VyasaOnline ವರ್ಣಾಶ್ರಮಧರ್ಮಕಥನ

  • Thread starter Ramesh Banadakoppa Manjappa
  • Start date
R

Ramesh Banadakoppa Manjappa

Guest

ವರ್ಣಾಶ್ರಮಧರ್ಮಕಥನ


ಓಂ' ಬಗ್ಗೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳು | things-you-dint-know-about-om - Kannada BoldSky


ವರ್ಣಾಶ್ರಮ ಧರ್ಮಗಳನ್ನು ವರ್ಣಿಸುವ ಮತ್ತು ಅವುಗಳಲ್ಲಿ ರಾಜಧರ್ಮದ ಮಹತ್ತ್ವವನ್ನು ಪ್ರತಿಪಾದಿಸುವ ಭೀಷ್ಮ-ಯುಧಿಷ್ಠಿರರ ಈ ಸಂವಾದವು ಶಾಂತಿಪರ್ವದ ರಾಜಧರ್ಮ ಪರ್ವದಲ್ಲಿ ಅಧ್ಯಾಯ 60-63ರಲ್ಲಿ ಬರುತ್ತದೆ.

***

ವರ್ಣಧರ್ಮ


ಅನಂತರ ಯುಧಿಷ್ಠಿರನು ಪಿತಾಮಹ ಗಾಂಗೇಯನಿಗೆ ಕೈಮುಗಿದು ತಲೆಬಾಗಿ ನಮಸ್ಕರಿಸಿ ಪುನಃ ಪ್ರಶ್ನಿಸಿದನು:

“ಸರ್ವವರ್ಣದವರಿಗೂ ಇರುವ ಧರ್ಮವ್ಯಾವುದು? ಚಾತುರ್ವರ್ಣ್ಯದ ಪ್ರತಿಯೊಂದು ವರ್ಣದವರಿಗೂ ಇರುವ ಧರ್ಮವ್ಯಾವುದು? ಈ ನಾಲ್ಕೂ ವರ್ಣದವರಲ್ಲಿ ನಾಲ್ಕು ಆಶ್ರಮಗಳ ಧರ್ಮಗಳ್ಯಾವುವು? ರಾಜಧರ್ಮಗಳು ಯಾವುವು? ಭರತರ್ಷಭ! ಯಾವುದರಿಂದ ರಾಷ್ಟ್ರವು ವೃದ್ಧಿಯಾಗುತ್ತದೆ? ಯಾವುದರಿಂದ ರಾಜನು ಅಭಿವೃದ್ಧಿಗೊಳ್ಳುತ್ತಾನೆ? ಯಾವುದರಿಂದ ಪೌರರೂ ಸೇವಕರೂ ಅಭಿವೃದ್ಧಿಹೊಂದುತ್ತಾರೆ? ರಾಜನಾದವನು ಯಾವ ರೀತಿಯ ಕೋಶಾಧಿಕಾರಿಗಳನ್ನೂ, ದಂಡಾಧಿಕಾರಿಗಳನ್ನೂ, ರಕ್ಷಣಾಧಿಕಾರಿಗಳನ್ನೂ, ಸಹಾಯಕರನ್ನೂ, ಮಂತ್ರಿಗಳನ್ನೂ, ಋತ್ವಿಕರನ್ನೂ, ಪುರೋಹಿತರನ್ನೂ, ಆಚಾರ್ಯರನ್ನೂ ವರ್ಜಿಸಬೇಕು? ಏನಾದರೂ ಆಪತ್ತು ಬಂದೊದಗಿದರೆ ರಾಜನಾದವನು ಯಾರ ಮೇಲೆ ವಿಶ್ವಾಸವನ್ನಿಡಬೇಕು? ಯಾರಿಂದ ತನ್ನ ದೃಢ ರಕ್ಷಣೆಯನ್ನು ಮಾಡಿಕೊಳ್ಳಬೇಕು? ಅದನ್ನು ನನಗೆ ಹೇಳು ಪಿತಾಮಹ!”

ಭೀಷ್ಮನು ಹೇಳಿದನು:

“ಮಹಾತ್ಮ ಧರ್ಮನಿಗೆ ನಮಸ್ಕಾರ! ವಿಶ್ವದ ಸೃಷ್ಟಿಗೆ ಕಾರಣನಾದ ಕೃಷ್ಣನಿಗೆ ನಮಸ್ಕಾರ! ಬ್ರಾಹ್ಮಣರಿಗೆ ನಮಸ್ಕರಿಸಿ ಶಾಶ್ವತ ಧರ್ಮಗಳ ಕುರಿತು ಹೇಳುತ್ತೇನೆ. ಕ್ರೋಧಿತನಾಗದಿರುವುದು, ಸತ್ಯವಚನ, ಎಲ್ಲವನ್ನೂ ಹಂಚಿಕೊಳ್ಳುವುದು, ಕ್ಷಮೆ, ತನ್ನದೇ ಪತ್ನಿಯಲ್ಲಿ ಮಕ್ಕಳನ್ನು ಪಡೆಯುವುದು, ಶುಚಿಯಾಗಿರುವುದು, ದ್ರೋಹವೆಸಗದಿರುವುದು, ಸರಳತೆ, ತನ್ನನ್ನೇ ಅವಲಂಬಿಸಿರುವವರ ಪಾಲನ-ಪೋಷಣೆ ಮಾಡುವುದು – ಇವುಗಳೇ ಸರ್ವವರ್ಣದವರಿಗೂ ಇರುವ ಧರ್ಮ.

ಇನ್ನು ನಾನು ಕೇವಲ ಬ್ರಾಹ್ಮಣ ವರ್ಣಕ್ಕೆ ಸಂಬಂಧಿಸಿದ ಧರ್ಮದ ಕುರಿತು ಹೇಳುತ್ತೇನೆ. ಮಹಾರಾಜ! ಇಂದ್ರಿಯ ನಿಗ್ರಹವೇ ಬ್ರಾಹ್ಮಣರ ಪುರಾತನ ಧರ್ಮವೆಂದು ಹೇಳುತ್ತಾರೆ. ಸ್ವಯಂ ತಾನೇ ಅಧ್ಯಯನ ಮಾಡುವುದು ಮತ್ತು ಇತರರಿಗೆ ಅಧ್ಯಾಪನ ಮಾಡುವುದು ಇವುಗಳಿಂದ ಅವನ ಕರ್ಮಗಳೆಲ್ಲ ಪೂರೈಸಿದಂತಾಗುತ್ತದೆ. ಸ್ವ-ವರ್ಣೋಕ್ತವಾದ ಸ್ವಾಧ್ಯಾಯ-ಅಧ್ಯಾಪನಗಳಲ್ಲಿಯೇ ನಿರತನಾಗಿರುವ, ಮಾಡದಿರುವಂಥಹ ಕರ್ಮಗಳನ್ನು ಮಾಡದೇ ಶಾಂತನಾಗಿ, ಪ್ರಜ್ಞಾನ ಮತ್ತು ತೃಪ್ತಿಯಿಂದಿದ್ದ ಬ್ರಾಹ್ಮಣನು ಒಂದು ವೇಳೆ ಸಂಪತ್ತನ್ನೇನಾದರೂ ಪಡೆದುಕೊಂಡರೆ ಅವನು ಮದುವೆಮಾಡಿಕೊಂಡು ಸಂತಾನವನ್ನು ಪಡೆಯಬೇಕು. ದಾನಮಾಡಬೇಕು. ಯಜ್ಞಮಾಡಬೇಕು. ತಾನಾಗಿಯೇ ಬಂದ ಸಂಪತ್ತನ್ನು ಬಂಧು-ಬಾಂಧವರಲ್ಲಿ ಹಂಚಿಕೊಂಡು ಭೋಗಿಸಬೇಕು. ಇದು ಬ್ರಾಹ್ಮಣರ ಧರ್ಮವೆಂದು ಸತ್ಪುರುಷರು ಹೇಳುತ್ತಾರೆ. ಅವನು ಬೇರೆ ಕರ್ಮಗಳನ್ನು ಮಾಡಲಿ ಅಥವಾ ಮಾಡದಿರಲಿ – ಬ್ರಾಹ್ಮಣನು ಸ್ವಾಧ್ಯಾಯದಿಂದಲೇ ಕೃತಕೃತ್ಯತೆಯನ್ನು ಹೊಂದುತ್ತಾನೆ. ಎಲ್ಲರೊಡನೆಯೂ ಮೈತ್ರಿಯಿಂದ ಇರುವುದರಿಂದ ಬ್ರಾಹ್ಮಣನನ್ನು “ಮೈತ್ರ” ಎಂದೂ ಕರೆಯುತ್ತಾರೆ.

ಭಾರತ! ಈಗ ನಿನಗೆ ಕ್ಷತ್ರಿಯನ ಧರ್ಮವನ್ನು ಹೇಳುತ್ತೇನೆ. ರಾಜನಾದವನು ದಾನನೀಡಬೇಕೇ ಹೊರತು ದಾನವನ್ನು ಕೇಳಬಾರದು. ಯಾಗಮಾಡಬೇಕೇ ಹೊರತು ಯಾಗಮಾಡಿಸಬಾರದು. ಅಧ್ಯಯನ ಮಾಡಬೇಕೇ ಹೊರತು ಇತರರಿಗೆ ಹೇಳಿಕೊಡಬಾರದು. ಪ್ರಜೆಗಳನ್ನು ಪರಿಪಾಲಿಸಬೇಕು. ಪ್ರಜೆಗಳನ್ನು ಪೀಡಿಸುವವರ ವಧೆಯಲ್ಲಿಯೇ ನಿತ್ಯವೂ ನಿರತನಾಗಿರಬೇಕು. ರಣದಲ್ಲಿ ಪರಾಕ್ರಮದಿಂದ ಯುದ್ಧಮಾಡಬೇಕು. ಕ್ರತುಗಳನ್ನು ಮಾಡಿರುವ, ವೇದ-ಶಾಸ್ತ್ರಗಳನ್ನು ತಿಳಿದುಕೊಂಡಿರುವ ಭೂಮಿಪರನ್ನು ಯುದ್ಧದಲ್ಲಿ ಸೋಲಿಸುವ ಕ್ಷತ್ರಿಯನೇ ಪುಣ್ಯಲೋಕಗಳನ್ನು ಜಯಿಸುತ್ತಾನೆ. ಶರೀರದಲ್ಲಿ ಯಾವ ಗಾಯವೂ ಆಗದೇ ಸಮರದಿಂದ ಹಿಂದಿರುಗಿದ ಕ್ಷತ್ರಿಯನ ಆ ಕರ್ಮವನ್ನು ವಿಧ್ವಾಂಸರು ಪ್ರಶಂಸಿಸುವುದಿಲ್ಲ. ವಧಿಸುವುದೇ ಕ್ಷತ್ರಬಂಧುಗಳ ಪ್ರಧಾನ ಧರ್ಮವೆಂದು ಹೇಳುತ್ತಾರೆ. ದಸ್ಯುಗಳನ್ನು ನಿಯಂತ್ರಿಸುವುದಕ್ಕಿಂತ ಹೆಚ್ಚಿನ ಕರ್ತವ್ಯವು ಅವರಿಗಿಲ್ಲ. ದಾನ, ಅಧ್ಯಯನ, ಯಜ್ಞ, ಯೋಗ ಇವು ಕ್ಷತ್ರಿಯರಿಗೆ ಒಳ್ಳೆಯದೆಂದು ವಿಧಿತವಾಗಿವೆ. ಆದರೆ ಧರ್ಮದಿಂದಿರುವ ರಾಜನು ವಿಶೇಷವಾಗಿ ಯುದ್ಧಶೀಲನಾಗಿರಬೇಕು. ಮಹೀಪತಿಯು ಪ್ರಜೆಗಳೆಲ್ಲರನ್ನೂ ಅವರವರ ಧರ್ಮದಲ್ಲಿ ನೆಲೆಸಿರುವಂತೆ ಮಾಡಿ ಶಾಂತಿಗಾಗಿ ಸರ್ವಕೃತ್ಯಗಳನ್ನೂ ಧರ್ಮಾನುಸಾರವಾಗಿಯೇ ಮಾಡುತ್ತಿರಬೇಕು. ಬೇರೆ ಏನನ್ನು ಮಾಡಲಿ ಅಥವಾ ಮಾಡದಿರಲಿ, ನೃಪತಿಯು ಪ್ರಜಾಪಾಲನೆಯಿಂದಲೇ ನೃಪತಿಯು ಕೃತಕೃತ್ಯನಾಗುತ್ತಾನೆ. ಇಂದ್ರನಂತೆ ಬಲವೇ ಪ್ರಧಾನವಾಗಿರುವುದರಿಂದ ರಾಜನನ್ನು “ಐಂದ್ರ” ಎಂದೂ ಕರೆಯುತ್ತಾರೆ.

ಭಾರತ! ಈಗ ನಾನು ನಿನಗೆ ವೈಶ್ಯನ ಧರ್ಮವನ್ನು ಹೇಳುತ್ತೇನೆ. ದಾನ, ಅಧ್ಯಯನ, ಯಜ್ಞ, ಶೌಚ ಮತ್ತು ಧನಸಂಚಯ ಇವು ವೈಶ್ಯನ ಧರ್ಮಗಳು. ವೈಶ್ಯನು ತಂದೆಯಂತೆ ಸರ್ವಪಶುಗಳನ್ನೂ ಪಾಲಿಸಬೇಕು. ಪಶುಪಾಲನೆಯನ್ನು ಬಿಟ್ಟು ಬೇರೆ ಯಾವ ಕೆಲಸಗಳನ್ನು ಮಾಡಿದರೂ ವೈಶ್ಯನಿಗೆ ಅದು ವಿಕರ್ಮವೇ ಆಗುತ್ತದೆ. ಪ್ರಜಾಪತಿಯು ವೈಶ್ಯನಿಗೆಂದೇ ಪಶುಗಳನ್ನು ಸೃಷ್ಟಿಸಿದನು. ಬ್ರಾಹ್ಮಣರಿಗೆ ಮತ್ತು ರಾಜರಿಗೆ ಎಲ್ಲ ಪ್ರಜೆಗಳ ಪಾಲನೆಯ ಜವಾಬ್ಧಾರಿಯನ್ನೂ ಕೊಟ್ಟಿದ್ದಾನೆ. ವೈಶ್ಯನಾಗಿ ಉಪಜೀವನಮಾಡುವವನ ವೃತ್ತಿಯ ಕುರಿತು ಹೇಳುತ್ತೇನೆ. ಅವನು ಆರು ಹಸುಗಳನ್ನು ಸಾಕುತ್ತಿದ್ದರೆ ಅವುಗಳಲ್ಲಿ ಒಂದು ಹಸುವಿನ ಹಾಲನ್ನು ಮಾತ್ರ ತಾನು ಸೇವಿಸಬೇಕು. ನೂರು ಹಸುಗಳನ್ನು ಸಾಕುತ್ತಿದ್ದರೆ, ಅವುಗಳಲ್ಲಿ ಒಂದು ಜೋಡಿಯ ಹಾಲನ್ನು ಮಾತ್ರ ಸೇವಿಸಬೇಕು. ತೀರಿಕೊಂಡ ಹಸುಗಳ ಕೊಂಬುಗಳ ಮಾರಾಟದಿಂದ ಬರುವ ಮೌಲ್ಯದ ಏಳನೆಯ ಒಂದು ಭಾಗವನ್ನು ಮತ್ತು ಗೊರಸುಗಳ ಮಾರಾಟದಿಂದ ಬರುವ ಮೌಲ್ಯದ ಹದಿನಾರನೇ ಒಂದು ಭಾಗವನ್ನು ತನಗಾಗಿ ಇಟ್ಟುಕೊಳ್ಳಬಹುದು. ವೈಶ್ಯನು ಬೆಳೆದ ಆಹಾರಧಾನ್ಯಗಳಲ್ಲಿ ಹದಿನಾರನೇ ಒಂದು ಭಾಗವನ್ನು ಮಾತ್ರ ತನ್ನ ವಾರ್ಷಿಕ ಭತ್ಯವನ್ನಾಗಿ ಇಟ್ಟುಕೊಳ್ಳಬೇಕು. ಪಶುಗಳನ್ನು ನಾನು ರಕ್ಷಿಸುವುದಿಲ್ಲ ಎಂದು ವೈಶ್ಯನು ಎಂದೂ ಆಶಿಸಬಾರದು. ತಾನು ರಕ್ಷಿಸಲು ಸಾಧ್ಯವಾಗುವ ವರೆಗೆ ಇನ್ನೊಬ್ಬರಿಗೆ ಅವುಗಳ ರಕ್ಷಣೆಯ ಜವಾಬ್ಧಾರಿಯನ್ನು ಕೊಡಬಾರದು.

ಭಾರತ! ಈಗ ನಾನು ನಿನಗೆ ಶೂದ್ರನ ಧರ್ಮವನ್ನು ಹೇಳುತ್ತೇನೆ. ಪ್ರಜಾಪತಿಯು ಶೂದ್ರನನ್ನು ಇತರ ವರ್ಣಗಳ ದಾಸನನ್ನಾಗಿಯೇ ಸೃಷ್ಟಿಸಿದನು. ಆದುದರಿಂದ ಶೂದ್ರನಿಗೆ ಇತರ ವರ್ಣದವರ ಪರಿಚರ್ಯೆಯನ್ನೇ ವಿಧಿಸಲಾಗಿದೆ. ಅವರ ಶುಶ್ರೂಷೆಯಿಂದಲೇ ಶೂದ್ರನು ಮಹಾ ಸುಖವನ್ನು ಹೊಂದುತ್ತಾನೆ. ಶೂದ್ರನು ಈ ಮೂರು ವರ್ಣದವರನ್ನು ಅಸೂಯೆ ಪಡೆಯದೇ ಪರಿಚರಿಸಬೇಕು. ಶೂದ್ರನು ಎಂದೂ ಧನಸಂಚಯವನ್ನು ಮಾಡಬಾರದು. ಧನವನ್ನು ಪಡೆದು ಪಾಪಿಯಾಗಿ ಅವನು ತನಗಿಂಥಲೂ ಶ್ರೇಷ್ಠರಾದವರನ್ನು ತನ್ನ ಅಧೀನದಲ್ಲಿಟ್ಟುಕೊಳ್ಳಬಹುದು. ರಾಜನ ಅನುಜ್ಞೆಯನ್ನು ಪಡೆದು ಶೂದ್ರನು ಧನವನ್ನು ಸಂಗ್ರಹಿಸಿ ಧರ್ಮಕಾರ್ಯಗಳನ್ನು ಮಾಡಬಹುದು. ಶೂದ್ರನ ವೃತ್ತಿ ಮತ್ತು ಉಪಜೀವನದ ಕುರಿತು ಹೇಳುತ್ತೇನೆ. ಉಳಿದ ಮೂರು ವರ್ಣದವರೂ ಶೂದ್ರನ ಭರಣ-ಪೋಷಣೆಯನ್ನು ಅವಶ್ಯವಾಗಿ ಮಾಡಬೇಕೆಂದು ಹೇಳಲ್ಪಟ್ಟಿದೆ. ಪರಿಚರ್ಯೆಯನ್ನು ಮಾಡುವ ಶೂದ್ರನಿಗೆ ಉಪಯೋಗಿಸಿದ ಛತ್ರಿಯನ್ನೂ, ವೇಷ್ಟಿಯನ್ನೂ, ಶಯನಾಸನಗಳನ್ನೂ, ಪಾದರಕ್ಷೆಗಳನ್ನೂ, ಮತ್ತು ಬೀಸಣಿಗೆಗಳನ್ನೂ ಕೊಡಬೇಕು. ದ್ವಿಜಾತಿಯರು ಧರಿಸದ ಹಳೆಯ ಬಟ್ಟೆಗಳನ್ನು ಶೂದ್ರನಿಗೇ ಕೊಡಬೇಕು. ಏಕೆಂದರೆ ಇವು ಅವನ ಧರ್ಮಧನವೇ ಆಗಿರುತ್ತವೆ. ಶುಶ್ರೂಷೆಗೆಂದು ಯಾವುದೇ ಶೂದ್ರನು ಬಂದರೂ ದ್ವಿಜಾತಿಯವರು ಅವನಿಗೆ ವೃತ್ತಿಯನ್ನು ಕಲ್ಪಿಸಿಕೊಟ್ಟು ಜೀವನ ವ್ಯವಸ್ಥೆಯನ್ನು ಮಾಡಲೇ ಬೇಕೆಂದು ಧರ್ಮವಿದರು ಹೇಳುತ್ತಾರೆ. ಮಕ್ಕಳಿಲ್ಲದ ದ್ವಿಜಾತಿಯವನಿಗೆ ಶುಶ್ರೂಷೆಮಾಡುವ ಶೂದ್ರನೇ ಪಿಂಡಪ್ರದಾನ ಮಾಡಬೇಕು. ವೃದ್ಧರೂ ದುರ್ಬಲರೂ ಆದ ದ್ವಿಜಾತಿಯವರನ್ನು ಶೂದ್ರನೇ ಭರಣ-ಪೋಷಣೆಗಳನ್ನು ಮಾಡಬೇಕು. ಆಪತ್ತುಗಳಲ್ಲಿ ದ್ವಿಜಾತಿಯವರನ್ನು ಶೂದ್ರನೇ ನೋಡಿಕೊಳ್ಳಬೇಕು. ಒಂದುವೇಳೆ ಯಜಮಾನನ ಧನವು ನಷ್ಟವಾಗಿ ನಿರ್ಧನನಾದರೆ ಶೂದ್ರನು ದೂರೀಕರಿಸದೇ ಅವನ ಭರಣ-ಪೋಷಣೆಯನ್ನು ಮಾಡಬೇಕು. ಭಾರತ! ಮೂರು ವರ್ಣದವರಿಗೆ ಹೇಳಿರುವ ಯಜ್ಞಗಳೂ ಶೂದ್ರನಿಗೆ ಹೇಳಲ್ಪಟ್ಟಿವೆ. ಆದರೆ ಶೂದ್ರರಿಗೆ ಸ್ವಾಹಾಕಾರ ಮತ್ತು ನಮಸ್ಕಾರಗಳೇ ಮಂತ್ರಗಳೆಂದು ವಿಹಿತವಾಗಿವೆ. ಶೂದ್ರನು ಸ್ವಯಂ ವ್ರತನಿಷ್ಟನಾಗಿದ್ದುಕೊಂಡು ಸ್ವಾಹಾಕಾರ-ನಮಸ್ಕಾರಗಳಿಂದ ಪಾಕಯಜ್ಞದ ಮೂಲಕ ಯಾಜಿಸಬೇಕು. ಪಾಕಯಜ್ಞದ ದಕ್ಷಿಣೆಗೆ “ಪೂರ್ಣಪಾತ್ರಮಯೀ[1]” ಎಂದು ಹೇಳುತ್ತಾರೆ. “ಪೈಜವನ” ಎಂಬ ಹೆಸರಿನ ಶೂದ್ರನು ಐಂದ್ರಾಗ್ನಿಯ ವಿಧಾನದಿಂದ ಯಾಜಿಸಿ, ಒಂದು ಲಕ್ಷ ಪೂರ್ಣಪಾತ್ರೆಗಳನ್ನು ದಕ್ಷಿಣೆಯನ್ನಾಗಿತ್ತನು ಎಂದು ನಾವು ಕೇಳಿದ್ದೇವೆ.

ಹೀಗಿದ್ದರೂ ಸರ್ವವರ್ಣದವರಿಗೂ ಶ್ರದ್ಧಾಯಜ್ಞವೇ ವಿಹಿತವಾಗಿವೆ. ದೇವತೆಗಳಿಗೂ ಮಹತ್ತರವಾದ ಶ್ರದ್ಧೆಯೇ ಯಾಜಕನನ್ನು ಪವಿತ್ರಗೊಳಿಸುತ್ತದೆ. ವಿಪ್ರರು ಅನ್ಯೋನ್ಯವಾಗಿ ತಮ್ಮವರೊಂದಿಗೆ ಕೂಡಿಕೊಂಡು ಅವರವರ ಸನಾತನ ಕಾಮಗಳಿಂದ ಸತ್ರಗಳ ಮೂಲಕ ಪರಮ ದೈವತವನ್ನು ಯಜಿಸುತ್ತಾರೆ. ಬ್ರಾಹ್ಮಣರಿಂದಲೇ ಉಳಿದ ಮೂರು ವರ್ಣಗಳು ಸೃಷ್ಟಿಸಲ್ಪಟ್ಟಿವೆ. ದೇವತೆಗಳಿಗೂ ದೇವರಂತಿರುವ ಅವರು ಏನನ್ನು ಹೇಳುತ್ತಾರೆಯೋ ಅದು ಎಲ್ಲ ವರ್ಣದವರಿಗೂ ಪರಮ ಹಿತವಾದುದಾಗಿರುತ್ತದೆ. ಆದುದರಿಂದ ಉಳಿದ ವರ್ಣದವರು ಸರ್ವಯಜ್ಞಗಳನ್ನೂ ಬ್ರಾಹ್ಮಣರ ಆದೇಶದಂತೆಯೇ ಮಾಡಬೇಕೇ ಹೊರತು ಸ್ವ-ಇಚ್ಛೆಯಿಂದಲ್ಲ. ಋಗ್ವೇದ, ಯಜುರ್ವೇದ ಮತ್ತು ಸಾಮವೇದಗಳನ್ನು ಅರ್ಥಮಾಡಿಕೊಂಡಿರುವ ದ್ವಿಜನು ದೇವತೆಗಳಂತೆ ನಿತ್ಯವೂ ಪೂಜನೀಯನು. ಋಗ್ವೇದ-ಯಜುರ್ವೇದ-ಸಾಮವೇದಗಳನ್ನು ಅರಿಯದ ಬ್ರಾಹ್ಮಣನು ಪ್ರಜಾಪತಿಯ ಉಪದ್ರವನು. ಭಾರತ! ಮಗೂ! ಸರ್ವವರ್ಣದವರಲ್ಲಿ ಮನಸ್ಸು-ಶ್ರದ್ಧೆಗಳಿಂದ ಮಾಡುವ ಯಜ್ಞವನ್ನು ದೇವತೆಗಳು ಮತ್ತು ಇತರ ಜನರು ಅಪೇಕ್ಷಿಸುವುದಿಲ್ಲ. ಆದುದರಿಂದ ಸರ್ವ ವರ್ಣದವರಿಗೂ ಶದ್ಧಾಯಜ್ಞವನ್ನೂ ವಿಧಿಸಲಾಗಿದೆ. ಬ್ರಾಹ್ಮಣನು ತನ್ನ ಕರ್ಮಗಳಿಂದ ಇತರ ಮೂರು ವರ್ಣದವರಿಗೂ ತನ್ನನ್ನು ನಿತ್ಯ ದೇವತೆಯಂತೆ ಮಾಡಿಕೊಂಡಿದ್ದಾನೆ. ಅವನು ಇತರ ವರ್ಣದವರಿಗಾಗಿ ಯಜ್ಞಮಾಡುವುದಿಲ್ಲ ಎನ್ನುವುದು ಇಲ್ಲ. ಇತರ ಮೂರು ವರ್ಣದವರಿಗಾಗಿಯೇ ಬ್ರಾಹ್ಮಣನು ಸೃಷ್ಟಿಸಲ್ಪಟ್ಟಿದ್ದಾನೆ ಎನ್ನುವುದನ್ನು ಕಾಣುತ್ತೇವೆ. ಬ್ರಾಹ್ಮಣ ವರ್ಣದಿಂದಲೇ ಇತರ ಜಾತಿಧರ್ಮಗಳು ಸೃಷ್ಟಿಯಾಗಿರುವುದರಿಂದ, ಉಳಿದ ಮೂರು ವರ್ಣಗಳೂ ಬ್ರಾಹ್ಮಣವರ್ಣಕ್ಕೆ ಸಮಾನವರ್ಣಗಳಾಗಿವೆ. ಋಗ್ವೇದ-ಯಜುರ್ವೇದ-ಸಾಮವೇದಗಳು ಹೇಗೆ ಒಂದೇ ಆಗಿರುವವೋ ಹಾಗೆ ವಿಪ್ರನೂ ಉಳಿದ ಮೂರು ವರ್ಣಗಳಿಂದ ಬೇರೆಯಲ್ಲ ಎಂದು ನಿಶ್ಚಯಿಸಲಾಗಿದೆ.

ರಾಜೇಂದ್ರ! ಇದಕ್ಕೆ ಸಂಬಂಧಿಸಿದಂತೆ ಪುರಾಣಗಳನ್ನು ತಿಳಿದಿರುವವರು ಯಜ್ಞಮಾಡಲು ಇಚ್ಛಿಸಿದ ವೈಖಾನಸ ಮುನಿಗಳ ಈ ಯಜ್ಞಗೀತೆಗಳನ್ನು ಹಾಡುತ್ತಾರೆ. “ಸೂರ್ಯೋದಯದ ಮೊದಲು ಅಥವಾ ನಂತರ ಶ್ರದ್ಧೆಯುಳ್ಳ ಜಿತೇಂದ್ರಿಯನು ಧರ್ಮಪೂರ್ವಕಗಾಗಿ ಅಗ್ನಿಯಲ್ಲಿ ಆಹುತಿಯನ್ನು ಕೊಡುತ್ತಾನೆ. ಅದಕ್ಕೆ ಶ್ರದ್ಧೆಯೇ ಮುಖ್ಯ ಕಾರಣವಾಗಿರುತ್ತದೆ. ಇವುಗಳಲ್ಲಿ ಸ್ಕನ್ನವಾದವುಗಳು ಮೊದಲಿನವನಿಗೂ ಅಸ್ಕನ್ನವಾದವುಗಳು ಎರಡನೆಯವನಿಗೂ ಸೇರುತ್ತವೆ[2]. ನಾನಾಕರ್ಮಫಲಗಳನ್ನು ಕೊಡುವ ಯಜ್ಞವಿಧಗಳು ಅನೇಕವಾಗಿವೆ. ಯಾರು ಹಲವು ಯಜ್ಞರೂಪಗಳನ್ನು ಮತ್ತು ಅವುಗಳು ಕೊಡುವ ಫಲಗಳನ್ನು ತಿಳಿದುಕೊಂಡಿರುವನೋ ಅವನೇ ಯಜ್ಞಗಳ ಕುರಿತಾದ ನಿಶ್ಚಯಜ್ಞಾನಿಯಾಗಿರುತ್ತಾನೆ. ಶ್ರದ್ಧೆಯುಳ್ಳ ಅಂತಹ ದ್ವಿಜ ಪುರುಷನೇ ಯಾಗಮಾಡಲು ಅರ್ಹನಾಗುತ್ತಾನೆ. ಕಳ್ಳನೇ ಆಗಿರಲಿ, ಪಾಪಿಷ್ಟನೇ ಆಗಿರಲಿ ಅಥವಾ ಪಾಪಿಷ್ಟರಲ್ಲಿಯೇ ಅತಿಪಾಪಿಷ್ಟನಾಗಿರಲಿ, ಅವನು ಯಜ್ಞಮಾಡಲು ಇಚ್ಛಿಸಿದರೆ ಅಂಥವನನ್ನು ಸಾಧು, ಸತ್ಪುರುಷ ಎಂದೇ ಹೇಳುತ್ತಾರೆ. ಋಷಿಗಳೂ ಕೂಡ ಅವನನ್ನು ಸಾಧುವೆಂದು ಪ್ರಶಂಸಿಸುತ್ತಾರೆ. ಇದರಲ್ಲಿ ಸಂಶಯವೇ ಇಲ್ಲ. ಸರ್ವಥಾ ಸರ್ವವರ್ಣದವರೂ ಯಜ್ಞಮಾಡಬೇಕು ಎನ್ನುವುದು ಇದರ ನಿಶ್ಚಯ. ಆದುದರಿಂದ ಪುರುಷನು ಅಸೂಯಾರಹಿತನಾಗಿ ಪವಿತ್ರ ಶ್ರದ್ಧೆಯನ್ನು ಆಶ್ರಯಿಸಿ ಯಥಾಶಕ್ತಿ ಯಜ್ಞಮಾಡಬೇಕೆಂದು ತಿಳಿದವರು ಹೇಳುತ್ತಾರೆ."

ಆಶ್ರಮಧರ್ಮವರ್ಣನೆ


ಭೀಷ್ಮನು ಹೇಳಿದನು:

“ಸತ್ಯಪರಾಕ್ರಮಿ! ಮಹಾಬಾಹೋ! ಯುಧಿಷ್ಠಿರ! ನಾಲ್ಕು ಆಶ್ರಮಗಳು ಮತ್ತು ಅವುಗಳಲ್ಲಿ ನಾಲ್ಕು ವರ್ಣದವರ ಕರ್ಮಗಳು ಏನು ಎನ್ನುವುದನ್ನು ಕೇಳು! ಬ್ರಹ್ಮಚರ್ಯ, ಮಹಾಶ್ರಮ ಗಾರ್ಹಸ್ಥ್ಯ, ವಾನಪ್ರಸ್ಥ, ಮತ್ತು ಭೈಕ್ಷಚರ್ಯಗಳೆಂಬ ನಾಲ್ಕು ಆಶ್ರಮಗಳಿವೆ. ನಾಲ್ಕನೆಯದನ್ನು ಕೇವಲ ಬ್ರಾಹ್ಮಣರು ನಡೆಸುವಂಥದ್ದಾಗಿದೆ. ಜಟಾಕರಣಸಂಸ್ಕಾರ ಮತ್ತು ದ್ವಿಜಾತಿತ್ವವನ್ನು ಪಡೆದು, ವೇದಗಳನ್ನು ತಿಳಿದುಕೊಂಡು, ಅಧಾನಾದಿಕರ್ಮಗಳನ್ನು[3] ಮುಗಿಸಿ, ಗೃಹಸ್ಥಾಶ್ರಮದಲ್ಲಿ ಕೃತಕೃತ್ಯನಾಗಿ, ಇಂದ್ರಿಯಗಳನ್ನು ನಿಯಂತ್ರಿಸಿಕೊಂಡು ಪತ್ನಿಯೊಡನೆ ಅಥವಾ ಪತ್ನಿಯಿಲ್ಲದೇ ತಾನೊಬ್ಬನೇ ವಾನಪ್ರಸ್ಥಾಶ್ರಮಕ್ಕೆ ತೆರಳಬೇಕು. ಧರ್ಮವಿದನಾದ ಅವನು ಅಲ್ಲಿ ಅರಣ್ಯಕಶಾಸ್ತ್ರಗಳನ್ನು ಚೆನ್ನಾಗಿ ತಿಳಿದುಕೊಂಡು ಊರ್ಧ್ವರೇತಸ್ಕನಾಗಿದ್ದುಕೊಂಡು ಆತ್ಮನಲ್ಲಿ ಅವಿನಾಶೀ ಬ್ರಹ್ಮಸ್ವಭಾವವನ್ನು ಹೊಂದುವನು. ರಾಜನ್! ಇವೇ ಊರ್ಧ್ವರೇತಸ ಮುನಿಗಳ ಲಕ್ಷಣಗಳು. ಇವುಗಳು ವಿಪ್ರನು ತಪ್ಪದೇ ಮಾಡುವ ಕರ್ತವ್ಯಗಳು ಕೂಡ. ವಿಶಾಂಪತೇ! ಬ್ರಹ್ಮಚರ್ಯದಲ್ಲಿದ್ದ ಬ್ರಾಹ್ಮಣನು ಮೋಕ್ಷವನ್ನು ಬಯಸಿದರೆ ಅವನಿಗೆ ಭೈಕ್ಷಚರ್ಯೆಯನ್ನು ಸ್ವೀಕರಿಸುವ ಅಧಿಕಾರವಿದೆ. ಮುನಿಯು ಜಿತೇಂದ್ರಿಯನಾಗಿರಬೇಕು. ಆಸೆಗಳನ್ನಿಟ್ಟುಕೊಂಡಿರಬಾರದು. ಮಠ-ಕುಟೀರಗಳ್ಯಾವುವೂ ಇರಬಾರದು. ಯಾವಾಗಲೂ ಸಂಚಾರಮಾಡುತ್ತಲೇ ಇರಬೇಕು. ಸಾಯಂಕಾಲವು ಎಲ್ಲಿ ಆಗುತ್ತದೆಯೋ ಅಲ್ಲಿ ತಂಗಬೇಕು. ದೈವೇಚ್ಛೆಯಿಂದ ಯಾವ ಆಹಾರವು ಎಷ್ಟು ಲಭ್ಯವಾಗುವುದೋ ಅಷ್ಟನ್ನೇ ತಿಂದು ಜೀವನಿರ್ವಹಿಸಬೇಕು. ಆಶಾರಹಿತನಾಗಿದ್ದುಕೊಂಡು, ಸರ್ವವನ್ನೂ ಸಮನಾಗಿ ಕಾಣುತ್ತಾ, ನಿರ್ಭೋಗಿಯಾಗಿ, ನಿರ್ವಿಕಾರನಾಗಿ ವಿಪ್ರನು ಕ್ಷೇಮಾಶ್ರಮವನ್ನು ಪಡೆದು ಅವಿನಾಶಿ ಬ್ರಹ್ಮನೊಡನೆ ಏಕತೆಯನ್ನು ಹೊಂದುತ್ತಾನೆ. ವೇದಗಳನ್ನು ಅಧ್ಯಯನ ಮಾಡಿ, ಸರ್ವ ಕರ್ತವ್ಯಗಳನ್ನೂ ಮಾಡಿ, ಸಂತಾನವನ್ನು ಪಡೆದು, ಸುಖಗಳನ್ನು ಭೋಗಿಸಿ, ಸಮಾಹಿತನಾಗಿ ಮುನಿಗಳು ಕಂಡ, ಪಾಲಿಸಲು ಕಷ್ಟಕರ ಧರ್ಮವಾದ ಗಾರ್ಹಸ್ಥ್ಯಧರ್ಮವನ್ನು ಪಾಲಿಸಬೇಕು. ಗೃಹಸ್ಥನು ತನ್ನ ಪತ್ನಿಯಲ್ಲಿಯೇ ತೃಪ್ತಿಯನ್ನು ಹೊಂದಬೇಕು. ಋತುಸಮಯದಲ್ಲಿ ಮಾತ್ರ ಪತ್ನಿಯೊಡನೆ ಸಮಾಗಮಿಸಬೇಕು. ಶಠನೂ ವಂಚಕನೂ ಆಗಿರದೇ ನಿತ್ಯವೂ ಯೋಗಿಯಾಗಿರಬೇಕು. ಮಿತಾಹಾರಿಯಾಗಿದ್ದುಕೊಂಡು ದೇವತಾರಾಧನೆಯಲ್ಲಿ ತತ್ಪರನಾಗಿರಬೇಕು. ಕೃತಜ್ಞನಾಗಿರಬೇಕು. ಸತ್ಯವಂತನೂ, ಮೃದುಸ್ವಭಾವದವನೂ, ದಯಾಳುವೂ ಮತ್ತು ಕ್ಷಮಾಶೀಲನೂ ಆಗಿರಬೇಕು. ಗೃಹಸ್ಥಾಶ್ರಮಿಯು ಇಂದ್ರಿಯಗಳನ್ನು ನಿಗ್ರಹಿಸಿಕೊಂಡು, ವಿಧೇಯನೂ ಜಾಗರೂಕನೂ ಆಗಿ ಹವ್ಯ-ಕವ್ಯಗಳನ್ನು ಮಾಡಬೇಕು. ಸತತವೂ ದ್ವಿಜರಿಗೆ ಅನ್ನದಾತನಾಗಿರಬೇಕು. ಮಾತ್ಸರ್ಯವಿಲ್ಲದೇ ಸರ್ವವರ್ಣದವರಿಗೂ ನೀಡುವವನಾಗಿರಬೇಕು. ನಿತ್ಯವೂ ಯಜ್ಞ-ಯಾಗಾದಿಗಳಲ್ಲಿ ನಿರತನಾಗಿರಬೇಕು.

ಮಗೂ! ಇದಕ್ಕೆ ಸಂಬಂಧಿಸಿದಂತೆ ಮಹಾನುಭಾವ ಮಹರ್ಷಿಗಳು ನಾರಾಯಣ ಗೀತೆಯನ್ನು ಉದಾಹರಿಸುತ್ತಾರೆ. ಮಹಾ ಅರ್ಥವುಳ್ಳ, ಬಹಳ ತಪಶ್ಚರಣೆಯಿಂದ ಪ್ರೇರಿತವಾದ ಅದನ್ನು ನಾನು ಹೇಳುತ್ತೇನೆ. ಕೇಳು. “ಸತ್ಯ, ಸರಳತೆ, ಅತಿಥಿಪೂಜನ, ಧರ್ಮ-ಅರ್ಥ ಮತ್ತು ಪತ್ನಿಯೊಂದಿಗೆ ರತಿಸುಖ – ಹೀಗೆ ಲೋಕಗಳಲ್ಲಿ ಸುಖಗಳನ್ನು ಅನುಭವಿಸುವವನು ಪರಲೋಕದಲ್ಲಿಯೂ ಸುಖವನ್ನು ಅನುಭವಿಸುವನೆಂದು ನನ್ನ ಅಭಿಪ್ರಾಯ!” ಪತ್ನಿ-ಪುತ್ರರ ಭರಣ-ಪೋಷಣೆ, ವೇದಗಳ ಪಾರಾಯಣ ಇವು ಗೃಹಸ್ಥಾಶ್ರಮವನ್ನು ಆಶ್ರಯಿಸಿರುವ ಸಾಧುಗಳ ಶ್ರೇಷ್ಠ ಕರ್ತವ್ಯಗಳೆಂದು ಪರಮ ಋಷಿಗಳು ಹೇಳುತ್ತಾರೆ. ಹೀಗೆ ಯಾವ ಬ್ರಾಹ್ಮಣನು ಯಜ್ಞಶೀಲನಾಗಿ ಗಾರ್ಹಸ್ಥ್ಯಧರ್ಮದಲ್ಲಿದ್ದುಕೊಂಡು ಗೃಹಸ್ಥವೃತ್ತಿಯನ್ನು ಯಥಾವತ್ತಾಗಿ ಶುದ್ಧಿಗೊಳಿಸುವನೋ ಅವನು ಸ್ವರ್ಗಲೋಕದಲ್ಲಿಯೂ ವಿಶುದ್ಧ ಫಲವನ್ನು ಹೊಂದುತ್ತಾನೆ. ಅವನು ದೇಹಪರಿತ್ಯಾಗ ಮಾಡಿದಾಗ ಅವನ ಇಷ್ಟಕಾಮಗಳೆಲ್ಲವೂ ಅಕ್ಷಯವಾಗುತ್ತವೆ. ಆ ಕಾಮನೆಗಳು ಕಣ್ಣು-ಶಿರ-ಮುಖಗಳನ್ನು ಪಡೆದು ಅನಂತಕಾಲದವರೆಗೆ ಎಲ್ಲ ರೀತಿಯ ಸೇವೆಗಳನ್ನು ಮಾಡುತ್ತವೆ. ಯುಧಿಷ್ಠಿರ! ಕೆಸರು-ಕೊಳೆಗಳಿಂದ ಯುಕ್ತನಾದ ಬ್ರಹ್ಮಚಾರಿಯು ಏಕಾಂಗಿಯಾಗಿ ಊಟಮಾಡಬೇಕು. ಏಕಾಂಗಿಯಾಗಿ ಜಪವನ್ನಾಚರಿಸಬೇಕು. ಏಕಾಂಗಿಯಾಗಿ ಮಲಗಿಕೊಳ್ಳಬೇಕು. ಒಬ್ಬನನ್ನೇ ಆಚಾರ್ಯನನ್ನಾಗಿ ಆರಿಸಿಕೊಂಡು ಅವನ ಸೇವೆಯಲ್ಲಿಯೇ ಸದಾ ನಿರತನಾಗಿರಬೇಕು. ಬ್ರಹ್ಮಚಾರಿಯು ನಿತ್ಯವೂ ವ್ರತಿಯಾಗಿದ್ದು, ನಿತ್ಯವೂ ದೀಕ್ಷಾಪರನಾಗಿ ವೇದಾಧ್ಯಯವನ್ನು ಮಾಡುತ್ತಾ ಕರ್ತವ್ಯಕರ್ಮಗಳನ್ನೆಸಗುತ್ತಾ ಗುರುವಿನ ಮನೆಯಲ್ಲಿಯೇ ಸದಾ ವಾಸವಾಗಿರಬೇಕು. ಗುರುವನ್ನು ನಮಸ್ಕರಿಸುತ್ತಾ ಸತತವೂ ಅವನ ಶುಶ್ರೂಷೆಯನ್ನು ಮಾಡುತ್ತಿರಬೇಕು. ಷಟ್ಕರ್ಮಗಳನ್ನು[4] ಬಿಡದೇ ಮಾಡುತ್ತಿರಬೇಕು. ಆದರೆ ಗುರುಶುಶ್ರೂಷೆಗೆ ವಿರೋಧವಾಗದಂತೆ ಯಾವಾಗಲೂ ಅವುಗಳಲ್ಲಿಯೇ ನಿರತನಾಗಿರಬಾರದು. ಅಧಿಕಾರದಿಂದ ನಡೆದುಕೊಳ್ಳಬಾರದು. ದ್ವೇಷಿಗಳ ಸಹವಾಸ ಮಾಡಬಾರದು. ಮಗೂ! ಬ್ರಹ್ಮಚಾರಿ ಆಶ್ರಮಗಳಿಗೆ ಈ ಧರ್ಮವು ಹೇಳಲ್ಪಟ್ಟಿದೆ.”

ವರ್ಣಾಶ್ರಮಧರ್ಮಪಾಲನೆಯ ಮಹತ್ವ


ಯುಧಿಷ್ಠಿರನು ಹೇಳಿದನು:

“ಕಲ್ಯಾಣಕರವಾದ, ಸುಖಮಯವಾದ, ಅಭ್ಯುದಯವನ್ನುಂಟುಮಾಡುವ, ಅಹಿಂಸಾತ್ಮಕವಾದ, ಲೋಕಸಮ್ಮತವಾದ, ನಮ್ಮಂಥವರಿಗೆ ಸುಖಾವಹವಾದ ಧರ್ಮಗಳ ಕುರಿತು ಹೇಳು!”

ಭೀಷ್ಮನು ಹೇಳಿದನು:

“ಪ್ರಭೋ! ಭರತಸತ್ತಮ! ಬ್ರಾಹ್ಮಣನಿಗೆ ನಾಲ್ಕೂ ಆಶ್ರಮಗಳೂ ವಿಹಿತವಾಗಿವೆ. ಉಳಿದ ಮೂರು ವರ್ಣದವರು ಮೂರು ಆಶ್ರಮಗಳನ್ನು ಅನುಸರಿಸುತ್ತಾರೆ. ರಾಜನ್! ಸ್ವರ್ಗದಾಯಕವಾದ ಅನೇಕ ಕರ್ಮಗಳು ಹೇಳಲ್ಪಟ್ಟಿವೆ. ಯುದ್ಧವೇ ಮೊದಲಾದ ಹಿಂಸಾಕರ್ಮಗಳು ಕ್ಷತ್ರಿಯರಿಗೆ ಮಾತ್ರ ವಿಹಿತಗೊಂಡಿವೆ. ಬ್ರಾಹ್ಮಣನಾಗಿದ್ದರೂ ಕ್ಷತ್ರಿಯರ, ವೈಶ್ಯರ ಮತ್ತು ಶೂದ್ರರ ಸೇವಾಕರ್ಮಗಳನ್ನು ಮಾಡುವ ಮಂದಚೇತಸನು ಈ ಲೋಕದಲ್ಲಿ ನಿಂದಿಸಲ್ಪಡುವುದಲ್ಲದೇ ಪರಲೋಕದಲ್ಲಿಯೂ ನರಕಕ್ಕೆ ಹೋಗುತ್ತಾನೆ. ಪಾಂಡವ! ಲೋಕದಲ್ಲಿ ದಾಸ, ನಾಯಿ, ತೋಳ ಮತ್ತು ಪಶುಗಳಿಗೆ ಯಾವ ನಿಂದಾಸೂಚಕ ಸಂಜ್ಞೆಗಳಿವೆಯೋ ಅವುಗಳು ಕರ್ಮಭ್ರಷ್ಟನಾದ ಬ್ರಾಹ್ಮಣನಿಗೂ ಅನ್ವಯಿಸುತ್ತವೆ. ಷಟ್ಕರ್ಮಗಳಲ್ಲಿ ತೊಡಗಿಕೊಂಡು, ನಾಲ್ಕೂ ಆಶ್ರಮಗಳನ್ನೂ ನಡೆಸಿಕೊಂಡು ಸರ್ವಧರ್ಮೋಪಪನ್ನನಾಗಿರುವ, ಕೃತಾತ್ಮನೂ ಜಿತಚಿತ್ತನೂ, ವಿಶುದ್ಧನೂ, ತಪೋನಿರತನೂ, ಆಶಾರಹಿತನೂ, ಉದಾರನೂ ಆಗಿರುವ ಬ್ರಾಹ್ಮಣನಿಗೆ ಅಕ್ಷರ ಲೋಕಗಳೆಂದು ಹೇಳಲ್ಪಟ್ಟಿದೆ. ಯಾರು ಯಾವ ಆಶ್ರಮದಲ್ಲಿ ಯಾವ ಕರ್ಮವನ್ನು ಯಾವ ಕಾರಣದಿಂದ ಎಲ್ಲಿ ಮಾಡುತ್ತಾರೋ ಅವರು ಆ ಕರ್ಮಕ್ಕೆ ತಕ್ಕುದಾದ ಫಲವನ್ನು ಅದೇ ವಿಧಾನದಲ್ಲಿಯೇ ಪಡೆಯುತ್ತಾರೆ. ವೈಶ್ಯರಿಗೆ ಹೇಗೆ ಕೃಷಿ, ವಾಣಿಜ್ಯಗಳು ಮತ್ತು ಕ್ಷತ್ರಿಯರಿಗೆ ಪ್ರಜಾಪರಿಪಾಲನೆಯು ಮುಖ್ಯ ಕರ್ಮಗಳೋ ಹಾಗೆ ಬ್ರಾಹ್ಮಣನಿಗೆ ಸ್ವಾಧ್ಯಾಯವು ಮಹತ್ತರ ಕರ್ಮವಾಗಿದೆ. ಕಾಲನಿಂದ ಪ್ರೇರಿತರಾಗಿ ಮತ್ತು ಹಿಂದಿನ ಕರ್ಮಫಲಗಳ ವಾಸನೆಯಿಂದ ಪ್ರಭಾವಿತರಾಗಿ ಮನುಷ್ಯರು ಅವಶರಾಗಿ ಉತ್ತಮ-ಅಧಮ-ಮಧ್ಯಮ ಕರ್ಮಗಳನ್ನು ಮಾಡುತ್ತಾರೆ. ದೇಹಪ್ರಾಪ್ತಿಯೆಂಬ ಶ್ರೇಯಸ್ಸಿಗೆ ಹಿಂದಿನ ಕಾರಣಗಳು ದೇಹದೊಡನೆಯೇ ಅಂತ್ಯವಾಗುವವು. ಆದುದರಿಂದ ಸ್ವಕರ್ಮನಿರತನಾದವನು ಸರ್ವತೋಮುಖನಾಗಿ ಅಕ್ಷರ ಲೋಕಗಳನ್ನು ಸೇರುತ್ತಾನೆ.

ವರ್ಣಾಶ್ರಮಧರ್ಮಗಳಲ್ಲಿ ರಾಜಧರ್ಮದ ಶ್ರೇಷ್ಠತೆ


ಧನುಸ್ಸನ್ನು ಸೆಳೆಯುವುದು, ಶತ್ರುಗಳನ್ನು ಸಂಹರಿಸುವುದು, ಕೃಷಿ, ವಾಣಿಜ್ಯ, ಪಶುಪಾಲನೆ, ಸಂಪತ್ತಿಗಾಗಿ ಇತರರ ಶುಶ್ರೂಷೆಮಾಡುವುದು ಇವುಗಳು ದ್ವಿಜನಿಗೆ ಪರಮ ಅಕಾರ್ಯಗಳು. ಗೃಹಸ್ಥನಾಗಿರುವಾಗ ಬ್ರಾಹ್ಮಣನು ಆರು ಬ್ರಹ್ಮಕರ್ಮಗಳಲ್ಲಿ ತೊಡಗಿರಬೇಕು. ಗೃಹಸ್ಥಾಶ್ರಮದಲ್ಲಿ ಕೃತಕೃತ್ಯನಾದ ನಂತರ ಅರಣ್ಯದಲ್ಲಿ ವಾನಪ್ರಸ್ಥಾಶ್ರಮವನ್ನನುಸರಿಸಬೇಕು. ಬ್ರಾಹ್ಮಣನು ರಾಜಸೇವೆ, ಕೃಷಿಯಿಂದ ಸಂಪಾದನೆ, ವಾಣಿಜ್ಯದಿಂದ ಜೀವನ, ಕುಟಿಲತೆ, ವ್ಯಭಿಚಾರಿಣಿಯೊಂದಿಗೆ ಸಹವಾಸ ಮತ್ತು ಬಡ್ಡೀ ಹಣದಿಂದ ಜೀವಿಸುವುದು – ಇವುಗಳನ್ನು ವರ್ಜಿಸಬೇಕು. ರಾಜನ್! ದುಶ್ಚರಿತನೂ, ಧರ್ಮಹೀನನೂ, ಚಾಡಿಕೋರನೂ, ಕೆಳಜಾತಿಯವಳನ್ನು ಮದುವೆಯಾಗಿರುವವನೂ, ನರ್ತಕನೂ, ರಾಜಸೇವಕನೂ ಮತ್ತು ಬ್ರಾಹ್ಮಣರಿಗೆ ವಿರೋಧವಾದ ಕರ್ಮಗಳನ್ನು ಮಾಡುವವನೂ ಅವನು ಬ್ರಾಹ್ಮಣನಾಗಿದ್ದರೂ ಶೂದ್ರನಂತೆಯೇ! ರಾಜನ್! ಇಂಥವರು ವೇದಗಳನ್ನು ಜಪಿಸಲಿ ಅಥವಾ ಜಪಿಸದಿರಲಿ; ಅವರು ಶೂದ್ರಸಮರಾಗುತ್ತಾರೆ. ಭೋಜನದಲ್ಲಿ ದಾಸರನ್ನು ಹೇಗೋ ಹಾಗೆ ರಾಜನ್! ಈ ಶೂದ್ರಸಮಾನರನ್ನು ದೇವಕಾರ್ಯಗಳಲ್ಲಿ ವರ್ಜಿಸಬೇಕು. ರಾಜನ್! ತಿನ್ನುವುದರಲ್ಲಿ ಮರ್ಯಾದೆಯೇ ಇರದ, ಕ್ರೂರವೃತ್ತಿಮಾಡುವ, ಹಿಂಸಾತ್ಮಕನಾದ, ಧರ್ಮವನ್ನು ತ್ಯಜಿಸಿ ತನ್ನದೇ ವೃತ್ತಿಯಲ್ಲಿ ನಿರತನಾಗಿರುವ ಬ್ರಾಹ್ಮಣನನ್ನು ಹವ್ಯಕವ್ಯಗಳಲ್ಲಿ ಆಹ್ವಾನಿಸಿದರೆ ಮತ್ತು ಅಂಥಹ ಬ್ರಾಹ್ಮಣನಿಗೆ ದಾನಗಳನ್ನು ನೀಡಿದರೆ ಅವುಗಳನ್ನು ಮಾಡಿದರೂ ಮಾಡಿದಂತೆ ಆಗುವುದಿಲ್ಲ. ರಾಜನ್! ಆದುದರಿಂದ ಬ್ರಾಹ್ಮಣನಿಗೆ ಇಂದ್ರಿಯ ನಿಗ್ರಹ, ಶೌಚ, ಸರಳತೆ, ಇವುಗಳೇ ಧರ್ಮಗಳೆಂದು ವಿಹಿತವಾಗಿವೆ. ಹಾಗೆಯೇ ನಾಲ್ಕು ಆಶ್ರಮ ಧರ್ಮಗಳೂ ಬ್ರಾಹ್ಮಣನಿಗೆ ವಿಹಿತವಾಗಿರುತ್ತವೆ. ಏಕೆಂದರೆ ಎಲ್ಲರಿಗಿಂತಲೂ ಮೊದಲು ಬ್ರಾಹ್ಮಣನ ಸೃಷ್ಟಿಯಾಗಿರುತ್ತದೆ. ಇಂದ್ರಿಯಗಳನ್ನು ಸಂಯಮಗಳಲ್ಲಿಟ್ಟುಕೊಂಡಿರುವ, ಸೋಮವನ್ನು ಕುಡಿದಿರುವ, ಆರ್ಯಶೀಲ, ಅನುಕಂಪವುಳ್ಳ, ಸರ್ವವನ್ನೂ ಸಹಿಸಿಕೊಳ್ಳುವ, ಆಸೆಗಳನ್ನಿಟ್ಟುಕೊಂಡಿರದ, ನಿಷ್ಕಪಟಿ, ಮೃದು, ಅಹಿಂಸಾತ್ಮ, ಕ್ಷಮಾವಂತನು ಮಾತ್ರ ವಿಪ್ರನು. ಇತರರು ಪಾಪಕರ್ಮಿಗಳು. ಪಾಂಡುಪುತ್ರ! ರಾಜನ್! ಲೋಕದಲ್ಲಿ ಧರ್ಮ-ಅರ್ಥ-ಕಾಮಗಳನ್ನು ಅರಸುವ ಎಲ್ಲರೂ ಶೂದ್ರ, ವೈಶ್ಯ ಮತ್ತು ರಾಜನನ್ನು ಸಂಶ್ರಯಿಸುತ್ತಾರೆ. ಆದುದರಿಂದ ಯಾವ ವರ್ಣದವರು ಮೋಕ್ಷಧರ್ಮದಲ್ಲಿ ಆಸಕ್ತರಾಗಿರುವುದಿಲ್ಲವೋ ಅವರಿಗೆ ವಿಷ್ಣುವು ಉಪದೇಶಿಸಲು ಇಚ್ಛಿಸುವುದಿಲ್ಲ.

ಒಂದುವೇಳೆ ಇದು ಹೀಗಾಗದಿದ್ದರೆ ಈ ಲೋಕದಲ್ಲಿ ಮತ್ತು ಸರ್ವ ಲೋಕಗಳಲ್ಲಿ ಚಾತುರ್ವರ್ಣಗಳೂ, ವೇದವಾದಗಳೂ, ಎಲ್ಲ ಯಜ್ಞಗಳೂ, ಸರ್ವಲೋಕಕ್ರಿಯೆಗಳೂ ಇರುತ್ತಿರಲಿಲ್ಲ. ಯಾರೂ ಆಶ್ರಮಧರ್ಮಗಳಲ್ಲಿಯೂ ಇರುತ್ತಿರಲಿಲ್ಲ. ಪಾಂಡವ! ಬ್ರಾಹ್ಮಣ-ವೈಶ್ಯ-ಶೂದ್ರ ಈ ಮೂರು ವರ್ಣದವರು ತಮ್ಮ ತಮ್ಮ ಆಶ್ರಮಧರ್ಮಗಳನ್ನು ಪಾಲಿಸಬೇಕೆಂದು ಬಯಸುವುದಾದರೆ ಆಶ್ರಮಗಳಿಗೆ ಹೇಳಲ್ಪಟ್ಟಿರುವ ಧರ್ಮಗಳ ಕುರಿತು ಕೇಳು. ಜಗತೀಪತೇ! ಸೇವೆಗಳನ್ನು ಮಾಡಿ ಕೃತಕೃತ್ಯನಾದ, ಸಂತಾನಕರ್ಮಗಳನ್ನು ಪೂರೈಸಿದ, ದಶಧರ್ಮಗಳಲ್ಲಿ ಇತರರೊಂದಿಗೆ ಹೆಚ್ಚು ಅಂತರವನ್ನಿಟ್ಟುಕೊಂಡಿರದ ಶೂದ್ರನು ರಾಜನ ಅನುಮತಿಯನ್ನು ಪಡೆದು ಸಂನ್ಯಾಸವನ್ನು ಬಿಟ್ಟು ವಾನಪ್ರಸ್ಥಾಶ್ರಮವನ್ನು ಸ್ವೀಕರಿಸಬಹುದು. ರಾಜೇಂದ್ರ! ಹಾಗೆಯೇ ವೈಶ್ಯನ ಮತ್ತು ರಾಜಪುತ್ರನ ಧರ್ಮಚಾರಿಗಳಿಗೆ ಕೂಡ ಸಂನ್ಯಾಸಾಶ್ರಮವನ್ನು ಹೇಳಿಲ್ಲ. ಪರಿಶ್ರಮಗಳಿಂದ ಕೃತಕೃತ್ಯನಾದ ಮತ್ತು ವಯೋವೃದ್ಧನಾದ ವೈಶ್ಯನು ರಾಜನ ಅನುಮತಿಯನ್ನು ಪಡೆದು ರಾಜರ ವಾನಪ್ರಸ್ಥಾಶ್ರಮ ಮಂಡಲವನ್ನು ಸೇರಬಹುದು.

ಅನಘ! ಮಾತನಾಡುವವರಲ್ಲಿ ಶ್ರೇಷ್ಠ! ಪಾಂಡವ! ಕ್ಷತ್ರಿಯರ್ಷಭ! ರಾಜನ್! ಧರ್ಮಪೂರ್ವಕವಾಗಿ ವೇದಗಳನ್ನೂ ರಾಜಶಾಸ್ತ್ರಗಳನ್ನೂ ಕಲಿತು, ಸಂತಾನಾದಿ ಕರ್ಮಗಳನ್ನು ಪೂರೈಸಿ, ಸೋಮವನ್ನು ಸೇವಿಸಿ, ಧರ್ಮದಿಂದ ಪ್ರಜೆಗಳೆಲ್ಲರನ್ನೂ ಪಾಲಿಸಿ, ವೇದಗಳಲ್ಲಿ ಹೇಳಿರುವಂತೆ ರಾಜಸೂಯ-ಅಶ್ವಮೇಧವೇ ಮೊದಲಾದ ಮುಖ್ಯ ಯಜ್ಞಗಳನ್ನು ದ್ವಿಜರಿಗೆ ದಕ್ಷಿಣೆಗಳನ್ನಿತ್ತು ಪೂರೈಸಿ, ಸ್ವಲ್ಪ ಅಥವಾ ಅಧಿಕ ಸಂಗ್ರಾಮಗಳಲ್ಲಿ ವಿಜಯಿಯಾಗಿ, ಪ್ರಜಾಪಾಲನೆಗಾಗಿ ರಾಜ್ಯದಲ್ಲಿ ಮಗನನ್ನು ಅಥವಾ ಅನ್ಯ ಗೋತ್ರದ ಪ್ರಶಸ್ತ ಕ್ಷತ್ರಿಯನನ್ನು ಸ್ಥಾಪಿಸಿ, ಪ್ರಯತ್ನಪಟ್ಟು ಯಥಾವಿಧಿ ಯಜ್ಞಗಳನ್ನು ರಚಿಸಿ ಪಿತೃಗಳನ್ನೂ, ದೇವತೆಗಳನ್ನೂ ಮತ್ತು ಋಷಿಗಳನ್ನೂ ಅರ್ಚಿಸಿ, ಅಂತ್ಯಕಾಲವು ಸಂಪ್ರಾಪ್ತವಾದಾಗ ಆಶ್ರಮಾಂತರವಾದ ವಾನಪ್ರಸ್ಥವನ್ನು ಸ್ವೀಕರಿಸಿದರೆ ಅಂಥಹ ಕ್ಷತ್ರಿಯನು ಕ್ರಮಾನುಬದ್ಧವಾಗಿ ಆಶ್ರಮಧರ್ಮಗಳನ್ನು ಸ್ವೀಕರಿಸಿದವನಾಗಿ ಸಿದ್ಧಿಯನ್ನು ಪಡೆಯುತ್ತಾನೆ. ರಾಜೇಂದ್ರ! ಹೀಗೆ ರಾಜರ್ಷಿಯಾದವನು ಗೃಹಸ್ಥಧರ್ಮವನ್ನು ತ್ಯಾಗಮಾಡಿದರೂ ಜೀವನ ನಿರ್ವಹಣೆಗಾಗಿ ಭಿಕ್ಷೆಯನ್ನೇ ಮಾಡಬೇಕು. ಇತರರ ಸೇವೆಯನ್ನು ಮಾಡಬಾರದು. ಭರತರ್ಷಭ! ರಾಜಶಾರ್ದೂಲ! ಈ ಐಷ್ಠಿಕ ಕರ್ಮವು ಮೂರು ವರ್ಣದವರಿಗೆ ಮಾತ್ರ ಸೀಮಿತವಾಗಿಲ್ಲ. ನಾಲ್ಕೂ ವರ್ಣದವರಿಗೂ ಈ ವಾನಪ್ರಸ್ಥಾಶ್ರಮವನ್ನು ಹೇಳಿದ್ದಾರೆ.

ಬಾಹುಬಲವನ್ನಾಶ್ರಯಿಸಿರುವ ಈ ಕ್ಷತ್ರಿಯ ಧರ್ಮವು ಸರ್ವಮಾನವರ ಸೇವೆಗೈಯುವುದರಿಂದ ಲೋಕಶ್ರೇಷ್ಠವಾದುದು. ಬ್ರಾಹ್ಮಣ-ವೈಶ್ಯ-ಶೂದ್ರ ಈ ಮೂರು ವರ್ಣದವರ ಸರ್ವ ಧರ್ಮ-ಉಪಧರ್ಮಗಳೂ ರಾಜಧರ್ಮದಿಂದಲೇ ಸಂರಕ್ಷಿಸಲ್ಪಡುವುದು ಎಂದು ವೇದಗಳಿಂದ ಕೇಳಿದ್ದೇನೆ. ರಾಜನ್! ಆನೆಯ ಪದಚಿಹ್ನೆಯಲ್ಲಿ ಇತರ ಎಲ್ಲ ಪ್ರಾಣಿಗಳ ಹೆಜ್ಜೆಗಳ ಗುರುತುಗಳೂ ಹೇಗೆ ಲೀನವಾಗಿಬಿಡುತ್ತವೆಯೋ ಹಾಗೆ ಎಲ್ಲ ಧರ್ಮಗಳೂ ಮತ್ತ ಅವುಗಳ ಎಲ್ಲ ಅವಸ್ಥೆ-ಭೇದಗಳೂ ರಾಜಧರ್ಮದಲ್ಲಿ ಲೀನವಾಗಿಬಿಡುತ್ತವೆ ಎಂದು ತಿಳಿ. ಅನ್ಯ ಧರ್ಮಗಳ ಆಶ್ರಯವು ಅಲ್ಪಫಲಗಳನ್ನು ನೀಡುತ್ತವೆ ಎಂದು ಧರ್ಮವಿದ ಮನುಷ್ಯರು ಹೇಳುತ್ತಾರೆ. ಕ್ಷಾತ್ರಧರ್ಮಕ್ಕಿಂತಲೂ ಮಹಾಶ್ರಯ ನೀಡುವ ಮತ್ತು ಬಹುಕಲ್ಯಾಣರೂಪವಾದ ಇತರ ಧರ್ಮವಿಲ್ಲ ಎಂದು ಆರ್ಯರು ಹೇಳುತ್ತಾರೆ. ಸರ್ವಧರ್ಮಗಳಲ್ಲಿ ರಾಜಧರ್ಮವೇ ಪ್ರಧಾನವಾದುದು. ಎಲ್ಲ ಧರ್ಮಗಳ ಪಾಲನೆಯೂ ರಾಜಧರ್ಮದಿಂದ ನಡೆಯುತ್ತದೆ. ರಾಜನ್! ರಾಜಧರ್ಮದಲ್ಲಿ ಸರ್ವ ತ್ಯಾಗಗಳೂ ಒಳಗೊಂಡಿವೆ ಮತ್ತು ತ್ಯಾಗವೇ ಪುರಾಣ ಮತ್ತು ಅಗ್ರ ಧರ್ಮವೆಂದು ಹೇಳುತ್ತಾರೆ. ದಂಡನೀತಿಯು ನಾಶವಾಗಲು ಮೂರು ವೇದಗಳೂ ಪಾತಾಳದಲ್ಲಿ ಮುಳುಗಿಕೊಳ್ಳುತ್ತವೆ. ಸರ್ವ ಧರ್ಮಗಳೂ ನಾಶಗೊಳ್ಳುತ್ತವೆ. ಸನಾತನವಾದ ಕ್ಷತ್ರಿಯರ ರಾಜಧರ್ಮವು ಇಲ್ಲವಾದರೆ ಸರ್ವ ಆಶ್ರಮ ಧರ್ಮಗಳೂ ನಾಶಗೊಂಡಂತೆಯೇ. ಸರ್ವ ತ್ಯಾಗಗಳೂ ರಾಜಧರ್ಮದಲ್ಲಿ ಕಾಣುತ್ತವೆ. ಸರ್ವ ದೀಕ್ಷೆಗಳು ರಾಜಧರ್ಮದಲ್ಲಿದೆ ಎಂದು ಹೇಳಿದೆ. ಸರ್ವ ಯೋಗಗಳೂ ರಾಜಧರ್ಮದಲ್ಲಿವೆಯೆಂದು ಹೇಳಿದೆ. ಸರ್ವ ಲೋಕಗಳೂ ರಾಜಧರ್ಮದಲ್ಲಿ ಸೇರಿಕೊಂಡಿವೆ. ಪ್ರಕೃತಿಯಲ್ಲಿ ಜೀವಿಗಳು ವಧಿಸಲ್ಪಡುವಾಗ ಧರ್ಮಾಶ್ರಿತರು ಹೇಗೆ ಪೀಡೆಗೊಳಗಾಗುತ್ತಾರೋ ಹಾಗೆ ರಾಜಧರ್ಮವಿಲ್ಲದ ಸರ್ವಾವಸ್ಥೆಯ ಸರ್ವ ಸ್ವಧರ್ಮಗಳೂ ಪೀಡೆಗೊಳಗಾಗುತ್ತವೆ.”

***

[1] ಗೋಭಿಲಸ್ಮೃತಿಯಲ್ಲಿ ಪೂರ್ಣಪಾತ್ರದಕ್ಷಿಣೆಯ ಪರಿಮಾಣವು ಈ ರೀತಿಯಲ್ಲಿದೆ: ಅಷ್ಟಮುಷ್ಟಿರ್ಭವೇತ್ಕುಂಚಃ ಕುಂಚಯೋಽಷ್ಟೌ ಚ ಪುಷ್ಕಲಂ| ಪುಷ್ಕಲಾನಿ ಚ ಚತ್ವಾರಿ ಪರಿಪೂರ್ಣಂ ವಿಧೀಯತೇ|| ಹೋಮಾಂತೇ ಪೂರ್ಣಪಾತ್ರಂ ಬ್ರಹ್ಮಣೇ ದದ್ಯಾತ್: ಅರ್ಥಾತ್, ೮ ಮುಷ್ಟಿಗಳು ಒಂದು ಕುಂಚಕ್ಕೆ ಸಮಾನ, ೮ ಕುಂಚಗಳು ಒಂದು ಪುಷ್ಕಲಕ್ಕೆ ಸಮಾನ, ಮತ್ತು ೪ ಪುಷ್ಕಲಗಳು ಒಂದು ಪೂರ್ಣಪಾತ್ರೆಗೆ ಸಮಾನ. ಅರ್ಥಾತ್, ೨೫೬ ಮುಷ್ಟಿಗಳಿಗೆ ಒಂದು ಪೂರ್ಣಪಾತ್ರವಾಗುತ್ತದೆ. ಹೋಮದ ಕೊನೆಯಲ್ಲಿ ಪೂರ್ಣಪಾತ್ರೆಯನ್ನು ಬ್ರಹ್ಮನಿಗೆ ಕೊಡಬೇಕು. ಆಪಸ್ತಂಬಗೃಹ್ಯಸೂತ್ರ ಪ್ರಕಾರ ಅಷ್ಟಮುಷ್ಟಿರ್ಭವೇತ್ಕಿಂಚಿತ್ಕಿಂಚಿಚ್ಚತ್ವಾರಿ ಪುಷ್ಕಲಂ| ಪುಷ್ಕಲಾನಿ ಚ ಚತ್ವಾರಿ ಪೂರ್ಣಪಾತ್ರಂ ಚ ಪ್ರಕ್ಷತೇ|| ಅಂದರೆ ೧೨೮ ಮುಷ್ಟಿಗಳಿಗೇ ಒಂದ ಪೂರ್ಣಪಾತ್ರೆಯಾಗುತ್ತದೆ.

[2] ಸ್ಕನ್ನ ಎಂದರೆ ಕೆಳಗೆ ಚಿಲ್ಲಿರುವ ಹೋಮ ದ್ರವ್ಯ. ಅಸ್ಕನ್ನ ಎಂದರೆ ಕೆಳಗೆ ಚೆಲ್ಲದೇ ಇದ್ದ ಹೋಮದ್ರವ್ಯ. ಮೊದಲಿನವನು ಎಂದರೆ ಅಗ್ನಿಯೂ, ಎರಡನೆಯವನು ಎಂದರೆ ಸೂರ್ಯನೂ ಎಂದು ಅರ್ಥ.

[3] ವಿವಾಹಿತನಾಗಿ ಔಪಸನಾಗ್ನಿಹೋಗ್ರವೈಶ್ವದೇವಾದಿಗಳನ್ನು ಮಾಡುವುದು.

[4] ಯಜನ, ಯಾಜನ, ಅಧ್ಯಯನ, ಅಧ್ಯಾಪನ, ದಾನ ಮತ್ತು ಪ್ರತಿಗ್ರಹಗಳೇ ಷಟ್ಕರ್ಮಗಳು.

The other spiritual discourses in Mahabharata (Kannada):

  1. ತೀರ್ಥಯಾತ್ರಾಮಹಾತ್ಮೆ: ಭೀಷ್ಮ-ಪುಲಸ್ತ್ಯರ ಸಂವಾದ
  2. ಧೌಮ್ಯನು ಯುಧಿಷ್ಠಿರನಿಗೆ ತೀರ್ಥಯಾತಾಕ್ಷೇತ್ರಗಳನ್ನು ವರ್ಣಿಸಿದುದು
  3. ಯುಧಿಷ್ಠಿರ-ಮಾರ್ಕಂಡೇಯ ಸಂವಾದ
  4. ಸರಸ್ವತೀಗೀತೆ
  5. ಕೌಶಿಕ-ಪತಿವ್ರತೆ-ಧರ್ಮವ್ಯಾಧ
  6. ವಿದುರನೀತಿ
  7. ಸನತ್ಸುಜಾತಿಯ
  8. ಭೌಮಗುಣಕಥನ
  9. ಶ್ರೀಮದ್ಭಗವದ್ಗೀತಾ
  10. ಸೇನಜಿತ್-ಬ್ರಾಹ್ಮಣ ಸಂವಾದ; ಪಿಂಗಲ ಗೀತೆ
  11. ಪಿತಾಪುತ್ರ ಸಂವಾದ
  12. ಶಮ್ಯಾಕಗೀತೆ
  13. ಮಂಕಿಗೀತೆ
  14. ಭೃಗು-ಭರದ್ವಾಜ ಸಂವಾದ
  15. ಸಾಂಖ್ಯ ಯೋಗ: ಯಾಜ್ಞವಲ್ಕ್ಯ-ಜನಕ ಸಂವಾದ

Continue reading...
 
Top