಗಿ ಹಾಲುಕೊಡದ ಗೋವನ್ನು ಬಹಳವಾಗಿ ಕಾಡಿಸಿ ಹಾಲುಕರೆಯುತ್ತಾರೆ. ಹಾಗೆಯೇ ಸುಲಭವಾಗಿ ಹಾಲುಕೊಡುವ ಗೋವನ್ನು ಯಾವ ರೀತಿಯಲ್ಲಿಯೂ ಕಾಡಿಸುವುದಿಲ್ಲ[1]. ಯಾವುದು ಕಾಯಿಸದೆಯೇ ಬಗ್ಗುವುದೋ ಅದನ್ನು ಕಾಯಿಸುವುದಿಲ್ಲ. ಸ್ವಯಂ ಬಗ್ಗಿರುವ ಕೋಲನ್ನು ಯಾರೂ ಪುನಃ ಬಗ್ಗಿಸಲು ಪ್ರಯತ್ನಿಸುವುದಿಲ್ಲ. ಈ ಉಪಮೆಗಳಂತೆ ಬುದ್ಧಿವಂತನು ಬಲಿಷ್ಟನಾದವನಿಗೆ ಬಗ್ಗಿ ನಡೆಯಬೇಕು. ಬಲಿಷ್ಠನಿಗೆ ವಿನಮ್ರನಾಗಿರುವವನು ಇಂದ್ರನಿಗೆ ಪ್ರಮಾಣಮಾಡಿದಂತೆಯೇ ಆಗುತ್ತದೆ. ಆದುದರಿಂದ ಸತತವೂ ಏಳ್ಗೆಯನ್ನು ಬಯಸುವವರಿಗೆ ರಾಜನನ್ನು ಪಡೆಯುವುದೇ ಕರ್ತವ್ಯ. ರಾಜನಿಲ್ಲದಿರುವ ರಾಷ್ಟ್ರದವರಿಗೆ ತಮ್ಮ ಧನದಿಂದಾಗಲೀ ಪತ್ನಿಯಿಂದಾಗಲೀ ಯಾವ ಪ್ರಯೋಜನವೂ ಇರುವುದಿಲ್ಲ. ರಾಜನಿಲ್ಲದಿರುವ ದೇಶದಲ್ಲಿ ಪಾಪಿಗಳು ಪರವಿತ್ತವನ್ನು ಅಪಹರಿಸಿಯೇ ಸಂತೋಷದಿಂದಿರುತ್ತಾರೆ. ಆದರೆ ಅವನಿಗಿಂತಲೂ ಬಲಿಷ್ಠನು ಅದನ್ನು ಅವನಿಂದ ಕಸಿದುಕೊಳ್ಳಲು ಬಂದಾಗ ಅವನೂ ರಾಜನನ್ನೇ ಬಯಸುತ್ತಾನೆ. ರಾಜನಿಲ್ಲದ ದೇಶದಲ್ಲಿ ಪಾಪಿಗಳಿಗೂ ಕ್ಷೇಮವೆನ್ನುವುದಿರುವುದಿಲ್ಲ. ಒಬ್ಬನದ್ದನ್ನು ಇಬ್ಬರು ಅಪಹರಿಸುತ್ತಾರೆ. ಇಬ್ಬರದ್ದನ್ನು ಇನ್ನು ಅನೇಕರು ಸೇರಿ ಅಪಹರಿಸುತ್ತಾರೆ. ದಾಸರಲ್ಲದವರನ್ನು ದಾಸರನ್ನಾಗಿ ಮಾಡಲಾಗುತ್ತದೆ. ಸ್ತ್ರೀಯರನ್ನು ಬಲಾತ್ಕಾರವಾಗಿ ಅಪಹರಿಸಲಾಗುತ್ತದೆ. ಈ ಕಾರಣಗಳಿಂದಲೇ ದೇವತೆಗಳು ಪ್ರಜಾಪಾಲಕರನ್ನು ಸೃಷ್ಟಿಸಿದರು. ಈ ಲೋಕದಲ್ಲಿ ದಂಡಧಾರಕನಾದ ರಾಜನೆನ್ನುವನು ಇಲ್ಲದೇ ಹೋಗಿದ್ದರೆ ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ತಿಂದುಹಾಕುವಂತೆ ಈ ಭೂಮಿಯಲ್ಲಿ ದುರ್ಬಲರನ್ನು ಬಲವಂತರು ನಾಶಪಡಿಸುತ್ತಿದ್ದರು.

ಹಿಂದೆ ಅರಾಜಕತೆಯಿಂದಾಗಿ ಪ್ರಜೆಗಳು ನೀರಿನಲ್ಲಿರುವ ಮೀನುಗಳಂತೆ ಪರಸ್ಪರ ದುರ್ಬಲರನ್ನು ತಿಂದು ನಾಶಹೊಂದಿದರೆಂದು ಕೇಳಿದ್ದೇವೆ. ಆಗ ಅಳಿದುಳಿದವರು ಒಂದಾಗಿ ತಮ್ಮ ಒಳಿತಿಗಾಗಿ ಈ ನಿಯಮಗಳನ್ನು ಮಾಡಿಕೊಂಡರೆಂದು ಕೇಳಿದ್ದೇವೆ:

“ನಮ್ಮಲ್ಲಿ ಯಾರು ಕ್ರೂರವಾಗಿ ಮಾತನಾಡುವವರೋ, ಅತ್ಯಂತ ಕಠೋರವಾಗಿ ಶಿಕ್ಷಿಸುವವರೋ, ಇತರರ ಸ್ತ್ರೀಯನ್ನು ಸೇರುವರೋ ಮತ್ತು ಪರರ ಸ್ವತ್ತನ್ನು ಅಪಹರಿಸುವರೋ ಅವರೆಲ್ಲರನ್ನೂ ಬಹಿಷ್ಕರಿಸೋಣ!”

ಹೀಗೆ ವಿಶ್ವಾಸಾರ್ಥವಾಗಿ ನಿಯಮಮಾಡಿಕೊಂಡು ಸರ್ವ ವರ್ಣದವರೂ ದುಷ್ಟರನ್ನು ದೂರಮಾಡಿ ಕೆಲವು ಸಮಯ ಸುಖದಿಂದಲೇ ಇದ್ದರು. ಆದರೆ ಆ ಒಪ್ಪಂದವು ಹೆಚ್ಚುಕಾಲ ನಿಲ್ಲಲಿಲ್ಲ. ಆಗ ದುಃಖಪೀಡಿತರಾದ ಅವರು ಒಟ್ಟಿಗೇ ಪಿತಾಮಹನ ಬಳಿಹೋಗಿ ಹೇಳಿದರು:

“ಭಗವನ್! ಒಡೆಯನಿಲ್ಲದೇ ನಾವು ವಿನಾಶಹೊಂದುತ್ತಿದ್ದೇವೆ. ಯಾರು ಶಾಸಮಾಡಲು ಸಮರ್ಥನೋ, ಯಾರನ್ನು ನಾವು ಪೂಜಿಸಬಲ್ಲೆವೋ ಯಾರು ನಮ್ಮನ್ನು ಪರಿಪಾಲಿಸುವವನೋ ಅಂಥಹ ರಾಜನನ್ನು ತೋರಿಸು!”

ಆಗ ಭಗವಾನನು ಮನುವಿಗೆ ರಾಜನಾಗುವಂತೆ ನಿರ್ದೇಶಿಸಿದನು. ಆದರೆ ಮನುವು ಆ ಪ್ರಜೆಗಳನ್ನು ಸ್ವೀಕರಿಸಲಿಲ್ಲ. ಮನುವು ಹೇಳಿದನು:

“ಜನರು ಮಾಡುವ ಪಾಪಕರ್ಮಗಳ ವಿಷಯವಾಗಿ ನಾನು ಬಹಳ ಭಯಪಡುತ್ತೇನೆ. ರಾಜ್ಯಭಾರಮಾಡುವುದು ಅತ್ಯಂತ ಕಷ್ಟಕರವಾದುದು. ಅದರಲ್ಲಿಯೂ ನಿತ್ಯವೂ ಮಿಥ್ಯಾಚಾರದಲ್ಲಿ ತೊಡಗಿರುವ ಮನುಷ್ಯರ ಮೇಲೆ ಅಧಿಕಾರ ನಡೆಸುವುದು ಅತ್ಯಂತ ಕಠಿನವಾದುದು.””

ಆಗ ಪ್ರಜೆಗಳು ಅವನಿಗೆ ಹೇಳಿದರು:

“ಹೆದರಬೇಡ! ಪಾಪಕರ್ಮಿಗಳ ಪಾಪವು ರಾಜನಿಗೆ ತಗಲುವುದಿಲ್ಲ. ನಿನ್ನ ಭಂಡಾರವನ್ನು ವೃದ್ಧಿಗೊಳಿಸಲು ಐವತ್ತರಲ್ಲಿ ಒಂದು ಹಸುವನ್ನೂ, ಐವತ್ತರಲ್ಲಿ ಒಂದು ಸುವರ್ಣ ನಾಣ್ಯವನ್ನೂ, ಧಾನ್ಯದ ಹತ್ತನೇ ಒಂದು ಭಾಗವನ್ನೂ ಕೊಡುತ್ತೇವೆ. ಮಹೇಂದ್ರನನ್ನು ದೇವತೆಗಳು ಹೇಗೋ ಹಾಗೆ ಪ್ರಧಾನ ಪುರುಷರು ಪ್ರಮುಖ ಶಸ್ತ್ರಗಳನ್ನು ಹಿಡಿದು ನಿನ್ನನ್ನು ಅನುಸರಿಸಿ ಬರುತ್ತಾರೆ. ರಾಜನ್! ಹೀಗೆ ಬಲಶಾಲಿಯೂ, ಪ್ರತಾಪವಂತನೂ, ಅನ್ಯರಿಗೆ ಎದುರಿಸಲು ಅಸಾಧ್ಯನೂ ಆಗಿ ನೀನು ನೈರೃತರನ್ನು ಕುಬೇರನು ಹೇಗೋ ಹಾಗೆ ನಮ್ಮೆಲ್ಲರನ್ನೂ ಸುಖವಾಗಿ ರಕ್ಷಿಸುತ್ತೀಯೆ. ರಾಜನಿಂದ ಸುರಕ್ಷಿತರಾದ ಪ್ರಜೆಗಳು ಎಷ್ಟು ಧರ್ಮದಲ್ಲಿ ನಡೆದುಕೊಳ್ಳುತ್ತಾರೋ ಆ ಧರ್ಮದ ನಾಲ್ಕನೆಯ ಒಂದು ಭಾಗವು ನಿನ್ನ ಪಾಲಾಗುತ್ತದೆ. ರಾಜನ್! ಸುಖವಾಗಿ ಲಬ್ಧವಾಗುವ ಆ ಮಹಾ ಧರ್ಮದಿಂದ ಭಾವಿತನಾಗಿ ದೇವತೆಗಳನ್ನು ಶತುಕ್ರತುವು ಹೇಗೋ ಹಾಗೆ ನಮ್ಮನ್ನು ಸರ್ವತಃ ರಕ್ಷಿಸು. ಸೂರ್ಯನಂತೆ ಶತ್ರುಗಳನ್ನು ಸುಡುತ್ತಾ ವಿಜಯಯಾತ್ರೆಗೆ ಹೊರಡು. ಶತ್ರುಗಳ ಮಾನವನ್ನು ಒಡೆದುಹಾಕು. ಸದಾ ಧರ್ಮವು ಜಯಿಸಲಿ!”

ಆಗ ಅವನು ಮಹಾತೇಜಸ್ಸಿನಿಂದ ಮಹಾ ಸೇನೆಯಿಂದ ಸುತ್ತುವರೆಯಲ್ಪಟ್ಟು ಮಹಾಭಿಜನಸಂಪನ್ನನಾಗಿ ತೇಜಸ್ಸಿನಿಂದ ಪ್ರಜ್ವಲಿಸುತ್ತಾ ಹೊರಟನು. ಮಹೇಂದ್ರನ ಮಹಿಮೆಯನ್ನು ನೋಡಿ ದೇವತೆಗಳು ಹೇಗೋ ಹಾಗೆ ಅವನ ಆ ಮಹಿಮೆಯನ್ನು ನೋಡಿ ಬೆದರಿ ಸರ್ವರೂ ಸ್ವಧರ್ಮದಲ್ಲಿ ನಿರತರಾಗಿರಲು ನಿಶ್ಚಯಿಸಿದರು. ಬಳಿಕ ಮನುವು ಮಳೆಗರೆಯುವ ಮೇಘದಂತೆ ಪಾಪಿಗಳನ್ನು ಉಪಶಮನಗೊಳಿಸುತ್ತಾ, ಎಲ್ಲಕಡೆ ಎಲ್ಲರನ್ನೂ ಸ್ವಕರ್ಮದಲ್ಲಿ ತೊಡಗಿಸುತ್ತಾ ಇಡೀ ಭೂಮಿಯಲ್ಲಿ ಸಂಚರಿಸಿದನು.

ಹೀಗೆ ಭೂಮಿಯಲ್ಲಿ ಅಭಿವೃದ್ಧಿಯನ್ನು ಬಯಸುವ ಮಾನವರು ಎಲ್ಲಕ್ಕಿಂತಲೂ ಮೊದಲು ಪ್ರಜಾನುಗ್ರಹದ ಕಾರಣಕ್ಕಾಗಿ ರಾಜನನ್ನು ನಿಯೋಜಿಸಿಕೊಳ್ಳಬೇಕು. ಶಿಷ್ಯರು ಸದಾ ಗುರುವನ್ನು ಹೇಗೋ ಹಾಗೆ ಮತ್ತು ದೇವತೆಗಳು ಸಹಸ್ರಾಕ್ಷನನ್ನು ಹೇಗೋ ಹಾಗೆ ಪ್ರಜೆಗಳು ರಾಜನ ಬಳಿಸಾರಿ ನಮಸ್ಕರಿಸುತ್ತಾರೆ. ಸ್ವಜನರಿಂದ ಸತ್ಕೃತನಾದವನನ್ನು ಇತರರೂ ಕೂಡ ಗೌರವಿಸುತ್ತಾರೆ. ಸ್ವಜನರಿಂದಲೇ ತಿರಸ್ಕೃತನಾದವನನ್ನು ಇತರರೂ ಅನಾದರಿಸುತ್ತಾರೆ. ಶತ್ರುಗಳಿಂದ ಪರಾಜಿತನಾದ ರಾಜನು ಸರ್ವರಿಗೂ ಅಸುಖವನ್ನು ತರುತ್ತಾನೆ. ಆದುದರಿಂದ ರಾಜನಿಗೆ ಚತ್ರ, ವಾಹನ, ವಸ್ತ್ರಗಳು, ಆಭರಣಗಳು, ಭೋಜನ, ಅನ್ಯ ಪಾನೀಯಗಳು ಮತ್ತು ಗೃಹಗಳನ್ನು ನೀಡಬೇಕು. ಹೀಗೆ ಪ್ರಜೆಗಳಿಂದ ರಕ್ಷಿತನಾದ ರಾಜನು ಇತರರಿಗೆ ದುರಾಧರ್ಷನಾಗುತ್ತಾನೆ. ನಗುಮುಖದಿಂದಲೇ ಪ್ರಜೆಗಳೊಂದಿಗೆ ಮಾತನಾಡುತ್ತಾನೆ. ರಾಜನಾದವನು ಪ್ರಜೆಗಳಿಗೆ ಮಧುರ ಮಾತುಗಳಿಂದಲೇ ಉತ್ತರಿಸಬೇಕು. ರಾಜನಾದವನು ಪ್ರಜೆಗಳಿಗೆ ಕೃತಜ್ಞನಾಗಿರಬೇಕು. ಪ್ರಜೆಗಳಲ್ಲಿ ದೃಢ ಭಕ್ತಿಯನ್ನಿಟ್ಟುಕೊಂಡಿರಬೇಕು. ಅವರೊಂದಿಗೆ ಹಂಚಿಕೊಳ್ಳಬೇಕು. ಜಿತೇಂದ್ರಿಯನಾಗಿರಬೇಕು. ತನ್ನ ಕಡೆ ನೋಡುವವರನ್ನು ತಾನೂ ನೋಡಬೇಕು. ಮೃದುವಾಗಿರಬೇಕು. ಮಾಧುರ್ಯದಿಂದ ಮತ್ತು ಸರಳತೆಯಿಂದ ಮಾತನಾಡಬೇಕು.”

***

[1] ಪ್ರಜೆಗಳು ವಿನಮ್ರರಾಗಿದ್ದರೆ ಸುಖವಾಗಿರುತ್ತಾರೆ.

The other spiritual discourses in Mahabharata (Kannada):

  1. ತೀರ್ಥಯಾತ್ರಾಮಹಾತ್ಮೆ: ಭೀಷ್ಮ-ಪುಲಸ್ತ್ಯರ ಸಂವಾದ
  2. ಧೌಮ್ಯನು ಯುಧಿಷ್ಠಿರನಿಗೆ ತೀರ್ಥಯಾತಾಕ್ಷೇತ್ರಗಳನ್ನು ವರ್ಣಿಸಿದುದು
  3. ಯುಧಿಷ್ಠಿರ-ಮಾರ್ಕಂಡೇಯ ಸಂವಾದ
  4. ಸರಸ್ವತೀಗೀತೆ
  5. ಕೌಶಿಕ-ಪತಿವ್ರತೆ-ಧರ್ಮವ್ಯಾಧ
  6. ವಿದುರನೀತಿ
  7. ಸನತ್ಸುಜಾತಿಯ
  8. ಭೌಮಗುಣಕಥನ
  9. ಶ್ರೀಮದ್ಭಗವದ್ಗೀತಾ
  10. ಸೇನಜಿತ್-ಬ್ರಾಹ್ಮಣ ಸಂವಾದ; ಪಿಂಗಲ ಗೀತೆ
  11. ಪಿತಾಪುತ್ರ ಸಂವಾದ
  12. ಶಮ್ಯಾಕಗೀತೆ
  13. ಮಂಕಿಗೀತೆ
  14. ಭೃಗು-ಭರದ್ವಾಜ ಸಂವಾದ
  15. ಸಾಂಖ್ಯ ಯೋಗ: ಯಾಜ್ಞವಲ್ಕ್ಯ-ಜನಕ ಸಂವಾದ

Continue reading...
 
Top